ಭಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸದಂತೆ ‘ಅಹಿಂಸಾ’ ಮನವಿ

Update: 2018-10-11 17:19 GMT

ಬೆಂಗಳೂರು, ಅ.11: ಭಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸದಂತೆ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ರಾಜ್ಯ ಸರಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿ, ಕಾರ್ಪೋರೇಷನ್‌ಗಳಲ್ಲಿನ ನಿವೃತ್ತ/ಸೇವಾನಿರತ ನೌಕರರ ಹಿತರಕ್ಷಣಾ ಒಕ್ಕೂಟ(ಅಹಿಂಸಾ)ವು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಗುರುವಾರ ಮನವಿ ಮಾಡಿದೆ.

ರಾಜ್ಯ ಸರಕಾರ ಕೇವಲ ಶೇ.18ರಷ್ಟು ಇರುವ ವರ್ಗದವರ ರಕ್ಷಣೆಗೆ ಮುಂದಾಗಿರುವುದು ತಪ್ಪು. ಈ ಸರಕಾರದಲ್ಲಿ ಶೇ.82ರಷ್ಟು ವರ್ಗದ ನೌಕರರು ಭಡ್ತಿಯಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 26 ವರ್ಷಗಳಿಂದ ಈ ಹೋರಾಟ ನಡೆದಿದೆ. ಹಾಗೂ ಲಕ್ಷಾಂತರ ನೌಕರರು ಭಡ್ತಿಯಿಂದ ವಂಚಿತರಾಗಿದ್ದಾರೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ನಾಗರಾಜು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್‌ನ ಆದೇಶ ಬಂದು 20 ತಿಂಗಳು ಗತಿಸಿದರೂ ಸಂಪೂರ್ಣವಾಗಿ ಆದೇಶವನ್ನು ಜಾರಿ ಮಾಡಿಲ್ಲ. ಈ ಕ್ರಮದಿಂದ ಶೇ.82ರಷ್ಟು ವರ್ಗಕ್ಕೆ ಘೋರ ಅನ್ಯಾಯವಾಗಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿನ ಆದೇಶದಂತೆ ಯಥಾಸ್ಥಿತಿ ಕಾಪಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಕೆಲವು ಪರಿಶಿಷ್ಟ ಜಾತಿ ಮತ್ತು ವರ್ಗದ ಸಚಿವರ ಒತ್ತಾಯದ ಮೇರೆಗೆ ಕಾಯ್ದೆಯನ್ನು ಜಾರಿ ಮಾಡಿದರೆ, ರಾಜ್ಯಾದ್ಯಂತ ಸುಮಾರು 10 ಲಕ್ಷ ನಿವೃತ್ತ ಹಾಗೂ ಕಾರ್ಯನಿರತ ನೌಕರರಿಂದ ಅಸಹಕಾರ ಚಳವಳಿ ಅನಿವಾರ್ಯವಾಗಬಹುದೆಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News