ಬರಿಗೈಯಲ್ಲೇ ಮಲದ ಗುಂಡಿ ಸ್ವಚ್ಛಗೊಳಿಸಿದ ಕಾರ್ಮಿಕರು: ಆರೋಪ

Update: 2018-10-12 15:27 GMT

ಬೆಂಗಳೂರು, ಅ.12: ಮಲದ ಗುಂಡಿಗೆ ಇಳಿಯುವುದೇ ಆಗಲಿ, ಬರಿಗೈಯಲ್ಲಿ ಕಾರ್ಮಿಕರು ಈ ಕೆಲಸ ಮಾಡುವುದೇ ಆಗಲಿ, ಸುಪ್ರೀಂ ಕೋರ್ಟ್ ನಿಷೇಧಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ, ಆದೇಶ ಪಾಲನೆ ಮಾಡಬೇಕಾದ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲೇ ಅದು ಮರೀಚಿಕೆಯಾಗಿದೆ.

ಬಿಬಿಎಂಪಿ, ಜಲಮಂಡಳಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಈ ಅನಿಷ್ಟ ಪದ್ಧತಿ ಹೋಗಲಾಡಿಸಿ, ಸಫಾಯಿ ಕರ್ಮಚಾರಿಗಳಿಗೆ ಸೂಕ್ತ ತಿಳುವಳಿಕೆ ನೀಡಿದ್ದೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ, ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಕಾರ್ಮಿಕರು ಬರಿಗೈಯಲ್ಲಿ ಮಲ ಗುಂಡಿಯನ್ನು ಸ್ವಚ್ಛ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಶುಕ್ರವಾರ ಸಂಜೆ ಇಬ್ಬರು ಕಾರ್ಮಿಕರು ಮಲದ ಗುಂಡಿಯನ್ನು ಬರೀ ಕೈಯಲ್ಲಿ ಸ್ವಚ್ಛಗೊಳಿಸುತ್ತಿರುವ ದೃಶ್ಯ ಕಂಡು ಬಂದಿದೆ. ದಿನಕ್ಕೆ ಸಾವಿರಾರು ಜನರು ಓಡಾಡುವ ಹಾಗೂ ಅಧಿಕಾರಿಗಳು, ಜನಪ್ರತಿನಿಧಿಗಳು ಓಡಾಡುವ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಯೇ ಇಂತಹ ಪ್ರಕರಣ ಬಯಲಿಗೆ ಬಂದಿದೆ.

ಇನ್ನು, ಗುತ್ತಿಗೆದಾರರು ಕಾರ್ಮಿಕರಿಂದ ಯಾವುದೇ ಉಪಕರಣ ನೀಡದೆ, ಕೈಯಿಂದಲೇ ಕೆಲಸ ಮಾಡಿಸಿರುವುದು ಅಮಾನವೀಯ. ಈ ಬಗ್ಗೆ ಮ್ಯಾನುಯಲ್ ಸ್ಕಾವೆಂಜರ್ಸ್‌ ವೃತ್ತಿ ನಿಷೇಧ ಮತ್ತು ಪುನರ್ವಸತಿ ಸಮಿತಿ ಸದಸ್ಯ ಸಿ.ಎನ್.ಆನಂದ್, ರಾಜ್ಯ ಸಫಾಯಿ ಕರ್ಮಾಚಾರಿಗಳ ಆಯೋಗಕ್ಕೆ ದೂರು ನೀಡಿದ್ದು, ಬರೀಗೈಯಲ್ಲೇ ಮಲ ಗುಂಡಿ ಸ್ವಚ್ಛಗೊಳಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News