ಇಂಟರ್‌ನೆಟ್ ಕಡಿತ: ವರದಿ ನಿರಾಕರಿಸಿದ ಭಾರತದ ಸೈಬರ್ ಭದ್ರತಾ ಅಧಿಕಾರಿ

Update: 2018-10-12 16:19 GMT

ಹೊಸದಿಲ್ಲಿ, ಅ. 12: ಭಾರತದಲ್ಲಿ ಯಾವುದೇ ಕಾರಣಕ್ಕೂ ಇಂಟರ್‌ನೆಟ್ ಕಡಿತಗೊಳ್ಳುವುದಿಲ್ಲ ಎಂದು ಕೇಂದ್ರ ಸರಕಾರದ ಸೈಬರ್ ಭದ್ರತಾ ಸಂಯೋಜಕ ಗುಲ್ಶನ್ ರಾಯ್ ಒತ್ತಿ ಹೇಳಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ನೆಟ್‌ವರ್ಕ್ ಕಡಿತಗೊಂಡ ಅನುಭವ ಜಗತ್ತಿನಾದ್ಯಂತದ ಇಂಟರ್‌ನೆಟ್ ಬಳಕೆದಾರರಿಗೆ ಆಗಲಿದೆ ಎಂದು ವರದಿಯೊಂದು ತಿಳಿಸಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲ ವ್ಯವಸ್ಥೆ ಮಾಡಲಾಗಿದೆ. ಮಾದ್ಯಮಗಳಲ್ಲಿ ಪ್ರಸಾರವಾದಂತೆ ಭಾರತದಲ್ಲಿ ಇಂಟರ್‌ನೆಟ್ ಕಡಿತವಾಗಲಾರದು ಎಂದು ಅವರು ತಿಳಿಸಿದ್ದಾರೆ.

ಮುಂದಿನ ಎರಡು ದಿನಗಳು ಎಂದಿನಂತೆ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ಕೀ ಡೊಮೈನ್ ಡೌನ್ ಆಗಲಿದೆ. ಇದರಿಂದ ಮುಂದಿನ 48 ಗಂಟೆಗಳ ಕಾಲ ವೆಬ್‌ಪೆಜ್ ಪಡೆಯುವಲ್ಲಿ ಅಥವಾ ಯಾವುದೇ ವರ್ಗಾವಣೆ ಮಾಡುವಲ್ಲಿ ಇಂಟರ್‌ನೆಟ್ ಬಳಕೆದಾರರು ತೊಂದರೆ ಎದುರಿಸಲಿದ್ದಾರೆ ಎಂದು ರಶ್ಯಾದ ಪೋರ್ಟಲ್ ಅನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ಶುಕ್ರವಾರ ವರದಿ ಮಾಡಿತ್ತು.  

ಇಂಟರ್‌ನೆಟ್ ವಿಳಾಸ ಪುಸ್ತಕ (ಇಂಟರ್‌ನೆಟ್ ಎಡ್ರಸ್ ಬುಕ್) ಅಥವಾ ಡೊಮೈನ್ ನೇಮ್ ಸಿಸ್ಟಮ್ (ಡಿಎನ್‌ಎಸ್) ಅನ್ನು ಸಂರಕ್ಷಿಸಲು ನೆರವಾಗುವಂತೆ ಕ್ರಿಪ್ಟೋಗ್ರಾಫಿಕ್ ಕೀಯನ್ನು ಬದಲಾಯಿಸುವ ಮೂಲಕ ನಿರ್ವಹಣಾ ಕಾರ್ಯ ನಡೆಸಲಾಗುವುದು ಎಂದು ಇಂಟರ್‌ನೆಟ್ ಕಾರ್ಪೋರೇಶನ್ ಆಫ್ ಅಸೈನ್‌ಡ್ ನೇಮ್ಸ್ ಆ್ಯಂಡ್ ನಂಬರ್ಸ್‌ (ಐಸಿಎಎನ್‌ಎನ್) ತಿಳಿಸಿರುವುದಾಗಿ ವರದಿ ಹೇಳಿತ್ತು. ಹೆಚ್ಚುತ್ತಿರುವ ಸೈಬರ್ ದಾಳಿ ತಡೆಯಲು ಇದರ ಅಗತ್ಯತೆ ಇದೆ ಎಂದು ಐಸಿಎಎನ್‌ಎನ್ ಅನ್ನು ಉಲ್ಲೇಖಿಸಿ ವರದಿ ತಿಳಿಸಿತ್ತು. ಈ ಬಗ್ಗೆ ಸುದ್ದಿ ಸಂಸ್ಥೆಯೊಂದು ಐಸಿಎಎನ್‌ಎನ್ ಅನ್ನು ಸಂಪರ್ಕಿಸಿದಾಗ, ಇದರ ಮೂಲ ವರದಿ ‘ಕ್ಲಿಕ್ ಬೈಟ್’ ಹೆಸರಿನಲ್ಲಿ ಪ್ರಕಟವಾಗಿದೆ. ಈ ಕಾರ್ಯದಿಂದ ಬಳಕೆದಾರರ ಮೇಲೆ ಕನಿಷ್ಠ ಪರಿಣಾಮ ಬೀರಲಿದೆ ಎಂದು ಸ್ಪಷ್ಟಪಡಿಸಿದೆ. ದುರಾದೃಷ್ಟವೆಂದರೆ ಈ ವರದಿಯ ಶೀರ್ಷಿಕೆ ‘ಕ್ಲಿಕ್ ಬೈಟ್’ ಎಂದು ಹೊಂದಿರುವುದು. ಇದರಿಂದ ಬಳಕೆದಾರರ ಮೇಲೆ ಕನಿಷ್ಠ ಪರಿಣಾಮ ಉಂಟಾಗಲಿದೆ ಎಂದು ಸಿಂಗಾಪುರದಲ್ಲಿರುವ ಐಸಿಎಎನ್‌ಎನ್‌ನ ವಕ್ತಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News