ಕುಡಿಯುವ ನೀರು-ಮೇವಿಗೆ ತೊಂದರೆಯಾಗದಂತೆ ಕ್ರಮ: ಜಿಲ್ಲಾಧಿಕಾರಿಗಳೊಂದಿಗೆ ಸಚಿವ ದೇಶಪಾಂಡೆ ವಿಡಿಯೋ ಕಾನ್ಫರೆನ್ಸ್

Update: 2018-10-12 15:17 GMT

ಬೆಂಗಳೂರು, ಅ.12: ರಾಜ್ಯದ ಹೆಚ್ಚಿನ ಭಾಗದಲ್ಲಿ ಬರಗಾಲವಿರುವ ಹಿನ್ನೆಲೆಯಲ್ಲಿ ಎಲ್ಲೂ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಆಯಾ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಶುಕ್ರವಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಕುಡಿಯುವ ನೀರು ಮತ್ತು ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಲು ಹಣಕಾಸಿನ ಕೊರತೆ ಇಲ್ಲ. ಬರಪೀಡಿತವೆಂದು ಈಗಾಗಲೇ ಘೋಷಿಸಿರುವ 86 ತಾಲ್ಲೂಕುಗಳಿಗೂ ಕುಡಿಯುವ ನೀರಿನ ಅಗತ್ಯವನ್ನು ಪೂರೈಸಲು ತಲಾ 50 ಲಕ್ಷ ರೂ.ಬಿಡುಗಡೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಬರಪೀಡಿತ ತಾಲೂಕುಗಳಲ್ಲಿ ದನಕರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಲು ಪಶುಸಂಗೋಪನಾ ಇಲಾಖೆಗೆ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಗತ್ಯ ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳು ಗೋಶಾಲೆಯನ್ನು ತೆರೆಯಲು ಅವಕಾಶವಿದೆ ಎಂದು ಅವರು ವಿವರಿಸಿದರು.

ಕುಡಿಯುವ ನೀರಿನ ಕೊರತೆ ಇರುವೆಡೆ ಟ್ಯಾಂಕರ್ ಮೂಲಕ, ಇಲ್ಲವೇ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಂಡು ನೀರನ್ನು ಪೂರೈಸಬೇಕು. ಇದಕ್ಕಾಗಿ, ಖಾಸಗಿ ಕೊಳವೆ ಬಾವಿಗಳ ಮಾಲಕರಿಗೆ ಹಣಪಾವತಿಸಲಾಗುವುದು. ಸದ್ಯಕ್ಕೆ ರಾಜ್ಯದ 13 ಜಿಲ್ಲೆಗಳ 352 ಹಳ್ಳಿಗಳಿಗೆ ಟ್ಯಾಂಕರ್ ಮತ್ತು ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ದೇಶಪಾಂಡೆ ಹೇಳಿದರು.

ಇನ್ನುಳಿದಂತೆ, ಎಲ್ಲ ಜಿಲ್ಲಾಧಿಕಾರಿಗಳೂ ಬೆಳೆ ನಷ್ಟ ಕುರಿತು ತಮ್ಮ ಅಂತಿಮ ವರದಿಯನ್ನು ಇನ್ನು ಒಂದು ವಾರದಲ್ಲಿ ಸಲ್ಲಿಸಬೇಕು. ಈ ವರದಿ ಬಂದ ಕೂಡಲೇ ಈ ಸಂಬಂಧ ಕೇಂದ್ರಸರಕಾರಕ್ಕೆ ವರದಿ ಸಲ್ಲಿಸಿ, ಪರಿಹಾರ ಕೋರಲಾಗುವುದು ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಈ ವರ್ಷ ಮಳೆಯ ಆರ್ಭಟಕ್ಕೆ ಸಿಲುಕಿ 188 ಮಂದಿ ಅಸುನೀಗಿದ್ದು, 18 ಮಂದಿ ಗಾಯಗೊಂಡಿದ್ದಾರೆ. ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ಈ ಜೀವಹಾನಿ ಪ್ರಕರಣಗಳಿಗೆ ತಲಾ 2 ಲಕ್ಷರೂ.ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರವನ್ನು(ಒಟ್ಟು 3.85 ಕೋಟಿರೂ.) ಬಿಡುಗಡೆ ಮಾಡಲಾಗಿದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರಮೋದಿಯನ್ನು ರಾಜ್ಯದ ನಿಯೋಗ ಭೇಟಿ ಮಾಡಿದ ಸಂದರ್ಭದಲ್ಲಿ ಪರಿಹಾರ ಕೋರಿ ಮನವಿ ಸಲ್ಲಿಸಲಾಗಿತ್ತು ಎಂದು ದೇಶಪಾಂಡೆ ಇದೇ ಸಂದರ್ಭದಲ್ಲಿ ತಿಳಿಸಿದರು.

ಮಳೆಯಿಂದಾಗಿ ಜೀವ ಹಾನಿ ಆದ 188 ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಎಸ್‌ಡಿಆರ್‌ಎಫ್ ನಡಿ ತಲಾ 4 ಲಕ್ಷರೂ. ಮತ್ತು ಮುಖ್ಯಮಂತ್ರಿಗಳ ಪರಿಹಾರನಿಧಿಯಡಿ ತಲಾ 1 ಲಕ್ಷರೂ.(ಒಟ್ಟು 5 ಲಕ್ಷರೂ.) ಪರಿಹಾರ ವಿತರಿಸಿದೆ. ಈಗ ಕೇಂದ್ರ ಸರಕಾರವು ತಲಾ 2 ಲಕ್ಷ ರೂ.ಕೊಡುತ್ತಿರುವುದರಿಂದ ಈ ಪರಿಹಾರ ಮೊತ್ತ ತಲಾ 7 ಲಕ್ಷ ರೂ. ಆದಂತಾಗಿದೆ ಎಂದು ದೇಶಪಾಂಡೆ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News