ಅಮಿತ್ ಶಾಗೆ ಟಿಆರ್‌ಎಸ್ ತಿರುಗೇಟು

Update: 2018-10-12 03:52 GMT

ಹೈದರಾಬಾದ್, ಅ.12: ಅವಧಿಗೆ ಮುನ್ನವೇ ವಿಧಾನಸಭೆ ವಿಸರ್ಜಿಸಿದ ತೆಲಂಗಾಣ ರಾಷ್ಟ್ರೀಯ ಸಮಿತಿಯ ಮುಖಂಡ ಕೆ.ಚಂದ್ರಶೇಖರ ರಾವ್ ಅವರ ನಡೆಯನ್ನು ಟೀಕಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ತೆಲಂಗಾಣ ರಾಷ್ಟ್ರೀಯ ಸಮಿತಿ ತಿರುಗೇಟು ನೀಡಿದೆ.

 "ಒಂದಲ್ಲ ಒಂದು ಬಾರಿ ಎಲ್ಲ ರಾಜಕೀಯ ಪಕ್ಷಗಳು ಅವಧಿಪೂರ್ವ ಚುನಾವಣೆಗೆ ಹೋಗಿವೆ. 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಕೂಡಾ ಇದನ್ನೇ ಮಾಡಿದ್ದರು. ಅವಧಿ ಪೂರ್ಣಗೊಳ್ಳಲು ಎಂಟು ತಿಂಗಳು ಇದ್ದಾಗ ಅವರೇಕೆ ಚುನಾವಣೆಗೆ ಹೋಗಬೇಕಿತ್ತು" ಎಂದು ಕರೀಂನಗರ ಲೋಕಸಭಾ ಸದಸ್ಯ ಬಿ.ವಿನೋದ್ ಕುಮಾರ್ ಕೆಣಕಿದ್ದಾರೆ.

ಲೋಕಸಭೆಯಲ್ಲಿ ಟಿಆರ್‌ಎಸ್‌ನ ಉಪನಾಯಕರೂ ಆಗಿರುವ ಕುಮಾರ್, "ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಎನ್.ಟಿ.ರಾಮರಾವ್ ಹಾಗೂ ಎನ್.ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ಮಂದಿ ಅವಧಿಪೂರ್ವ ಚುನಾವಣೆ ಎದುರಿಸಿದ್ದಾರೆ" ಎಂದು ವಿವರ ನೀಡಿದ್ದಾರೆ.

ಕರೀಂನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಶಾ, "ಉಸ್ತುವಾರಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ನರೇಂದ್ರ ಮೋದಿಯವರ ಬಗೆಗಿನ ಭಯದಿಂದ ಅವಧಿಪೂರ್ವವಾಗಿ ಚುನಾವಣೆ ಎದುರಿಸುತ್ತಿದ್ದಾರೆ" ಎಂದು ಲೇವಡಿ ಮಾಡಿದ್ದರು. ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 7ರಂದು ಮತದಾನ ನಡೆಯಲಿದೆ.

ಕಳೆದ ವಿಧಾನಸಭೆಯ ಅಧಿಕಾರಾವಧಿ ಮುಗಿಯಲು ಒಂಬತ್ತು ತಿಂಗಳು ಬಾಕಿ ಇರುವಾಗ ಅಂದರೆ ಸೆಪ್ಟೆಂಬರ್ 6ರಂದು ಕೆಸಿಆರ್ ವಿಧಾನಸಭೆ ವಿಸರ್ಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News