ಇಡಿಯ ಗೋದಿ ಒಳ್ಳೆಯದು, ಆದರೆ ಅದು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎನ್ನುವುದು ನಿಮಗೆ ಗೊತ್ತೇ?

Update: 2018-10-12 11:16 GMT

ಇಡಿಯ ಗೋದಿಯನ್ನು ನಿಜಕ್ಕೂ ಆರೋಗ್ಯಕರ ಎಂದು ಪರಿಗಣಿಸಲಾಗಿದೆ. ನಾರಿನ ಸಮೃದ್ಧ ಮೂಲವಾಗಿರುವ ಅದನ್ನು ಸಾಮಾನ್ಯವಾಗಿ ಬ್ರೆಡ್‌ನಂತಹ ಬೇಕರಿ ಆಹಾರ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತದೆ.

ಇಡಿಯ ಗೋದಿ ನಮ್ಮ ಆರೋಗ್ಯಕ್ಕೆ ಪೂರಕವಾಗಿರುವ ವಿವಿಧ ಪೌಷ್ಟಿಕಾಂಶಗಳನ್ನು ಒಳಗೊಂಡಿರುತ್ತದೆ. ಆದರೆ ಇಡಿಯ ಗೋದಿ ಗ್ಲುಟೆನ್‌ನ್ನೂ ಒಳಗೊಂಡಿರುತ್ತದೆ ಮತ್ತು ಅದರ ಅಲರ್ಜಿ ಹೊಂದಿದವರಿಗೆ ತೀವ್ರ ಸಮಸ್ಯೆಯನ್ನುಂಟು ಮಾಡಬಲ್ಲದು.

100 ಗ್ರಾಂ ಗೋದಿಹುಡಿಯು 340 ಕ್ಯಾಲರಿಗಳು,10.7 ಗ್ರಾಂ ನಾರು,72 ಗ್ರಾಂ ಕಾರ್ಬೊಹೈಡ್ರೇಟ್‌ಗಳು,13.2 ಗ್ರಾಂ ಪ್ರೋಟಿನ್‌ಗಳು,0.4 ಗ್ರಾಂ ಸಕ್ಕರೆ,2.5 ಗ್ರಾಂ ಕೊಬ್ಬು,0.07 ಗ್ರಾಂ ಒಮೆಗಾ-3 ಫ್ಯಾಟಿ ಆ್ಯಸಿಡ್‌ಗಳು ಮತ್ತು ಶೇ.11ರಷ್ಟು ನೀರನ್ನು ಒಳಗೊಂಡಿರುತ್ತದೆ.

ಇತ್ತೀಚಿನ ಅಧ್ಯಯನವೊಂದು ಇಡಿಯ ಗೋದಿಯು ಆರು ವಿಧಗಳಲ್ಲಿ ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತದೆ ಎನ್ನುವುದನ್ನು ಬೆಳಕಿಗೆ ತಂದಿದೆ. ಈ ಬಗ್ಗೆ ಮಾಹಿತಿಗಳಿಲ್ಲಿವೆ.....

► ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ

ಸಂಸ್ಕರಿತ ಧಾನ್ಯಗಳಿಂದ ತಯಾರಾದ ಬಿಳಿಯ ಬ್ರೆಡ್‌ನಂತಹ ಉತ್ಪನ್ನಗಳು ರಕ್ತದಲ್ಲಿಯ ಸಕ್ಕರೆ ಅಂಶವನ್ನು ಹೆಚ್ಚಿಸುತ್ತವೆ. ಬಿಳಿಯ ಬ್ರೆಡ್ ಬೇಗನೆ ಜೀರ್ಣಗೊಳ್ಳುತ್ತದೆ ಮತ್ತು ಇದರ ಪರಿಣಾಮವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ. ಇಡಿಯ ಧಾನ್ಯಗಳಿಂದ ತಯಾರಾದ ಉತ್ಪನ್ನಗಳು ನಾರಿನಂಶವನ್ನು ಒಳಗೊಂಡಿರುತ್ತವೆ. ನಾರು ಹೆಚ್ಚಿದ್ದಷ್ಟೂ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುವುದು ನಿಧಾನಗೊಳ್ಳುತ್ತದೆ. ಆದರೆ ಇಡಿಯ ಧಾನ್ಯಗಳು ಸೂಕ್ಷ್ಮಕಣಗಳಾಗಿ ಪರಿವರ್ತನೆಗೊಂಡಾಗ ಅವೂ ಕೂಡ ತ್ವರಿತವಾಗಿ ಪಚನಗೊಳ್ಳುತ್ತವೆ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ. ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದರೆ ಅದು ಮಧುಮೇಹ,ಬೊಜ್ಜು,ಹೃದಯರಕ್ತನಾಳ ಸಮಸ್ಯೆಯಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ.

► ಗ್ಲುಟೆನ್ ಸಂಬಂಧಿತ ಅಲರ್ಜಿಗೆ ಕಾರಣವಾಗುತ್ತದೆ

ಗ್ಲುಟೆನ್ ಗೋದಿ ಸೇರಿದಂತೆ ವಿವಿಧ ಧಾನ್ಯಗಳಲ್ಲಿರುವ ಪ್ರೋಟಿನ್‌ನ ರೂಪವಾಗಿದೆ. ಈ ಪ್ರೋಟಿನ್ ಗೋದಿಹುಡಿಗೆ ಸ್ಥಿತಿ ಸ್ಥಾಪಕತ್ವ ಗುಣವನ್ನು ನೀಡುತ್ತದೆ. ಗ್ಲುಟೆನ್ ಅಸಹಿಷ್ಣುತೆಯನ್ನು ಹೊಂದಿರುವ ಹಲವಾರು ಜನರಲ್ಲಿ ಯಾವುದೇ ರೂಪದಲ್ಲಿ ಗ್ಲುಟೆನ್ ಸೇವನೆಯು ಅತಿಸಾರ,ವಾಯು ಅಥವಾ ಹೊಟ್ಟೆನೋವಿನಂತಹ ಜೀರ್ಣ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಉದರ ರೋಗಗಳಂತಹ ಸ್ವರಕ್ಷಿತ ಕಾಯಿಲೆಯಿಂದ ಬಳಲುತ್ತಿರುವ ಕೆಲವರ ಸಣ್ಣಕರುಳು ಗ್ಲುಟೆನ್‌ಗೆ ಅತಿಯಾಗಿ ಸಂವೇದನೆ ಹೊಂದಿರುವುದರಿಂದ ಆಹಾರ ಜೀರ್ಣಗೊಳ್ಳುವುದು ಕಷ್ಟವಾಗುತ್ತದೆ.

►ಶರೀರದಿಂದ ಖನಿಜಾಂಶ ಹೀರಿಕೆಯನ್ನು ತಗ್ಗಿಸುತ್ತದೆ

ಸಸ್ಯಬೀಜಗಳು ಫೈಟಿಕ್ ಆ್ಯಸಿಡ್‌ನ್ನು ಒಳಗೊಂಡಿದ್ದು,ಇದು ಶರೀರದಿಂದ ಪ್ರಮುಖ ಖನಿಜಾಂಶಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಗೋದಿಯಲ್ಲಿರುವ ನಾರು ಶರೀರದಲ್ಲಿ ಸಂಗ್ರಹವಾಗಿರುವ ವಿಟಾಮಿನ್ ಡಿ ಅನ್ನು ದಹಿಸುವ ಮೂಲಕ ಅದರ ಕೊರತೆಗೆ ಕಾರಣವಾಗುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಸಂಸ್ಕರಿತ ಗೋದಿಗೆ ಹೋಲಿಸಿದರೆ ಇಡಿಯ ಗೋದಿ ಹೆಚ್ಚಿನ ಪ್ರಮಾಣದಲ್ಲಿ ಫೈಟಿಕ್ ಆ್ಯಸಿಡ್‌ನ್ನು ಒಳಗೊಂಡಿರುತ್ತದೆ ಮತ್ತು ಇದು ಕ್ಯಾಲ್ಸಿಯಂ,ಕಬ್ಬಿಣ,ಸತುವು ಮತ್ತು ಮ್ಯಾಗ್ನೀಷಿಯಂ ಇತ್ಯಾದಿ ಖನಿಜಗಳನ್ನು ಹೀರಿಕೊಳ್ಳುವ ನಮ್ಮ ಶರೀರದ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

►ಹೃದ್ರೋಗಗಳಿಗೆ ಕಾರಣವಾಗುತ್ತದೆ

ಕಣಗಳ ಗಾತ್ರಗಳನ್ನು ಅವಲಂಬಿಸಿ ಕೆಟ್ಟ ಕೊಲೆಸ್ಟ್ರಾಲ್(ಎಲ್‌ಡಿಎಲ್)ನಲ್ಲಿ ಬೇರೆ ಬೇರೆ ವಿಧಗಳಿವೆ. ಇವುಗಳನ್ನು ಪ್ಯಾಟರ್ನ್ ‘ಎ’ ಮತ್ತು ಪ್ಯಾಟರ್ನ್ ‘ಬಿ’ ಎಂದು ವ್ಯಾಖ್ಯಾನಿಸಬಹುದು. ಪ್ಯಾಟರ್ನ್ ‘ಎ’ಗೆ ಹೋಲಿಸಿದರೆ ಪ್ಯಾಟರ್ನ್ ‘ಬಿ’ ಕೊಲೆಸ್ಟ್ರಾಲ್‌ನ ಮಟ್ಟ ಅಧಿಕವಾಗಿರುವವರು ಹೃದ್ರೋಗಗಳಿಗೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಓಟ್ಸ್‌ನಂತಹ ಇಡಿಯ ಧಾನ್ಯದ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್‌ನ ಮಟ್ಟವನ್ನು ತಗ್ಗಿಸಿದರೆ ಇಡಿಯ ಗೋದಿಯ ಸೇವನೆಯು ಈ ಮಟ್ಟವನ್ನು ಹೆಚ್ಚಿಸುತ್ತದೆ ಎನ್ನುವುದು ಸಂಶೋಧನೆಗಳಿಂದ ಸಾಬೀತಾಗಿದೆ.

►ಮಿದುಳಿನ ಕಾಯಿಲೆಗಳೊಂದಿಗೆ ಗುರುತಿಸಿಕೊಂಡಿದೆ

ಗೋದಿಯ ಬಳಕೆಗೂ ಮಿದುಳು ರೋಗಗಳಿಗೂ ಸಂಬಂಧವಿದೆ ಎನ್ನುವುದನ್ನು ಸಂಶೋಧನೆಗಳು ಬಹಿರಂಗಗೊಳಿಸಿವೆ. ಈ ರೋಗಗಳು ಗ್ಲುಟೆನ್ ಸೇವನೆಯಿಂದ ಉಂಟಾಗುತ್ತವೆ. ಗ್ಲುಟೆನ್ ಅಟಾಕ್ಸಿಯಾ,ಸೆರೆಬಲರ್ ಅಟಾಕ್ಸಿಯಾ, ಸ್ಕಿರೆಫ್ರೇನಿಯಾ, ಆಟಿಸಂ ಮತ್ತು ಎಪಿಲೆಪ್ಸಿ ಗ್ಲುಟೆನ್ ಸಂಬಂಧಿತ ಮಿದುಳು ರೋಗಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News