ಬಿಜೆಪಿಯೇತರ ಪಕ್ಷಗಳು ಒಟ್ಟಾಗುವುದು ಅನುಮಾನ: ಎಚ್.ಡಿ.ದೇವೇಗೌಡ

Update: 2018-10-11 12:46 GMT

ಬೆಂಗಳೂರು, ಅ.11: ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ದೇಶದಲ್ಲಿ ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರ ಹೊಮ್ಮುವುದು ಅನುಮಾನವೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದ ವ್ಯಕ್ತಪಡಿಸಿದ್ದಾರೆ.

ಗುರುವಾರ ಭಾರತೀಯ ಯಾತ್ರಾ ಕೇಂದ್ರ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಮಹಾತ್ಮ ಗಾಂಧಿ-150 ಮತ್ತು ಜಯಪ್ರಕಾಶ್ ನಾರಾಯಣ(ಜೆಪಿ) ಜನ್ಮದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ‘ಇಂದಿನ ವ್ಯವಸ್ಥೆ-ಅವಸ್ಥೆ’ ಒಂದು ಅವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಬಿಜೆಪಿ ಹಾಗೂ ಶಿವಸೇನೆಯನ್ನು ಹೊರತು ಪಡಿಸಿ ಕಾಂಗ್ರೆಸ್ ಒಳಗೊಂಡಂತೆ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಟ್ಟಾಗಿ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಬೇಕೆಂಬುದು ಮುಖ್ಯ ಉದ್ದೇಶವಾಗಿತ್ತು. ಇದರ ಭಾಗವಾಗಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ವೇಳೆ ಬಿಜೆಪಿಯೇತರ ಪಕ್ಷಗಳ ಮುಖಂಡರನ್ನು ಒಂದು ವೇದಿಕೆಯಲ್ಲಿ ಒಟ್ಟು ಮಾಡಲಾಗಿತ್ತು. ಆದರೆ, ಈ ಪಕ್ಷಗಳು ಒಟ್ಟಾಗಿ ಲೋಕಸಭಾ ಚುನಾವಣೆ ಎದುರಿಸಲಿದೆಯೆ ಎಂಬ ಅನುಮಾನ ಕಾಡುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಷ್ಟ್ರೀಯ ಪಕ್ಷಗಳ ಮಧ್ಯೆ ಪ್ರಾದೇಶಿಕ ಪಕ್ಷಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಇವೆಲ್ಲವನ್ನು ಮೀರಿ ಪರ್ಯಾಯ ರಾಜಕೀಯ ಶಕ್ತಿಯನ್ನು ರೂಪಿಸಲು ಒಟ್ಟಾಗುವುದು ದೊಡ್ಡ ಸವಾಲು. ಆದರೂ ನಿರಾಶರಾಗುವ ಅಗತ್ಯವಿಲ್ಲ. ಭಾರತೀಯ ಯಾಂತ್ರಾ ಕೇಂದ್ರ ಸೇರಿದಂತೆ ದೇಶದ ಹಲವಾರು ಸಮಾಜವಾದಿ ಶಕ್ತಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದು ಆಶಾದಾಯಕ ಬೆಳವಣಿಗೆಯೆಂದು ಅವರು ಹೇಳಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಇವತ್ತು ಮಹಾತ್ಮ ಗಾಂಧಿಯೆಂಬ ಮಾನವತಾವಾದಿಯ ವ್ಯಕ್ತಿಯನ್ನೆ ಮರೆಸುವಂತಹ ಕೆಲಸಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಸಮಾಜವಾದಿ ಚಿಂತಕರು ಗಾಂಧಿ, ಜಯಪ್ರಕಾಶ್‌ ನಾರಾಯಣ್, ಲೋಹಿಯಾ ಅಂತವರ ವ್ಯಕ್ತಿತ್ವಗಳನ್ನು ಯುವ ಜನತೆಗೆ ಪರಿಚಯಿಸುವಂತಹ ಕೆಲಸಕ್ಕೆ ಮುಂದಾಗುತ್ತಿರುವುದು ಅಭಿನಂದನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಎಚ್.ಡಿ.ದೇವೇಗೌಡ, ಜಯಪ್ರಕಾಶ್‌ ನಾರಾಯಣ್ ಸೇರಿದಂತೆ ಹಲವು ನಾಯಕರನ್ನು ಜೈಲಿಗೆ ಹಾಕಲಾಗಿತ್ತು. ಆ ಸಂದರ್ಭದಲ್ಲಿ ಯುವಕರಾಗಿದ್ದ ನಮಗೆ ರಕ್ತ ಕುದಿಯುತ್ತಿತ್ತು. ದೇಶಕ್ಕಾಗಿ ತ್ಯಾಗ ಮಾಡಲು ನಮ್ಮ ಮನಸು ಹಪಹಪಿಸುತ್ತಿತ್ತು. ಅಂತಹ ವಾತಾವರಣ ಈಗ ಬರಬೇಕಿದೆ ಎಂದು ತಿಳಿಸಿದರು.

ಈಗಿನ ಜನಪ್ರತಿನಿಧಿಗಳು ರಾಜಕೀಯವೆಂದರೆ ಕನಿಷ್ಟ ವಿಧಾನಪರಿಷತ್ ಇಲ್ಲವೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವಾದರು ಪಡೆದು ಸರಕಾರಿ ಕಾರಿನಲ್ಲಿ ತಿರುಗಾಡುವುದಕ್ಕೆ ಸೀಮಿತಿಗೊಳಿಸಿಕೊಂಡಿದ್ದಾರೆ. ಅಧಿಕಾರವಿದ್ದ ಮಾತ್ರಕ್ಕೆ ಯಾವುದೆ ವ್ಯಕ್ತಿಗೆ ಗೌರವ ಸಿಗುವುದಿಲ್ಲ. ಅಧಿಕಾರಕ್ಕಿಂತ ವ್ಯಕ್ತಿತ್ವವೆ ಮುಖ್ಯವೆಂದ ಮಹಾತ್ಮ ಗಾಂಧೀಜಿ, ಲೋಹಿಯಾ, ಜಯಪ್ರಕಾಶ್‌ ನಾರಾಯಣ್ ಬದುಕು ನಮಗೆ ದಾರಿ ದೀಪವಾಗಲಿ ಎಂದು ಅವರು ಆಶಿಸಿದರು.

ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಮಾತನಾಡಿ, ಮುಂದಿನ ತಲೆಮಾರಿಗೆ ಅನುಕೂಲವಾಗುವ ರೀತಿಯಲ್ಲಿ ಹಿರಿಯ ಜನಪ್ರತಿನಿಧಿಗಳು ತಮ್ಮ ರಾಜಕೀಯ ಅನುಭವಗಳನ್ನು ಪುಸ್ತಕದ ರೂಪದಲ್ಲಿ ದಾಖಲಿಸಬೇಕಿದೆ. ಇದರಿಂದ ರಾಜ್ಯದ ಧಿಕ್ಕುದೆಸೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಭವಿಷ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.     

ಮಹಾತ್ಮ ಗಾಂಧಿ, ಜಯಪ್ರಕಾಶ್ ನಾರಾಯಣ್, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ನಮ್ಮ ಹಿರಿಯ ನಾಯಕರು ಸಮಾಜದಲ್ಲಿರುವ ವ್ಯವಸ್ಥೆ-ಅವ್ಯವಸ್ಥೆಯ ಮಧ್ಯೆ ಗಟ್ಟಿಯಾಗಿ ನೆಲೆ ನಿಂತವರು. ಇವರೆಂದೂ ರಾಜಕೀಯ ಅಧಿಕಾರಕ್ಕಾಗಿ ಹೋರಾಟ ಮಾಡಿದವರಲ್ಲ. ಭಾರತೀಯ ಸಮಾಜವನ್ನು ಉನ್ನತಿಗೇರಿಸುವ ನಿಟ್ಟಿನಲ್ಲಿ ಪ್ರತಿ ಗಳಿಗೆಯೂ ಚಿಂತಿಸಿದವರು. ಅಂತವರ ಬದುಕು ನಮಗೆ ಆದರ್ಶವಾಗಲಿ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಗೆ ಭಾರತೀಯ ಯಾತ್ರಾ ಕೇಂದ್ರ ಕೊಡಮಾಡುವ ಜೆ.ಪಿ.ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಶಾಸಕ ವೈ.ಎಸ್‌ವಿ.ದತ್ತ ವಿರಚಿತ ಕೃತಿ ’ವರ್ತಮಾನ’ ಬಿಡುಗಡೆ ಮಾಡಲಾಯಿತು. ಮಾಜಿ ಶಾಸಕ ಬಿ.ಆರ್.ಪಾಟೀಲ್, ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ಸಂವಿಧಾನ ಬದ್ಧವಾಗಿ ರಚನೆಗೊಂಡಿರುವ ಕಾಂಗ್ರೆಸ್-ಜೆಡಿಎಸ್‌ನ ನೇತೃತ್ವದ ಸಮ್ಮಿಶ್ರ ಸರಕಾರಕ್ಕೆ ಕಾಟ ಕೊಡುವುದನ್ನು ಬಿಜೆಪಿ ನಿಲ್ಲಿಸಬೇಕು. ಆಡಳಿತ ಪಕ್ಷಕ್ಕೆ ಐದು ವರ್ಷ ಆಡಳಿತ ನಡೆಸಲು ಅವಕಾಶ ನೀಡಿ, ಯಡಿಯೂರಪ್ಪ ವಿರೋಧ ಪಕ್ಷದ ನಾಯಕನಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಲಿ’

-ಎಚ್.ಎಸ್.ದೊರೆಸ್ವಾಮಿ, ಹಿರಿಯ ಸ್ವಾತಂತ್ರ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News