ಶ್ರೀರಾಮುಲು ದೊಡ್ಡವರು, ನಾನು ಸಾಮಾನ್ಯ ಕಾರ್ಯಕರ್ತ: ಡಿ.ಕೆ.ಶಿವಕುಮಾರ್

Update: 2018-10-12 15:16 GMT

ಬೆಂಗಳೂರು, ಅ.12: 'ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಪ್ರಭಾವಿ ಸಚಿವರಾಗಿರಬಹುದು. ಅವರ ಬಳಿ ಇಡೀ ಸರಕಾರವೇ ಇರಬಹುದು. ಆದರೂ, ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವುದು ನಾವೇ' ಎಂದು ಬಿಜೆಪಿ ಶಾಸಕ ಬಿ.ಶ್ರೀರಾಮುಲು ನೀಡಿರುವ ಹೇಳಿಕೆಗೆ ಸಚಿವ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಶಕ್ತಿಯುತ ನಾಯಕ. ಅವರು ಬಹಳ ದೊಡ್ಡವರು. ನಾವೆಲ್ಲ ನಮ್ಮ ಪಕ್ಷದ ಸಾಮಾನ್ಯ ಕಾರ್ಯಕರ್ತರಷ್ಟೇ. ಈ ಚುನಾವಣೆಯಲ್ಲಿ ಅವರೇ ಗೆಲ್ಲಲಿ ಪಾಪ ಎಂದು ವ್ಯಂಗ್ಯವಾಡಿದರು.

ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಈಗ ಶುಭ ಘಳಿಗೆ ಕೂಡಿ ಬಂದಿದೆ. ಗುರು ಇವತ್ತಿನಿಂದ ಬದಲಾಗಿದ್ದಾನೆ. ಎಲ್ಲ ಒಳ್ಳೆಯದಾಗುತ್ತದೆ ಎಂದು ಶಿವಕುಮಾರ್ ತಿಳಿಸಿದರು.

ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಉಪ ಚುನಾವಣೆ ಎದುರಿಸಲಿದೆ. ಯಾರೇ ಅಭ್ಯರ್ಥಿಯಾಗಿ ಆಯ್ಕೆಯಾದರೂ ಎಲ್ಲ ಶಾಸಕರು ಅವರ ಪರವಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ ಎಂದು ಅವರು ಹೇಳಿದರು.

ಪಕ್ಷಕ್ಕಾಗಿ ಕೆಲ ನಿರ್ಧಾರಗಳನ್ನು ಗೌರವಿಸಬೇಕು: ರಾಮನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನಮ್ಮಷ್ಟು ಹೋರಾಟ ಮಾಡಿದವರು ಬೇರೆ ಯಾರೂ ಇಲ್ಲ ಎಂದರು.

ಈ ಹೋರಾಟದಲ್ಲಿ ಕೆಲವು ಬಾರಿ ಸೋತಿದ್ದೇವೆ, ಕೆಲವು ಬಾರಿ ಗೆದ್ದಿದ್ದೇವೆ. ಪಕ್ಷದ ಹಿತದೃಷ್ಟಿಯಿಂದ ಎಷ್ಟೇ ನೋವಾದರೂ ಕೆಲ ನಿರ್ಧಾರಗಳನ್ನು ನಾವು ಗೌರವಿಸಬೇಕಾಗುತ್ತದೆ. ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಪಕ್ಷದ ನಿಷ್ಠಾವಂತ ನಾಯಕ. ಆದರೆ, ಅವರ ಮಗ ಚಂದ್ರಶೇಖರ್ ನಮ್ಮ ಬಳಿ ಒಂದು ಮಾತು ಕೇಳದೆ ಬಿಜೆಪಿಗೆ ಹೋಗಿದ್ದು ನಮಗೆ ನೋವು ತಂದಿದೆ ಎಂದು ಅವರು ಹೇಳಿದರು.

ಮೂವರು ಅಭ್ಯರ್ಥಿಗಳು ಫೈನಲ್: ದೇವೇಂದ್ರಪ್ಪ, ಶಾಸಕ ಬಿ.ನಾಗೇಂದ್ರ ಸಹೋದರ ವೆಂಕಟೇಶ್‌ ಪ್ರಸಾದ್ ಹಾಗೂ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಹೆಸರು ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಇವರ ಪೈಕಿ ಒಬ್ಬರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News