ಪಾಕಿಸ್ತಾನದ ಲೆಜೆಂಡ್ ದಾಖಲೆ ಸರಿಗಟ್ಟಲು ಕೊಹ್ಲಿ ಸಜ್ಜು

Update: 2018-10-10 09:12 GMT

ಹೈದರಾಬಾದ್, ಅ.10: ವೆಸ್ಟ್‌ಇಂಡೀಸ್ ವಿರುದ್ಧ ಶುಕ್ರವಾರ ಇಲ್ಲಿ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಭಾರತ ನಾಯಕ ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ.

ಕೊಹ್ಲಿ ಈಗಾಗಲೇ 24 ಶತಕಗಳನ್ನು ಸಿಡಿಸಿದ್ದಾರೆ. ಪಾಕಿಸ್ತಾನದ ಮಾಜಿ ನಾಯಕ ಇಂಝಮಾಮ್‌ವುಲ್ ಹಕ್ ಶತಕದ ದಾಖಲೆ ಸರಿಗಟ್ಟಲು ಇನ್ನೊಂದು ಶತಕದ ಅಗತ್ಯವಿದೆ. ಹಕ್ ವೃತ್ತಿಜೀವನದಲ್ಲಿ ಒಟ್ಟು 25 ಶತಕಗಳನ್ನು ಗಳಿಸಿದ್ದಾರೆ.

29ರ ಹರೆಯದ ಕೊಹ್ಲಿ ಈತನಕ 72 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 54.66ರ ಸರಾಸರಿಯಲ್ಲಿ 6,286 ರನ್ ಗಳಿಸಿದ್ದಾರೆ. ಹಕ್ 120 ಟೆಸ್ಟ್ ಪಂದ್ಯಗಳಲ್ಲಿ 49.60ರ ಸರಾಸರಿಯಲ್ಲಿ 8,830 ರನ್ ಕಲೆ ಹಾಕಿದ್ದಾರೆ.

ಒಟ್ಟು 24 ಶತಕಗಳನ್ನು ಸಿಡಿಸಿರುವ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದವರ ಪಟ್ಟಿಯಲ್ಲಿ 21ನೇ ಸ್ಥಾನದಲ್ಲಿದ್ದಾರೆ. ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 53.78ರ ಸರಾಸರಿಯಲ್ಲಿ 51 ಶತಕಗಳ ಸಹಿತ 15,921 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ 35 ಶತಕಗಳನ್ನು ಗಳಿಸಿದ್ದರೆ, 49 ಶತಕ ಸಿಡಿಸಿರುವ ಸಚಿನ್ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ 211 ಏಕದಿನ ಪಂದ್ಯಗಳಲ್ಲಿ 58.20ರ ಸರಾಸರಿಯಲ್ಲಿ 9,779 ರನ್ ಗಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News