ರಫೇಲ್ ಒಪ್ಪಂದದ ವಿವರ ನೀಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶ

Update: 2018-10-10 06:34 GMT

ಹೊಸದಿಲ್ಲಿ, ಅ.10: ಫ್ರಾನ್ಸ್ ಕಂಪೆನಿ ಡಸೌಲ್ಟ್ ಏವಿಯೇಶನ್‌ನೊಂದಿಗೆ ರಫೆಲ್ ಫೈಟರ್ ಜೆಟ್ ವಿಮಾನ ಖರೀದಿ ಒಪ್ಪಂದದ ನಿರ್ಧಾರ ಪ್ರಕ್ರಿಯೆ ಕುರಿತ ಸಂಪೂರ್ಣ ವಿವರ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.

 ರಕ್ಷಣಾ ಪಡೆಗಳಿಗೆ ರಫೇಲ್ ಯುದ್ಧ ವಿಮಾನದ ಹೊಂದಾಣಿಕೆ ಕುರಿತು ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ಜಸ್ಟಿಸ್‌ಗಳಾದ ಎಸ್‌ಕೆ ಕೌಲ್ ಹಾಗೂ ಕೆಎಂ ಜೋಸೆಫ್ ಅವರಿದ್ದ ನ್ಯಾಯಪೀಠ ಸ್ಪಷ್ಟಪಡಿಸಿದೆ.

‘‘ನಾವು ಸರಕಾರಕ್ಕೆ ಯಾವುದೇ ನೋಟಿಸ್ ನೀಡುವುದಿಲ್ಲ. ರಫೇಲ್ ಒಪ್ಪಂದ ನಿರ್ಧಾರ ಪ್ರಕ್ರಿಯೆಯ ವೇಳೆ ನಡೆದ ನ್ಯಾಯಸಮ್ಮತತೆಯ ಬಗ್ಗೆ ತಿಳಿದುಕೊಳ್ಳಲು ನಾವು ಬಯಸುತ್ತಿದ್ದೇವೆ. ರಫೇಲ್ ಒಪ್ಪಂದದ ವೌಲ್ಯ ಹಾಗೂ ತಾಂತ್ರಿಕ ವಿವರಣೆಯ ಬಗ್ಗೆ ಮಾಹಿತಿಯನ್ನು ತಾವು ಕೇಳುತ್ತಿಲ್ಲ’’ ಎಂದು ನ್ಯಾಯಪೀಠ ತಿಳಿಸಿದೆ.

ಭಾರತವು ಫ್ರಾನ್ಸ್‌ನ ಡಸ್ಸೌಲ್ಟ್ ಏವಿಯೇಶನ್‌ನೊಂದಿಗೆ 36 ಯುದ್ದ ವಿಮಾನಗಳ ಖರೀದಿಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ 59,000 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಅರ್ಜಿದಾರ ಎಂಎಲ್ ಶರ್ಮಾ ವಾದಿಸಿದರು.

2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆಗಿನ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ಕಾ ಒಲಾಂಡ್ ಒಪ್ಪಂದವನ್ನು ಘೋಷಿಸಿದ್ದರು.

‘‘ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಇಂತಹ ಅರ್ಜಿಗಳಲ್ಲಿ ರಾಜಕೀಯ ಹಿತಾಸಕ್ತಿ ಅಡಗಿದೆ’’ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News