ಬಟ್ಟೆ ವ್ಯಾಪಾರಿಯನ್ನು ಬೆದರಿಸಿ ಹಣ ವಸೂಲಿ ಆರೋಪ: ಸುದ್ದಿ ವಾಹಿನಿಯ ಮುಖ್ಯಸ್ಥ ಸೇರಿ 6 ಮಂದಿಯ ಬಂಧನ

Update: 2018-10-11 14:18 GMT

ಬೆಂಗಳೂರು, ಅ.11: ಬಟ್ಟೆ ವ್ಯಾಪಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಖಾಸಗಿ ಸುದ್ದಿವಾಹಿನಿಯೊಂದರ ಮುಖ್ಯಸ್ಥ ಸೇರಿ ಆರು ಜನರನ್ನು ಬಂಧಿಸಿರುವ ಬನಶಂಕರಿ ಠಾಣಾ ಪೊಲೀಸರು, ನಗದು ಸೇರಿದಂತೆ 1.60 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ನಾಗರಬಾವಿ ಪಾಪರೆಡ್ಡಿ, 2ನೇ ಬ್ಲಾಕ್, 2ನೆ ಬಿ ಮೈನ್ ನಿವಾಸಿ ಸಂತೋಷ್ ಸಿ (34), ಎನ್. ಅಶೋಕ್ ಕುಮಾರ್ (33), ಹೊಸಕೆರೆಹಳ್ಳಿ ರಾಘವೇಂದ್ರ ಸ್ವಾಮಿ ದೇವಸ್ಥಾನದ ಹತ್ತಿರ ನಿವಾಸಿ ವಿ.ಕೆ.ಮಹದೇವ (31), ಜಾಲಹಳ್ಳಿ ಗ್ರಾಮದ ನಿವಾಸಿ ರಾಕೇಶ್ ಗೌಡ (23), ಜಾಲಹಳ್ಳಿ ಗ್ರಾಮ ರಾಘವೇಂದ್ರಸ್ವಾಮಿ ದೇವಸ್ಥಾನದ ಸಮೀಪ ನಿವಾಸಿ ನವೀನ್ (21) ಹಾಗೂ ಕೆಂಗೇರಿಯ ಸೂಲಿಕೆರೆ ರಾಮಸಂದ್ರ ಹಳ್ಳಿ ನಿವಾಸಿ ಆನಂದ್ (34) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಬನಶಂಕರಿಯ ಕೆ.ಆರ್.ರಸ್ತೆಯ ಸ್ಟೈಲೊ ಬಟ್ಟೆ ಅಂಗಡಿಗೆ ಪ್ರಜಾಪ್ರತಿನಿಧಿ ಸುದ್ದಿ ವಾಹಿನಿ ಎಂದು ಪರಿಚಯ ಮಾಡಿಕೊಂಡು ಹೋಗಿ, ನಕಲಿ ಬಟ್ಟೆಗಳು ಇವೆ ಎಂದು ಹೆದರಿಸಿ ವೀಡಿಯೋ ಚಿತ್ರೀಕರಿಸಿ, ಈ ವೀಡಿಯೋವನ್ನು ಟಿವಿಯಲ್ಲಿ ಪ್ರಸಾರ ಮಾಡದಿರಬೇಕಾದರೆ ಹಣ ನೀಡಬೇಕು ಎಂದು ಮಾಲಕನಿಗೆ ಒತ್ತಾಯಿಸಿದ್ದರು. ಈ ವೇಳೆ ಅಂಗಡಿಯಲ್ಲಿದ್ದ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದರು ಎಂದು ಆರೋಪಿಸಿ ಠಾಣೆಗೆ ದೂರು ನೀಡಲಾಗಿತ್ತು.

ಈ ಸಂಬಂಧ ತನಿಖೆ ನಡೆಸಿ ಬನಶಂಕರಿ ಠಾಣಾ ಪೊಲೀಸರು, ಆರೋಪಿಗಳನ್ನು ಬಂಧಿಸಿ ಬಸವನಗುಡಿ, ಬಾಗಲಗುಂಟೆ ಮತ್ತು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿದ್ದ 4 ಪ್ರಕರಣಗಳಿಗೆ ಸಂಬಂಧಿಸಿ 95 ಸಾವಿರ ರೂ.ನಗದು, 65 ಸಾವಿರ ರೂ. ಮೌಲ್ಯದ ಬಟ್ಟೆಗಳು, ಕೃತ್ಯಕ್ಕೆ ಬಳಸಿದ 2 ಕಾರು, ವೀಡಿಯೋ ಕ್ಯಾಮರಾ, 3 ಕಂಪ್ಯೂಟರ್ ಸಿಪಿಯುಗಳನ್ನು ಜಪ್ತಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News