20ನೆ ರಾಷ್ಟ್ರಿಯ ಜಾನುವಾರು ಗಣತಿ ಪ್ರಾರಂಭ

Update: 2018-10-11 17:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.11: ರಾಷ್ಟ್ರಿಯ ಕಾರ್ಯಕ್ರಮವಾದ 20ನೆ ಜಾನುವಾರು ಗಣತಿಯನ್ನು ರಾಜ್ಯದಲ್ಲಿ ಒಂದನೇ ಅಕ್ಟೋಬರ್‌ನಿಂದ ಪ್ರಾರಂಭಿಸಲಾಗಿದ್ದು ಮುಂದಿನ ಮೂರು ತಿಂಗಳವರೆಗೆ ಜಾನುವಾರು ಗಣತಿ ನಡೆಯಲಿದೆ. 

ಈ ಗಣತಿ ಕಾರ್ಯದಲ್ಲಿ ಪ್ರತಿ ಜಾನುವಾರು, ಕುಕ್ಕುಟ ಹಾಗೂ ಪಶುಸಂಗೋಪನಾ ವಲಯದಲ್ಲಿ ಉಪಯೋಗಿಸಲ್ಪಡುವ ಉಪಕರಣಗಳು ಮತ್ತು ಮೀನುಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಇದರ ಸಲುವಾಗಿ ಗಣತಿದಾರರು ರಾಜ್ಯದಲ್ಲಿನ ಕುಟುಂಬ, ಉದ್ಯಮ, ಸಂಸ್ಥೆಗಳಿಗೆ ಭೇಟಿ ನೀಡಿದ ಸಮಯದಲ್ಲಿ ಗಣತಿದಾರರಿಗೆ ನಿಖರವಾದ ಹಾಗೂ ನಿರ್ಧಿಷ್ಟವಾದ ಸ್ವಷ್ಟ ಮಾಹಿತಿ ನೀಡಿ ಸಾರ್ವಜನಿಕರು ಸಹಕರಿಸಬೇಕೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯುಕ್ತರು ಮನವಿ ಮಾಡಿದ್ದಾರೆ.

ರೈತ ದೇಶದ ಬೆನ್ನೆಲುಬು, ರೈತನ ಬೆನ್ನಲುಬು ಕೃಷಿ, ಕೃಷಿಯ ಬೆನ್ನೆಲುಬು ಪಶುಸಂಗೋಪನೆ. ಪಶುಸಂಪತ್ತು ದೇಶದ ಸಂಪತ್ತು ಎಂಬ ನಾಣ್ಣುಡಿಯಂತೆ ಪಶು ಸಂಪತ್ತಿಗೆ ಪ್ರಾಚೀನ ಕಾಲದಿಂದಲೂ ಮಹತ್ತರವಾದ ಸ್ಥಾನ ದೊರೆತಿದೆ ಹಾಗೂ ಪಶುಸಂಗೋಪನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆಧುನಿಕ ಯುಗದಲ್ಲಿ ಜನಗಣತಿಯ ಕಾರ್ಯ ಪ್ರಾರಂಭಗೊಂಡಂತೆ ಜಾನುವಾರು ಗಣತಿ ಕಾರ್ಯವೂ ಸಹ ರಾಜರ ಕಾಲದಿಂದಲೂ ಪ್ರಚಲಿತಗೊಂಡಿರುತ್ತದೆ. ಜಾನುವಾರು ಗಣತಿಯನ್ನು ಪ್ರತಿ 5 ವರ್ಷಗಳಿಗೊಮ್ಮೆ ರಾಷ್ಟ್ರಮಟ್ಟದಲ್ಲಿ ಏಕಕಾಲದಲ್ಲಿ ನಡೆಸಲ್ಪಡುವ ಗಣತಿಯಾಗಿರುತ್ತದೆ.

1897ರಲ್ಲಿ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರು ಮೊದಲ ಬಾರಿಗೆ ಮೈಸೂರು ಸಂಸ್ಥಾನದಲ್ಲಿ ಜಾನುವಾರು ಗಣತಿಯನ್ನು ಪ್ರಾರಂಭಿಸಿದರು. ತದನಂತರ 5 ವರ್ಷಗಳಿಗೊಮ್ಮೆ ಈ ಜಾನುವಾರು ಗಣತಿಯು ನಡೆಯುತ್ತಾ ಬಂದು, ಇಡೀ ದೇಶದಾದ್ಯಂತ ಈ ಗಣತಿ ಕಾರ್ಯ ಪ್ರಾರಂಭವಾಗಿ ರಾಷ್ಟ್ರೀಯ ಕಾರ್ಯಕ್ರಮವೆನಿಸಿಕೊಂಡಿದೆ. ಈ ಬಾರಿಯ ಗಣತಿಯು 20ನೆ ರಾಷ್ಟ್ರಿಯ ಜಾನುವಾರು ಗಣತಿಯಾಗಿರುತ್ತದೆ. ಸದರಿ ಗಣತಿಯನ್ನು ಪ್ರಪ್ರಥಮವಾಗಿ ಭಾರತದಾದ್ಯಂತ ಟ್ಯಾಬ್ಲೆಟ್ ಆಧಾರಿತ ತಂತ್ರಾಂಶದ ಮೂಲಕ ಕೈಗೊಳ್ಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News