ಕಾರ್ಮಿಕನಿಗೆ ಖುಲಾಯಿಸಿದ ಅದೃಷ್ಟ: ಮಣ್ಣಿನಡಿ ಸಿಕ್ಕಿತು 1.5 ಕೋಟಿ ರೂ. ಮೌಲ್ಯದ ವಜ್ರ

Update: 2018-10-10 11:10 GMT

ಭೋಪಾಲ್, ಅ.10: ಮಧ್ಯ ಪ್ರದೇಶದ ಪನ್ನಾದ ಆಳವಲ್ಲದ ವಜ್ರದ ಗಣಿಗಳ ಇತಿಹಾಸದಲ್ಲಿಯೇ ಎರಡನೇ ಅತ್ಯಂತ ದೊಡ್ಡ ವಜ್ರದ ಹರಳನ್ನು ಅಲ್ಲಿನ ದಿನಗೂಲಿ ಕಾರ್ಮಿಕ ಮೋತಿಲಾಲ್ ಪ್ರಜಾಪತಿಯ ಕುಟುಂಬ ಅಗೆದು ತೆಗೆದಿದೆ. ಈ ವಜ್ರದ ಹರಳು 42.9 ಕ್ಯಾರೆಟ್  ತೂಗುತ್ತಿದೆ. ಇದಕ್ಕಿಂತ ದೊಡ್ಡ ವಜ್ರದ ಹರಳು ಇಲ್ಲಿ 1961ರಲ್ಲಿ ಪತ್ತೆಯಾಗಿತ್ತಲ್ಲದೆ ಅದು 44.55 ಕ್ಯಾರೆಟ್ ತೂಗುತ್ತಿತ್ತು ಎಂದು ಪನ್ನಾದ ವಜ್ರ ಅಧಿಕಾರಿ ಸಂತೋಷ್ ಸಿಂಗ್ ಹೇಳಿದ್ದಾರೆ.

ಮೋತಿಲಾಲ್ ಗೆ ದೊರೆತ ವಜ್ರದ ಮೌಲ್ಯವನ್ನು 1.5 ಕೋಟಿ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದ್ದು ಸರಕಾರಿ ನಿಯಮಗಳಂತೆ ಅದನ್ನು ಸದ್ಯದಲ್ಲಿಯೇ ಹರಾಜು ಹಾಕಲಾಗುವುದು ಎಂದು ಅವರು  ಮಾಹಿತಿ ನೀಡಿದ್ದಾರೆ.

ತನಗೆ ದೊರೆತ ವಜ್ರದ ಹರಳುಗಳನ್ನು ತನ್ನ ಬೆರಳುಗಳೆಡೆಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಮಾಧ್ಯಮದ ಎದುರು ಪ್ರದರ್ಶಿಸಿದ  ಮೋತಿಲಾಲ್, ಇದರಿಂದ ತನ್ನ ಕುಟುಂಬದ ಬಡತನ ನೀಗುವುದೆಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾನೆ.

``ನಮ್ಮ ಕುಟುಂಬ ಸಾಲದಲ್ಲಿದೆ. ಇದೀಗ ಈ ಸಾಲದಿಂದ ಮುಕ್ತವಾಗಬಹುದು. ನನ್ನ ಇಬ್ಬರು ಮಕ್ಕಳೂ ಒಳ್ಳೆಯ ಶಾಲೆಯಲ್ಲಿ ಕಲಿಯಬಹುದು,'' ಎಂದು ಆತ ಸಂತೋಷದಿಂದ ಹೇಳುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News