ಶ್ರೀಮಂತ ಒಎನ್ ಜಿಸಿ ಕಂಪೆನಿಯನ್ನು ಸಾಲದಲ್ಲಿ ಮುಳುಗಿಸುತ್ತಿರುವ ಮೋದಿ ಸರಕಾರ: ಕಾರ್ಮಿಕ ಸಂಘಟನೆಯ ಆರೋಪ

Update: 2018-10-10 07:56 GMT

ಹೊಸದಿಲ್ಲಿ, ಅ.10: ಕೇಂದ್ರದ ನರೇಂದ್ರ ಮೋದಿ ಸರಕಾರವು ಆಯಿಲ್ ಎಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಶನ್-ಒಎನ್‌ಜಿಸಿಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಹಾಗೂ ಅದರ ಆರ್ಥಿಕತೆಯ ವಿಚಾರದಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂದು ಸಂಸ್ಥೆಯ ಕಾರ್ಮಿಕ ಸಂಘಟನೆ ಎಂಪ್ಲಾಯೀಸ್ ಮಜ್ದೂರ್ ಸಭಾ ಆರೋಪಿಸಿದೆ. ಈ ಬಗ್ಗೆ ಪ್ರಧಾನಿ ಮೋದಿಗೆ ಸೆಪ್ಟೆಂಬರ್ 4ರಂದು ಪತ್ರ ಬರೆದಿರುವ ಸಭಾ, ಕೇಂದ್ರ ಸರಕಾರದ ನಿರಂತರ ಹಸ್ತಕ್ಷೇಪದಿಂದ, “ಶ್ರೀಮಂತ ಕಂಪೆನಿಯಾಗಿದ್ದ ಒಎನ್ ಜಿಸಿ ಇದೀಗ ಸಾಲದ ಹೊರೆಯ ಕಂಪೆನಿಯಾಗಿದೆ” ಎಂದು ತಿಳಿಸಲಾಗಿದೆ. 

ಯಾವುದೇ ಅರ್ಹತೆಯಿಲ್ಲದೇ ಇದ್ದರೂ ಬಿಜೆಪಿಯ ಸಂಬಿತ್ ಪಾತ್ರ ಅವರನ್ನು ಸಂಸ್ಥೆಯ ಸ್ವತಂತ್ರ ನಿರ್ದೇಶಕರನ್ನಾಗಿಸಿರುವುದು ಇದಕ್ಕೆ ಪುಷ್ಠಿ ನೀಡುತ್ತದೆ ಎಂದು ಹೇಳಿದೆ. ಪಾತ್ರ ಅವರ ನೇಮಕಾತಿಯನ್ನು ಅತ್ಯುನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿರುವುದನ್ನೂ ಸಭಾ ಉಲ್ಲೇಖಿಸಿದೆ.

ಕೇಂದ್ರದ ಬಿಜೆಪಿ ಸರಕಾರವು ಕ್ರೋನಿ ಕ್ಯಾಪಿಟಲಿಸಂನಲ್ಲಿ ತೊಡಗಿದ್ದು, ಹಲವು ಪ್ರಮುಖ ಕ್ಷೇತ್ರಗಳ ನಿಯಂತ್ರಣಗಳನ್ನು ಖಾಸಗಿಯವರಿಗೆ ಆಫರ್ ಮಾಡಿರುವುದು ರಾಷ್ಟ್ರೀಯ ಹಿತಾಸಕ್ತಿಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಪತ್ರದಲ್ಲಿ ಹೇಳಿದೆ.

ಕೇಂದ್ರ ಸರಕಾರ ಕೈಗೊಂಡ ಹಲವಾರು ಪ್ರಶ್ನಾರ್ಹ ಕ್ರಮಗಳನ್ನೂ ಸಭಾದ ನಾಲ್ಕು ಪುಟಗಳ ಪತ್ರ ಉಲ್ಲೇಖಿಸಿದೆ. ಕೃಷ್ಣ ಗೋದಾವರಿ ನದಿ ಪಾತ್ರ ಪ್ರದೇಶದಲ್ಲಿನ ಜಿಎಸ್‌ಪಿಸಿ ಅನಿಲ ಬ್ಲಾಕ್ ಗಳಲ್ಲಿ ಅನಿಲ ಪತ್ತೆಗಾಗಿ 10 ವರ್ಷಗಳಲ್ಲಿ ಬರೋಬ್ಬರಿ ರೂ.19,576 ಕೋಟಿ ವ್ಯಯಿಸಿ ಪ್ರಯೋಜನವಾಗದೇ ಇದ್ದರೂ ಆ ಸ್ಥಳವನ್ನು ರೂ.8,000 ಕೋಟಿಗೆ ಖರೀದಿಸುವಂತೆ ಸರಕಾರ ಒಎನ್‌ಜಿಸಿಗೆ 2016ರಲ್ಲಿ ಆದೇಶ ನೀಡಿದೆ. ಇದು ಜಿಎಸ್‌ಪಿಸಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ ಎಂದು ಪತ್ರ ಹೇಳಿದೆ.

ಹಿಂದುಸ್ಥಾನ್‌ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ಇದರಲ್ಲಿರುವ ಸರಕಾರದ ಸಂಪೂರ್ಣ 51.11% ಪಾಲನ್ನು, ಅದು ಕೂಡ ಎಚ್‌ಪಿಸಿಎಲ್‌ನ ಷೇರು ಬೆಲೆಗಿಂತ ಶೇ.14ರಷ್ಟು ಹೆಚ್ಚು ಮೊತ್ತಕ್ಕೆ ಖರೀದಿಸಲು ಒಎನ್‌ಜಿಸಿಗೆ ಹೇಳಿದ್ದು ತನ್ನ ವಿತ್ತೀಯ ಕೊರತೆಯನ್ನು ನೀಗಿಸಲು ಕೇಂದ್ರ ನಡೆಸಿದ ಹತಾಶ ಯತ್ನವಾಗಿದೆ ಎಂದೂ ಸಭಾ ದೂರಿದೆ

ಕೇಂದ್ರ ಸರಜಾರವು ಒಎನ್‌ಜಿಸಿ ಮತ್ತಿತರ ಸಾರ್ವಜನಿಕ ರಂಗದ ಸಂಸ್ಥೆಗಳಿಗೆ ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅನ್ವಯ ಹೆಚ್ಚಿನ ಹಣ ವ್ಯಯಿಸುವಂತೆಯೂ ಒತ್ತಾಯಿಸುತ್ತಿದೆ ಎಂದು ಪತ್ರ ದೂರಿದೆ.

ಒಓಎನ್‌ಜಿಸಿಗೆ ತನ್ನ ಬಗೆಗಿನ ನಿರ್ಧಾರಗಳನ್ನು ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಲು ಮೂರು ತಿಂಗಳುಗಳ ಕಾಲಾವಕಾಶವನ್ನು ಕೇಂದ್ರಕ್ಕೆ ನೀಡುವುದಾಗಿ, ಈ ಬೇಡಿಕೆಗೆ ಸ್ಪಂದಿಸದೇ ಇದ್ದಲ್ಲಿ ಕಾರ್ಮಿಕ ಸಂಘಟನೆ ತನಗೆ ಸೂಕ್ತವೆನಿಸಿದ ಕ್ರಮವನ್ನು ಯಾವುದೇ ನೊಟೀಸ್ ನೀಡದೆ ಕೈಗೊಳ್ಳುವುದಾಗಿಯೂ ಪತ್ರ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News