ಮುಂಬೈನಲ್ಲಿ ಭಾರತ-ವಿಂಡೀಸ್ 4ನೇ ಏಕದಿನ ಪಂದ್ಯ

Update: 2018-10-11 18:53 GMT

  

ಮುಂಬೈ,ಅ.11: ಆಡಳಿತ ಸಮಿತಿಯ ಅಧಿಕಾರದ ಅವಧಿಯು ಮುಗಿದ ಪರಿಣಾಮವಾಗಿ ಹಣ ಪಾವತಿಸಲು ಸಮಸ್ಯೆಯನ್ನು ಎದುರಿಸುತ್ತಿದ್ದ ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ನೆರವಿಗೆ ಬಿಸಿಸಿಐ ಧಾವಿಸಿದ ಪರಿಣಾಮವಾಗಿ ಅಕ್ಟೋಬರ್ 29ರಂದು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯಲಿರುವ ನಾಲ್ಕನೇ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಈ ಮೊದಲು ನಿಗದಿಯಾದಂತೆ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಕೂಡಾ ಟೀಮ್ ಇಂಡಿಯಾ-ವೆಸ್ಟ್ ಇಂಡೀಸ್ ನಡುವಿನ ಟ್ವೆಂಟಿ -20 ಪಂದ್ಯದ ಆತಿಥ್ಯ ವಹಿಸಲು ಒಪ್ಪಿಕೊಂಡಿದ್ದು, ಇಲ್ಲಿನ ಈಡನ್ ಗಾರ್ಡನ್‌ನಲ್ಲಿ ನವೆಂಬರ್ 4ರಂದು ಮೊದಲ ಟಿ20 ಪಂದ್ಯ ನಡೆಯಲಿದೆ. ಇದೀಗ ಅಂತಿಮ ಟ್ವೆಂಟಿ -20ಪಂದ್ಯದ ಆತಿಥ್ಯವನ್ನು ವಹಿಸಲಿರುವ ತಮಿಳು ನಾಡು ಕ್ರಿಕೆಟ್ ಅಸೋಸಿಯೇಶನ್ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿದೆ. ನಾಲ್ಕನೇ ಏಕದಿನ ಪಂದ್ಯದ ಆತಿಥ್ಯ ವಹಿಸಬೇಕಿದ್ದ ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಆಡಳಿತ ಸಮಿತಿಯ ಅಧಿಕಾರದ ಅವಧಿ ಸೆಪ್ಟಂಬರ್ 15ರಂದು ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಹಣ ಪಾವತಿ ಮಾಡಲು ಸಾಧ್ಯವಾಗದೆ ಸಮಿತಿಯು ಬಿಸಿಸಿಐ ನೆರವು ಕೋರಿತ್ತು. ಬುಧವಾರ ಬಿಸಿಸಿಐಯ ಸಿಇಒ ರಾಹುಲ್ ಜೊಹ್ರಿ ಎಂಸಿಎಯ ಮನವಿಗೆ ಸ್ಪಂದಿಸುವ ಮೂಲಕ ಎಲ್ಲವೂ ಸುಖಾಂತ್ಯಗೊಂಡಿದೆ. ಅಕ್ಟೋಬರ್ 29ರಂದು ನಡೆಯಲಿರುವ ಪಂದ್ಯಕ್ಕೆ ಸಂಬಂಧಪಟ್ಟಂತೆ ಎಲ್ಲ ವ್ಯವಹಾರಗಳನ್ನು ಬಿಸಿಸಿಐ ನೋಡಿಕೊಳ್ಳಲಿದೆ. ಈ ವೇಳೆ ಮಾಡಲಾಗುವ ವೆಚ್ಚವನ್ನು ನಂತರ ಎಂಸಿಎ ಬಿಸಿಸಿಐಗೆ ಪಾವತಿಸಬೇಕು. ಈ ಕುರಿತು ಒಪ್ಪಂದವನ್ನು ಮಾಡಿಕೊಳ್ಳಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News