ಎಸ್ಸಿ-ಎಸ್ಟಿ ಮುಂಭಡ್ತಿ ವಿಧೇಯಕ: ಸುಪ್ರೀಂ ಮೌಖಿಕ ಅಭಿಪ್ರಾಯ ಸ್ವಾಗತಾರ್ಹ; ಸಚಿವ ಕೃಷ್ಣಭೈರೇಗೌಡ

Update: 2018-10-12 14:08 GMT

ಬೆಂಗಳೂರು, ಅ.12: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಸರಕಾರಿ ನೌಕರರ ಮುಂಭಡ್ತಿ ವಿಧೇಯಕ ಜಾರಿಗೆ ಸಂಬಂಧಿಸಿದಂತೆ ಇದ್ದಂತಹ ಅಡ್ಡಿ ಆತಂಕಗಳು ನಿವಾರಣೆಯಾಗಿದ್ದು, ಇಂದು ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವ ಮೌಖಿಕ ಅಭಿಪ್ರಾಯ ಸ್ವಾಗತಾರ್ಹ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಹೇಳಿದರು.

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಕೆ. ಪವಿತ್ರ ಪ್ರಕರಣದ ಎಲ್ಲ ನ್ಯಾಯಾಂಗ ನಿಂದನೆಯ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ. ಅಲ್ಲದೆ, ಕಾಯ್ದೆ ಜಾರಿ ಮಾಡದಂತೆ ಮೌಖಿಕವಾಗಿ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ ಎಂದರು.

ಸರಕಾರಿ ಜಾರಿಗೆ ತಂದಿರುವ ಕಾಯ್ದೆಯನ್ನು ಜಾರಿಗೊಳಿಸಲು ಯಾವುದೇ ಅಡೆತಡೆಯಿಲ್ಲ. ಅಕ್ಟೋಬರ್ 23ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದ್ದು, ಅಂತಿಮ ತೀರ್ಪು ಬಂದ ಬಳಿಕ ಸಚಿವ ಸಂಪುಟದಲ್ಲಿ ಈ ವಿಷಯವನ್ನು ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕೃಷ್ಣಭೈರೇಗೌಡ ಹೇಳಿದರು.

ಇದೇ ವೇಳೆ ವಿಧಾನಸೌಧದಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಲು ಸರಕಾರ ಯತ್ನಿಸುತ್ತಿರುವ ವಿಚಾರದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಜೊತೆ ಈ ಸಂಬಂಧ ಚರ್ಚಿಸಿ ಗೊಂದಲವನ್ನು ಬಗೆಹರಿಸಲಾಗುವುದು. ಯಾರ ಹಕ್ಕನ್ನೂ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಸರಕಾರ ಮತ್ತು ಮಾಧ್ಯಮಗಳು ಪರಸ್ಪರ ಜೊತೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News