ಫ್ರಿಜ್, ಬೈಕ್ ಸೇರಿ ಯಾವೆಲ್ಲ ಸೌಲಭ್ಯಗಳಿದ್ದರೆ ಕೇಂದ್ರದ ಆರೋಗ್ಯ ವಿಮೆ ಇಲ್ಲ ?: ಇಲ್ಲಿದೆ ವಿವರ

Update: 2018-10-10 17:26 GMT

ಹೊಸದಿಲ್ಲಿ, ಅ. 10: ಇತರ ಸೌಕರ್ಯಗಳೊಂದಿಗೆ ತಿಂಗಳಿಗೆ 10 ಸಾವಿರ ರೂಪಾಯಿಗೂ ಅಧಿಕ ವೇತನ, ಅಥವಾ ರೆಫ್ರಿಜರೇಟರ್, ಅಥವಾ ದ್ವಿಚಕ್ರ ವಾಹನ ಹೊಂದಿದ್ದರೆ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ವಿಮಾ ಯೋಜನೆ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಕಾರ್ಯಕ್ರಮದಿಂದ ಫಲಾನುಭವಿಗಳಲ್ಲದ ಹಲವರನ್ನು ಕೈಬಿಡಲು ಅಂತಹ ಕುಟುಂಬಗಳನ್ನು ಹೊರಗಿಡುವಂತೆ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ) ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಹೊಂದಿರುವ ರಾಷ್ಟ್ರೀಯ ಆರೋಗ್ಯ ಸಂಸ್ಥೆ (ಎನ್‌ಎಚ್‌ಎ) ರಾಜ್ಯ ಸರಕಾರಗಳಿಗೆ ಸೂಚಿಸಿದೆ.

ಫಲಾನುಭವಿಗಳಲ್ಲದವರಲ್ಲಿ ಪಿಎಂಜೆಎವೈ ಕಾರ್ಡ್ ಹೊಂದಿರುವ ಸಂಸದರು, ಶಾಸಕರು, ಅತ್ಯುನ್ನತ ಶ್ರೇಣಿಯ ಅಧಿಕಾರಿಗಳು ಒಳಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2011ರ ಸಾಮಾಜಿಕ ಆರ್ಥಿಕ ಹಾಗೂ ಜಾತಿ ಸಮೀಕ್ಷೆ (ಎಸ್‌ಇಸಿಸಿ) ಯಲ್ಲಿ ವಂಚಿತ ಎಂದು ಪರಿಗಣಿಸಲಾದ 10.74 ಕೋಟಿ ಕುಟುಂಬಗಳು ಈ ಯೋಜನೆಯಿಂದ ಲಾಭ ಪಡೆಯಲಿವೆ. 50 ಕೋಟಿ ಭಾರತೀಯರಿಗೆ ಪ್ರತಿ ವರ್ಷಕ್ಕೆ 5 ಲಕ್ಷ ರೂ. ಆರೋಗ್ಯ ಸೇವೆ ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ ಎಂದು ಕೇಂದ್ರ ಸರಕಾರ ಈ ಹಿಂದೆ ಹೇಳಿತ್ತು. ಎಸ್‌ಇಸಿಸಿ 2011ರ ಪ್ರಕಾರ 2.5 ಎಕರೆ ನೀರಾವರಿ ಭೂಮಿಯೊಂದಿಗೆ ನೀರಾವರಿ ಉಪಕರಣಗಳನ್ನು ಹೊಂದಿರುವ ಕುಟುಂಬ, ಅಥವಾ ಎರಡು ಅಥವಾ ಮೂರು ಬೆಳೆಗಳನ್ನು ತೆಗೆಯುವ 5 ಎಕರೆ ನೀರಾವರಿ ಭೂಮಿ ಒಳಗೊಂಡ ಕುಟುಂಬ, ಅಥವಾ ಕನಿಷ್ಠ 7.5 ಎಕರೆ ಭೂಮಿ ಹಾಗೂ ನೀರಾವರಿ ಸೌಲಭ್ಯ ಒಳಗೊಂಡ ಕುಟುಂಬವನ್ನು ಕೂಡ ಈ ಯೋಜನೆಯಿಂದ ಹೊರಗಿಡಲಾಗಿದೆ.

2011ರಲ್ಲಿ ಈ ಅಧ್ಯಯನ ನಡೆಸಲಾಗಿದೆ. ಹೆಚ್ಚುವರಿ ದತ್ತಾಂಶ ಸಂಗ್ರಹ ನಡೆಯುತ್ತಿದೆ. ಆದಾಗ್ಯೂ, ಅರ್ಹ ಫಲಾನುಭವಿಗಳ ಪಟ್ಟಿಯಲ್ಲಿ ಸೇರಿರುವ ಕೆಲವರು ಹೊರಬೀಳುವ ಸಾಧ್ಯತೆ ಇದೆ ಎಂದು ಎನ್‌ಎಚ್‌ಎ ರಾಜ್ಯಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ಹೇಳಿದೆ.

ಮೀನುಗಾರಿಕೆ ದೋಣಿ, ಲ್ಯಾಂಡ್‌ಲೈನ್ ಇರುವ ಕುಟುಂಬ ಕೂಡ ಪಟ್ಟಿಯಿಂದ ಹೊರಕ್ಕೆ

ದ್ವಿಚಕ್ರ, ತ್ರಿಚಕ್ರ ವಾಹನ, ಮೀನುಗಾರಿಕೆ ದೋಣಿ, ಯಾಂತ್ರೀಕೃತ ಮೂರು ಅಥವಾ ನಾಲ್ಕು ಚಕ್ರದ ಕೃಷಿ ಉಪಕರಣ, 50 ಸಾವಿರ ಮಿತಿಗಿಂತ ಮೇಲಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ, ಸರಕಾರಿ ಉದ್ಯೋಗಿಗಳಿರುವ, ಕೃಷಿಯೇತರ ಸಂಸ್ಥೆ, ಸ್ಥಿರ ದೂರವಾಣಿ ಹೊಂದಿರುವ, ಆದಾಯ ತೆರಿಗೆ, ವೃತ್ತಿ ತೆರಿಗೆ ಪಾವತಿಸುವ ಕುಟುಂಬವನ್ನು ಈ ಯೋಜನೆಯಿಂದ ಹೊರಗಿಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News