ಪಾಕ್‌ಗೆ ಗೆಲುವು ನಿರಾಕರಿಸಿದ ಖ್ವಾಜಾ

Update: 2018-10-11 18:33 GMT

ದುಬೈ, ಅ.11: ಪಾಕಿಸ್ತಾನ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೆಸ್ಟ್ ನ ಅಂತಿಮ ದಿನವಾದ ಗುರುವಾರ ಆಸ್ಟ್ರೇಲಿಯವನ್ನು ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ ಶತಕ , ಟ್ರಾವಿಸ್ ಹೆಡ್ ಮತ್ತು ಟಿಮ್ ಪೈನ್ ಅರ್ಧಶತಕಗಳ ಕೊಡುಗೆ ನೀಡುವ ಮೂಲಕ ಸೋಲಿನ ದವಡೆಯಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಉಸ್ಮಾನ್ ಖ್ವಾಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಗೆಲುವಿಗೆ 462 ರನ್‌ಗಳ ಸವಾಲನ್ನು ಪಡೆದಿದ್ದ ಆಸ್ಟ್ರೇಲಿಯ ತಂಡ ನಾಲ್ಕನೇ ದಿನ ಎರಡನೇ ಇನಿಂಗ್ಸ್‌ನಲ್ಲಿ ವೇಗಿ ಮುಹಮ್ಮದ್ ಅಬ್ಬಾಸ್ ದಾಳಿಗೆ ತತ್ತರಿಸಿದ್ದರೂ ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ ಮತ್ತು ಟ್ರಾವಿಸ್ ಹೆಡ್ ತಂಡವನ್ನು ಆಧರಿಸುವ ಪ್ರಯತ್ನ ಆರಂಭಿಸಿದ್ದರು.

 ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ತಂಡ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 136 ರನ್ ಗಳಿಸಿತ್ತು. ಅಂತಿಮ ದಿನ ಗೆಲುವಿಗೆ 326 ರನ್ ಗಳಿಸಬೇಕಾಗಿದ್ದ ಆಸ್ಟ್ರೇಲಿಯ 226 ರನ್ ಗಳಿಸಿತು. ಗೆಲ್ಲಲು ಸಾಧ್ಯವಾಗದಿದ್ದರೂ ಆಸ್ಟೇಲಿಯ ಸೋಲಿನ ದವಡೆಯಿಂದ ಪಾರಾಗಿದೆ. ಅರ್ಧ ಶತಕ ದಾಖಲಿಸಿದ್ದ ಆಸ್ಟ್ರೇಲಿಯ ತಂಡದ ಆರಂಭಿಕ ದಾಂಡಿಗ ಉಸ್ಮಾನ್ ಖ್ವಾಜಾ(50) ಮತ್ತು 34 ರನ್ ಗಳಿಸಿ ಔಟಾಗದೆ ಕ್ರೀಸ್‌ನಲ್ಲಿದ್ದ ಟ್ರಾವಿಸ್ ಹೆಡ್ ಬ್ಯಾಟಿಂಗ್‌ನ್ನು ಮುಂದುವರಿಸಿ 132 ರನ್‌ಗಳ ಜೊತೆಯಾಟ ನೀಡಿದರು. ಹೆಡ್ 72 ರನ್ ಗಳಿಸಿದ್ದಾಗ ಅವರನ್ನು ಹಫೀಝ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಖ್ವಾಜಾ 141 ರನ್‌ಗಳ ಕೊಡುಗೆ ನೀಡಿದರು. ಖ್ವಾಜಾ 34ನೇ ಟೆಸ್ಟ್‌ನಲ್ಲಿ 7ನೇ ಶತಕ ದಾಖಲಿಸಿದರು. ಇವರು ಔಟಾದ ಬಳಿಕ ನಾಯಕ ಮತ್ತು ವಿಕೆಟ್ ಕೀಪರ್ ಟಿಮ್ ಪೈನ್ ಔಟಾಗದೆ 61 ರನ್ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಆಸ್ಟ್ರೇಲಿಯ 139.5 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 362 ರನ್ ಗಳಿಸಿತು. ಪಾಕಿಸ್ತಾನದ ಯಾಸೀರ್ ಶಾ 114ಕ್ಕೆ 4, ಮುಹಮ್ಮದ್ ಅಬ್ಬಾಸ್ 56ಕ್ಕೆ 3 ಮತ್ತು ಹಫೀಝ್ 29ಕ್ಕೆ 1 ವಿಕೆಟ್ ಉಡಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News