ವರ್ಷವಿಡೀ ವಿಮಾನದಲ್ಲಿ ಪ್ರಯಾಣಿಸುವವರಿಗೂ ಬಹುಶಃ ಈ ವಿಷಯಗಳು ಗೊತ್ತಿರಲಿಕ್ಕಿಲ್ಲ.....!

Update: 2018-10-11 10:47 GMT

ಅಪರೂಪಕ್ಕೆ ವಿಮಾನದಲ್ಲಿ ಪ್ರಯಾಣಿಸುವವರನ್ನು ಬಿಡಿ, ವರ್ಷವಿಡೀ ಹಾರಾಟ ನಡೆಸುವವರಿಗೂ ವಿಮಾನ ಪ್ರಯಾಣದಲ್ಲಿನ ಈ ವಿಷಯಗಳ ಬಗ್ಗೆ ತಿಳಿದಿರಲಿಕ್ಕಿಲ್ಲ. ಕೆಲವು ಮಾಹಿತಿಗಳಂತೂ, ಇವುಗಳನ್ನು ತಿಳಿದುಕೊಳ್ಳಬಾರದಿತ್ತು ಎಂಬ ಭಾವನೆಯನ್ನು ನಿಮ್ಮಲ್ಲಿ ಹುಟ್ಟಿಹಾಕಿದರೂ ಆಶ್ಚರ್ಯವಿಲ್ಲ.

ಉಸಿರಾಡುವ ಗಾಳಿ ಇಂಜಿನ್‌ನಿಂದ ಬರುತ್ತದೆ

ನೀವು ವಿಮಾನದಲ್ಲಿ ಉಸಿರಾಡುವ ಆಮ್ಲಜನಕವು ವಾಸ್ತವದಲ್ಲಿ ಇಂಜಿನ್‌ಗಳಿಂದ ಹೊರಸೂಸಲ್ಪಟ್ಟ ಒತ್ತಡೀಕೃತ ಗಾಳಿಯಾಗಿರುತ್ತದೆ. ಈ ಪೈಕಿ ಶೇ.25ರಷ್ಟು ಗಾಳಿ ಕಾಕ್‌ಪಿಟ್ ಸೇರಿದರೆ ಉಳಿದ ಗಾಳಿ ಕ್ಯಾಬಿನ್‌ನಲ್ಲಿ ಚಲಾವಣೆಯಾಗುತ್ತಿರುತ್ತದೆ. ಈ ಗಾಳಿಯು ವಿಮಾನದ ಮುಖ್ಯಭಾಗದ ಹಿಂಬದಿಯಲ್ಲಿರುವ ಸಣ್ಣ ತೂತಿನ ಮೂಲಕ ಹೊರಗೆ ಹೋಗುತ್ತದೆ.

ಟಾಯ್ಲೆಟ್‌ಗಳನ್ನು ಹೊರಗಿನಿಂದ ಅನ್‌ಲಾಕ್ ಮಾಡಬಹುದು

ವಿಮಾನದ ಸ್ಟಿವರ್ಡ್ ಇದನ್ನು ಮಾಡುವುದನ್ನು ನೀವು ಗಮನಿಸಿರಬಹುದು. ಹೆಚ್ಚಿನ ವಿಮಾನಗಳಲ್ಲಿ ಟಾಯ್ಲೆಟ್‌ಗಳ ಬಾಗಿಲುಗಳ ಮೇಲೆ ‘ನೋ ಸ್ಮೋಕಿಂಗ್’ ಫಲಕಗಳಿರುತ್ತವೆ. ಇದರ ಫ್ಲಾಪ್‌ನ್ನು ಎತ್ತಿ ಲಾಕ್‌ನ್ನು ಸರಿಸಿದರೆ ಬಾಗಿಲು ತೆರೆದುಕೊಳ್ಳುತ್ತದೆ.

ತುರ್ತು ತೆರವಿಗೆ ನಿಮ್ಮನ್ನು ಸಜ್ಜಾಗಿಸಲು ‘ಲೈಟ್ಸ್ ಆಫ್’

ರಾತ್ರಿಯ ವೇಳೆ ವಿಮಾನವು ಕೆಳಗಿಳಿಯುವಾಗ ಪೈಲಟ್‌ಗಳು ಒಳಗಿನ ದೀಪಗಳನ್ನು ಆರಿಸುತ್ತಾರೆ,ಆದರೆ ಇದು ನಿಮ್ಮ ನಿದ್ರೆಗೆ ಅನುಕೂಲ ಕಲ್ಪಿಸಲು ಅಲ್ಲ. ದೀಪಗಳನ್ನು ಮಂದಗೊಳಿಸುವುದರಿಂದ ಅಥವಾ ಆರಿಸುವುದರಿಂದ ಪ್ರಯಾಣಿಕರನ್ನು ತುರ್ತಾಗಿ ತೆರವುಗೊಳಿಸುವ ಸಂದರ್ಭ ಎದುರಾದರೆ ನಿಮ್ಮ ಕಣ್ಣುಗಳು ಈಗಾಗಲೇ ಕತ್ತಲೆಗೆ ಹೊಂದಿಕೊಂಡಿರುತ್ತವೆ ಮತ್ತು ಹೊರಗಿನದನ್ನು ಕಾಣುವುದು ನಿಮಗೆ ಸುಲಭವಾಗುತ್ತದೆ.

ಪ್ರತಿ ಯಾನದಲ್ಲಿಯೂ ದಿಂಬು ಮತ್ತು ಬ್ಲಾಂಕೆಟ್‌ಗಳನ್ನು ಸ್ವಚ್ಛಗೊಳಿಸಿರುವುದಿಲ್ಲ

ನೀವು ವಿಮಾನದಲ್ಲಿ ಆಹಾರ ಸೇವಿಸಲು ಅಳವಡಿಸಲಾಗಿರುವ ಟ್ರೇ ಟೇಬಲ್ ಕೀಟಾಣುಗಳ ಸ್ವರ್ಗವಾಗಿರುತ್ತದೆ ಎಂದರೆ ಬೆಚ್ಚಬೇಡಿ. ಅವುಗಳನ್ನು ಸ್ವಚ್ಛಗೊಳಿಸಲು ಮತ್ತು ಸೋಂಕು ಮುಕ್ತಗೊಳಿಸಲು ಮುಹೂರ್ತಗಳೇ ಬರಬೇಕು! ಪ್ರತಿ ಯಾನದ ಬಳಿಕ ಪ್ರಯಾಣಿಕರಿಗೆ ನೀಡಲಾದ ತಲೆದಿಂಬು ಮತ್ತು ಬ್ಲಾಂಕೆಟ್‌ಗಳನ್ನು ಶುಭ್ರಗೊಳಿಸಲಾಗುತ್ತದೆ ಎಂದು ನೀವು ಭಾವಿಸಿದ್ದರೆ ಅದು ನಿಮ್ಮ ತಪ್ಪು ಕಲ್ಪನೆಯಷ್ಟೇ.

ವಿಮಾನದಲ್ಲಿ ಪೈಲಟ್ ಚಕ್ರವರ್ತಿಯಿದ್ದಂತೆ

ವಿಮಾನದ ಬಾಗಿಲುಗಳನ್ನು ಮುಚ್ಚಿದ ಬಳಿಕ ಸಂಪೂರ್ಣ ಅಧಿಕಾರದೊಂದಿಗೆ ಪೈಲಟ್ ಅದರ ಅನಭಿಷಿಕ್ತ ಚಕ್ರವರ್ತಿಯಾಗುತ್ತಾನೆ. ಪ್ರಯಾಣಿಕರನ್ನು ಬಂಧನದದಲ್ಲಿರಿಸಲು,ದಂಡ ವಿಧಿಸಲು....ಅಷ್ಟೇ ಏಕೆ,ಪ್ರಯಾಣಕರು ಆಕಸ್ಮಿಕವಾಗಿ ಸಾಯುವ ಸ್ಥಿತಿಯಲ್ಲಿದ್ದರೆ ಅವರ ಅಂತಿಮ ಆಸೆಯನ್ನು ಪೂರೈಸುವ ಅಧಿಕಾರವನ್ನೂ ಪೈಲಟ್ ಹೊಂದಿರುತ್ತಾನೆ.

ಪ್ರಯಾಣಿಕರು ಲೈಫ್ ಜಾಕೆಟ್ ಕದಿಯುತ್ತಾರೆ

ಕೆಲವು ಪ್ರಯಾಣಿಕರು ತಮ್ಮ ವಿಮಾನಯಾನದ ಸ್ಮರಣಿಕೆಯಾಗಿ ಆಸನದ ಕೆಳಗೆ ಅಳವಡಿಸಲಾಗಿರುವ ಲೈಫ್ ಜಾಕೆಟ್‌ನ್ನು ಎಗರಿಸುವುದೂ ಉಂಟು. ಇದು ದಂಡನೀಯ ಅಪರಾಧವಾಗಿದೆ ಮತ್ತು ಅಪಾಯಕಾರಿಯೂ ಹೌದು, ಏಕೆಂದರೆ ವಿಮಾನಯಾನ ಸಂಸ್ಥೆಗಳು ಟೇಕ್‌ಆಫ್‌ಗೆ ಮುನ್ನ ಪ್ರತಿಯೊಂದೂ ಲೈಫ್ ಜಾಕೆಟ್‌ನ್ನು ಪರಿಶೀಲಿಸುವುದಿಲ್ಲ. ವಿಮಾನವೊಂದು ದಿನಕ್ಕೆ ಹಲವಾರು ಯಾನಗಳನ್ನು ಮಾಡುತ್ತದೆ ಮತ್ತು ಈ ವೇಳೆ ಪ್ರಯಾಣಿಕನೋರ್ವ ಲೈಫ್ ಜಾಕೆಟ್‌ನ್ನು ಎಗರಿಸಿದರೆ ಮುಂದಿನ ಯಾನಗಳಲ್ಲಿ ತನ್ನ ಆಸನದಲ್ಲಿ ಕುಳಿತುಕೊಳ್ಳುವ ವ್ಯಕ್ತಿಯ ಜೀವವನ್ನು ಅಪಾಯಕ್ಕೆ ತಳ್ಳಿದಂತಾಗುತ್ತದೆ.

ತುರ್ತು ನಿರ್ಗಮನ ದ್ವಾರದ ಎರಡೂ ಕಡೆಗಳಲ್ಲಿ ಹಿಡಿಕೆಗಳಿರುವುದು ಏಕೆ ಗೊತ್ತೇ?

ಈ ಹಿಡಿಕೆಗಳು ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರನ್ನು ತೆರವುಗೊಳಿಸುವಾಗ ವಿಮಾನದ ಸಿಬ್ಬಂದಿಗಳು ಹಿಡಿದುಕೊಳ್ಳಲು ಬಳಕೆಯಾಗುತ್ತವೆ. ತುರ್ತು ಸಂದರ್ಭಗಳಲ್ಲಿ ತೆರವುಗೊಳಿಸುವಾಗ ಪ್ರಯಾಣಿಕರು ತುಂಬ ಹೆದರಿಕೊಂಡಿರುತ್ತಾರೆ ಮತ್ತು ಅವರಿಗೆ ನೆರವಾಗಲು ದ್ವಾರದ ಎರಡೂ ಕಡೆಗಳಲ್ಲಿ ನಿಲ್ಲುವ ಸಿಬ್ಬಂದಿಗಳು ಹೊರಗೆ ಧಾವಿಸುವ ಪ್ರಯಾಣಕರ ಅವಸರದಿಂದಾಗಿ ಅತ್ತಿತ್ತ ತಳ್ಳಲ್ಪಡುತ್ತಾರೆ. ಕೆಲವೊಮ್ಮೆ ವಿಮಾನದಿಂದ ಹೊರಗೂ ನೂಕಲ್ಪಡುತ್ತಾರೆ. ಹೀಗಾಗಿ ಅವರು ದ್ವಾರದ ಬಳಿಯೇ ಗಟ್ಟಿಯಾಗಿ ನಿಂತುಕೊಂಡಿರಲು ಈ ಹಿಡಿಕೆಗಳು ಅವರಿಗೆ ನೆರವಾಗುತ್ತವೆ.

ಕೋಕ್‌ನ ಇಡೀ ಕ್ಯಾನ್‌ನ್ನೇ ಕೇಳಿ

ಸಾಮಾನ್ಯವಾಗಿ ಪ್ರಯಾಣಿಕರು ಗಗನಸಖಿಯ ಬಳಿ ಕೋಕ್ ಅಥವಾ ಜ್ಯೂಸ್ ಕೇಳಿದಾಗ ಅವರಿಗೆ ಪ್ಲಾಸ್ಟಿಕ್ ಗ್ಲಾಸ್‌ನಲ್ಲಿ ಅದನ್ನು ನೀಡಲಾಗುತ್ತದೆ ಮತ್ತು ಈ ಗ್ಲಾಸ್ ಕ್ಯಾನ್‌ಗಿಂತ ಪುಟ್ಟದಾಗಿರುತ್ತದೆ. ಪ್ರಯಾಣಿಕರು ಸಾಮಾನ್ಯವಾಗಿ ಅಷ್ಟರಿಂದಲೇ ತೃಪ್ತಿ ಪಟ್ಟುಕೊಳ್ಳುತ್ತಾರೆ ಮತ್ತು ವಿಮಾನಯಾನ ಸಂಸ್ಥೆಗೆ ಹಣದ ಉಳಿತಾಯವಾಗುತ್ತದೆ. ಆದರೆ ಇಡೀ ಕ್ಯಾನ್‌ನ್ನು ಕೇಳುವ ಹಕ್ಕು ನಿಮಗಿದೆ ಮತ್ತು ಗಗನಸಖಿ ಅದನ್ನು ನಿಮಗೆ ನೀಡಲೇಬೇಕು.

ಹಳದಿ ಮಾಸ್ಕಗಳು ಆಮ್ಲಜನಕ ನೀಡುವುದು ಕೇವಲ 15 ನಿಮಿಷಕ್ಕಾಗಿ ಒಮ್ಮೆ ನೀವು ಆಕ್ಸಿಜನ್ ಮಾಸ್ಕ್ ಧರಿಸಿಕೊಂಡರೆ ಅದು ಸುಮಾರು 15 ನಿಮಿಷಗಳ ಕಾಲ ನಿಮಗೆ ಉಸಿರಾಡಲು ಯೋಗ್ಯವಾದ ಗಾಳಿಯನ್ನು ನೀಡುತ್ತದೆ. ಪೈಲಟ್ ವಿಮಾನವನ್ನು ಸಾಕಷ್ಟು ಕೆಳಗೆ ಇಳಿಸಲು ಇಷ್ಟು ಸಮಯ ಸಾಕಾಗುತ್ತದೆ ಮತ್ತು ಈಗ ನೀವು ಮಾಸ್ಕ್ ಇಲ್ಲದೆ ಸಹಜವಾಗಿ ಉಸಿರಾಡಲು ಸಾಧ್ಯವಾಗುತ್ತದೆ.

ನೀವು ನಿದ್ರಿಸಬಹುದು ಅಥವಾ ಊಟ ಮಾಡಬಹುದು

ಕೆಲವೊಮ್ಮೆ ವಿಮಾನದ ಸಿಬ್ಬಂದಿಗಳು ಪ್ರಯಾಣಿಕರು ನಿದ್ರೆಗೆ ಜಾರಬಹುದೆಂಬ ನಿರೀಕ್ಷೆಯಿಂದ ಊಟ ಪೂರೈಸುವುದನ್ನು ವಿಳಂಬಿಸುತ್ತಾರೆ. ರಾತ್ರಿ ಯಾನಗಳಲ್ಲಿ ಪ್ರಯಾಣಿಕರು ನಿದ್ರೆಗೆ ಜಾರಬಹುದು ಮತ್ತು ತಮಗೆ ಕೆಲಸ ಕಡಿಮೆಯಾಗಬಹುದು ಎಂಬ ಆಸೆಯಿಂದ ಸಿಬ್ಬಂದಿಗಳು ಊಟ ಪೂರೈಸುವುದನ್ನು ಸಾಧ್ಯವಿದ್ದಷ್ಟು ಕೊನೆಯ ಗಳಿಗೆಯವರೆಗೆ ಮುಂದೂಡುತ್ತಿರುತ್ತಾರೆ.

ವಿಮಾನದ ಬಾಗಿಲುಗಳನ್ನು ಮುಚ್ಚಿದರೆ ಮಾತ್ರ ಸಿಬ್ಬಂದಿಗೆ ಹಣಪಾವತಿ

ಇಂತಹ ನಿಯಮ ಕೆಲವು ವಿಮಾನಯಾನ ಸಂಸ್ಥೆಗಳಲ್ಲಿ ಜಾರಿಯಲ್ಲಿದೆ. ಸಿಬ್ಬಂದಿಗಳು ನಿಲ್ದಾಣಕ್ಕೆ ಮರಳಿದ ತಕ್ಷಣ ಅವು ಹಣ ಪಾವತಿಸುವುದಿಲ್ಲ. ವಿಮಾನದ ದ್ವಾರಗಳೆಲ್ಲ ಮುಚ್ಚಲ್ಪಟ್ಟ ನಂತರವೇ ಅವರಿಗೆ ಹಣವನ್ನು ಪಾವತಿಸಲಾಗುತ್ತದೆ. ಇಬ್ಬರೂ ಪೈಲಟ್‌ಗಳಿಗೆಂದೂ ಒಂದೇ ಬಗೆಯ ಊಟ ನೀಡುವುದಿಲ್ಲ

ಇಬ್ಬರೂ ಪೈಲಟ್‌ಗಳು ಒಂದೇ ಸಮಯಕ್ಕೆ ಅಸ್ವಸ್ಥಗೊಳ್ಳಬಾರದು ಎಂಬ ಕಾರಣಕ್ಕೆ ಅವರಿಬ್ಬರಿಗೂ ಬೇರೆ ಬೇರೆ ಬಗೆಯ ಊಟಗಳನ್ನು ನೀಡಲಾಗುತ್ತದೆ ಮತ್ತು ಅವರು ಊಟವನ್ನು ಪರಸ್ಪರ ಹಂಚಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿರುತ್ತದೆ. ಹೀಗಾಗಿ ಫುಡ್ ಪಾಯಿಸನಿಂಗ್‌ನಿಂದ ಓರ್ವ ಪೈಲಟ್ ಅಸ್ವಸ್ಥಗೊಂಡರೂ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲು ಇನ್ನೋರ್ವ ಪೈಲಟ್ ಆರೋಗ್ಯದಿಂದಿರುತ್ತಾನೆ.

ಹೆಲೋ?

ಮೊಬೈಲ್ ಫೋನ್‌ಗಳ ವಿಷಯದಲ್ಲಿ ಪ್ರಯಾಣಿಕರಿಗಾಗಿರುವ ನಿಯಮಗಳನ್ನು ಕ್ಯಾಬಿನ್ ಸಿಬ್ಬಂದಿಗಳು ಅನುಸರಿಸುವುದಿಲ್ಲ. ತಮ್ಮ ವಿದ್ಯುನ್ಮಾನ ಸಾಧನಗಳನ್ನು ಸ್ವಿಚ್ ಆಫ್ ಮಾಡುವಂತೆ ಪ್ರಯಾಣಿಕರಿಗೆ ಸೂಚಿಸುವ ಸಿಬ್ಬಂದಿಗಳು ತಾವು ವಿಮಾನದ ಹಿಂಭಾಗಕ್ಕೆ ತೆರಳಿ ತಮ್ಮ ಮೊಬೈಲ್ ಫೋನ್‌ಗಳನ್ನು ಹೊರತೆಗೆದು ತಮ್ಮ ಕುಟುಂಬಗಳಿಗೆ,ಆಪ್ತರಿಗೆ ಟೆಕ್ಸ್ಟ್ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸುತ್ತಾರೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News