ಬಿಜೆಪಿಯವರು ಕೇಂದ್ರದಿಂದ ರೈತರ ಸಾಲದ ವಿವರ ಕೊಡಿಸಲಿ: ಕುಮಾರಸ್ವಾಮಿ

Update: 2018-10-11 14:58 GMT

ಬೆಂಗಳೂರು, ಅ. 11: ರೈತರ ಸಾಲಮನ್ನಾ ಸಂಬಂಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿದ ಸಾಲದ ಒಟ್ಟು ಮೊತ್ತದ ಬಗ್ಗೆ ಮಾಹಿತಿ ಕೋರಿದ್ದು, ಅವರು ಈವರೆಗೂ ಮಾಹಿತಿ ನೀಡಿಲ್ಲ. ಕೇಂದ್ರ ಸರಕಾರದಿಂದ ಬಿಜೆಪಿಯವರು ಮಾಹಿತಿ ಕೊಡಿಸಿದರೆ ಅವರಿಗೆ ಧನ್ಯವಾದ ಹೇಳ್ತೀನಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕುಗಳು ಕೇಂದ್ರ ಸರಕಾರದ ಅಧೀನದಲ್ಲಿವೆ. ಈ ವಿಚಾರದಲ್ಲಿ ಬಿಜೆಪಿ ಮುಖಂಡರು ರಾಜಕೀಯ ಮಾಡುವುದನ್ನು ಬಿಟ್ಟು ಸಾಲ ಪಡೆದ ರೈತರ ಮಾಹಿತಿ ಕೊಡಿಸಲಿ ಎಂದು ಸಲಹೆ ಮಾಡಿದರು.

ಕೃಷಿ ಸಾಲ ಪಡೆದ ಬಗ್ಗೆ ಮಾಹಿತಿ ಸಂಗ್ರಹಿಸಲು ರಾಜ್ಯ ಸರಕಾರ ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದು, ಎಲ್ಲ ಹಣವನ್ನು ರಾಜ್ಯ ಸರಕಾರ ಭರಿಸಲಿದೆ. ಕೇಂದ್ರದಿಂದ ಬಿಡಿಗಾಸು ಪಡೆದಿಲ್ಲ. ಬ್ಯಾಂಕ್ ಅಧಿಕಾರಿಗಳು ಕನಿಷ್ಟ ಸಾಲದ ಬಗ್ಗೆಯಾದರೂ ಮಾಹಿತಿ ನೀಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದ ಬಿಜೆಪಿ ಮುಖಂಡರು ರೈತರ ಸಾಲಮನ್ನಾ ಬಗ್ಗೆ ಕೇಂದ್ರದಿಂದ ಒಂದು ರೂಪಾಯಿ ಕೊಡಿಸುವ ಕೆಲಸವನ್ನು ಮಾಡಲಿಲ್ಲ. ಕೊನೆ ಪಕ್ಷ ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ, ಕೇಂದ್ರ ಸರಕಾರದಿಂದ ಸಾಲ ಪಡೆದ ರೈತರ ಮಾಹಿತಿಯನ್ನಾದರೂ ಕೊಡಿಸಲಿ ಎಂದು ಸೂಚಿಸಿದರು.

ರೈತರ ಪಡೆದ ಕೃಷಿ ಸಾಲವನ್ನು ನವೆಂಬರ್‌ನಿಂದ ಹಂತ-ಹಂತವಾಗಿ ಬ್ಯಾಂಕುಗಳಿಗೆ ಹಣ ಬಿಡುಗೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದ ಅವರು, ಈಗಾಗಲೇ 6,500 ಕೋಟಿ ರೂ.ಹಣಕಾಸಿನ ಹೊಂದಾಣಿಕೆ ಮಾಡಿಕೊಂಡಿದ್ದು, ರೈತರನ್ನು ಋಣಮುಕ್ತ ಮಾಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News