ಡಿ.3: ಕೆಸಿಎಫ್ ವತಿಯಿಂದ ಸಾಮೂಹಿಕ ವಿವಾಹ

Update: 2018-10-11 08:48 GMT

ಮಂಗಳೂರು, ಅ.11: ಅನಿವಾಸಿ ಕನ್ನಡಿಗರ ಅಂತಾರಾಷ್ಟ್ರೀಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ವತಿಯಿಂದ ಡಿ.3ರಂದು ಅಪರಾಹ್ನ 2 ಗಂಟೆಗೆ ನಗರದ ನೆಹರೂ ಮೈದಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಸಿಎಫ್ ಅಂತಾರಾಷ್ಟ್ರೀಯ ಮಂಡಳಿಯ ಸಂಘಟನಾ ಅಧ್ಯಕ್ಷ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ತಿಳಿಸಿದ್ದಾರೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ವರದಕ್ಷಿಣೆಯ ಸಮಸ್ಯೆ, ಮದುವೆಯ ಖರ್ಚುವೆಚ್ಚಗಳನ್ನು ಭರಿಸಲು ಅಸಾಧ್ಯ ಮತ್ತಿತ್ಯಾದಿ ಕಾರಣದಿಂದ ಪ್ರಾಯ ದಾಟಿಯೂ ಮದುವೆಯಾಗದೆ ಉಳಿದಿರುವ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳಿಗೆ 5 ಪವನ್ ಚಿನ್ನಾಭರಣ ಮತ್ತು ವಧು-ವರರಿಗೆ ಅಗತ್ಯವಾದ ವಿವಾಹ ಖರ್ಚುಗಳನ್ನು ನೀಡಲಾಗುವುದು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗಲು ಅಪೇಕ್ಷಿಸುವ ಅರ್ಹರು ಸ್ಥಳೀಯ ಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್ ಘಟಕಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು ಎಂದರು.

ಕೆಸಿಎಫ್ ಸೌದಿ ಅರೇಬಿಯಾ, ಯುಎಇ, ಕತರ್, ಕುವೈತ್,ಒಮನ್, ಬಹರೈನ್ ಮತ್ತಿತರ ರಾಷ್ಟ್ರಗಳಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮುಸ್ಲಿಂ ಕನ್ನಡಿಗ ಸದಸ್ಯರನ್ನು ಹೊಂದಿದೆ. ವಿದೇಶಗಳಲ್ಲಿ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಕೆಸಿಎಫ್ ತವರೂರಿನಲ್ಲಿ ನಡೆಸುವ ಮೊದಲ ಸಾರ್ವಜನಿಕ ಕಾರ್ಯಕ್ರಮ ಇದಾಗಿದೆ. ರಾಜ್ಯದಲ್ಲಿ ಮನೆ ನಿರ್ಮಾಣ, ಶಿಕ್ಷಣಕ್ಕೆ ನೆರವು, ಆರೋಗ್ಯ ಸೇವೆ, ಪ್ರಕೃತಿ ವಿಕೋಪದ ಸಂದರ್ಭ ನೆರವು ಇತ್ಯಾದಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ. ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಾಪುರ ನಾಯಕತ್ವ ನೀಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೆಸಿಎಫ್ ಸಾಮೂಹಿಕ ವಿವಾಹ ಸಮಿತಿಯ ಕಾರ್ಯಾಧ್ಯಕ್ಷ ಪಿ.ಪಿ. ಅಹ್ಮದ್ ಸಖಾಪಿ ಕಾಶಿಪಟ್ಣ, ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುರ್ರಝಾಕ್ ಹಾಜಿ ನಾಟೆಕಲ್, ಕೆಸಿಎಫ್ ಮಾಧ್ಯಮ ಸಂಚಾಲಕ ಹಾಫಿಳ್ ಯಅ್ಕೂಬ್ ಸಅದಿ ನಾವೂರು, ಎಸ್‌ವೈಎಸ್ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News