ಕಣ್ಣಿನ ಕಾಯಿಲೆಗೆ ತಕ್ಷಣ ಚಿಕಿತ್ಸೆ ಪಡೆಯಬೇಕು: ಡಾ.ಪುಷ್ಪರಾಜ್

Update: 2018-10-12 15:28 GMT

ಬೆಂಗಳೂರು, ಅ.12: ಡಯಾಬಿಟಿಕ್ ರೆಟಿನೋಪಥಿ, ಗ್ಲಕೋಮಾ, ಮಕ್ಕಳ ದೃಷ್ಟಿ ಸಮಸ್ಯೆ ಹೀಗೆ ಕಣ್ಣಿನ ಎಲ್ಲ ಕಾಯಿಲೆಗಳಿಗೂ ಈಗ ಸರಕಾರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸೆಗಳಿವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದು ಆರೋಗ್ಯವಂತರಾಗಿರಬೇಕು ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ.ಪುಷ್ಪರಾಜ್ ಹೇಳಿದರು.

ನಗರದ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ನೇತ್ರ ದೃಷ್ಟಿ ದಿನದ ಅಂಗವಾಗಿ ಜನ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೇಕಡಾ 80 ರಷ್ಟು ಕಣ್ಣಿನ ಕಾಯಿಲೆಗಳನ್ನು ಗುಣಪಡಿಸಬಹುದು. ಜನರು ಕಣ್ಣಿನ ಕಾಯಿಲೆ ಬಗ್ಗೆ ಇರುವ ಮೂಢನಂಬಿಕೆ ಕೈಬಿಟ್ಟು ಸಮಸ್ಯೆ ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆದು ಗುಣಮುಖರಾಗಬೇಕು ಎಂದು ಸಲಹೆ ನೀಡಿದರು.

ಮೊದಲು ಲಯನ್ಸ್ ಕ್ಲಬ್ ಮತ್ತಿತರ ಸಂಘ ಸಂಸ್ಥೆಗಳು ಕಣ್ಣಿನ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದವು. ಈಗ ಸರಕಾರಿ ಆಸ್ಪತ್ರೆಗಳೂ ಈ ಕೆಲಸವನ್ನು ಹೆಚ್ಚು ಮುತುವರ್ಜಿಯಿಂದ ಮಾಡುತ್ತಿವೆ. ಮಿಂಟೋ ಕಣ್ಣಿನ ಆಸ್ಪತ್ರೆಯಂತು ಈ ದಿಸೆಯಲ್ಲಿ ಅಗ್ರಗಣ್ಯ ಸ್ಥಳದಲ್ಲಿದೆ ಎಂದು ಅವರು ಪ್ರಶಂಸಿಸಿದರು.

ಕಣ್ಣಿನ ದಾನ ಶ್ರೇಷ್ಠ. ಪ್ರತಿಯೊಬ್ಬರೂ ಕಣ್ಣು ದಾನ ಮಾಡಬಹುದು. ಮತ್ತೊಬ್ಬರ ಬಾಳು ಬೆಳಗಲು ಇರುವ ಏಕೈಕ ದಾನ ಕಣ್ಣು ದಾನ. ಕಣ್ಣು ದಾನ ಮಾಡಲು ಜನ ಹೆಚ್ಚಿನ ರೀತಿಯಲ್ಲಿ ಮುಂದೆ ಬರಬೇಕು. ಕುಟುಂಬ ಕಲ್ಯಾಣ ಕಾರ್ಯಕ್ರಮದಂತೆ ಕಣ್ಣು ದಾನವೂ ಚಾಲ್ತಿಗೆ ಬರಬೇಕು. ಈ ಬಗ್ಗೆ ಯುವಕರು, ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕು ಎಂದು ಅವರು ತಿಳಿಸಿದರು.

ಅಂಚೆ ವಿಶೇಷ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದ ಇಂಡಿಯನ್ ಪೋಸ್ಟಲ್ ನಿರ್ದೇಶಕ ನಟರಾಜ್, ಅಂಚೆ ಇಲಾಖೆ 25ನೇ ಸ್ಮರಣ ಸಂಚಿಕೆಯಾಗಿ ನೇತ್ರದಾನ ಶ್ರೇಷ್ಠ ದಾನ ಎಂದು ಸಾರಲು ಅಂಚೆ ವಿಶೇಷ ಲಕೋಟೆ ಬಿಡುಗಡೆ ಮಾಡಿದೆ ಎಂದರು.

ಮಿಂಟೋ ಕಣ್ಣಾಸ್ಪತ್ರೆ ನಿರ್ದೇಶಕಿ ಡಾ.ಸುಜಾತಾ ರಾಥೋಡ್ ಮಾತನಾಡಿ, ಕಣ್ಣಿನ ಕಾಯಿಲೆಗಳಿಗೆ ಬಡವರಿಗೂ ಉಚಿತವಾಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದೆ. ಕಣ್ಣನ ಕಾಯಿಲೆ ಬಗ್ಗೆ ಅಲಕ್ಷ ಮಾಡದೆ ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು. ಆರೋಗ್ಯ ಇಲಾಖೆ ಅಪರ ನಿರ್ದೇಶಕ ಡಾ.ಪಾಟೀಲ್ ಓಂಪ್ರಕಾಶ್, ನೇತ್ರಶಾಸ್ತ್ರ ವಿಭಾಗದ ಉಪ ನಿರ್ದೇಶಕ ಡಾ.ಬಿ.ಎಸ್.ಪಾಟೀಲ್, ಬೆಂಗಳೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ.ಎಚ್.ಎಸ್. ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News