ಪರಂಪರೆಯ ವೈಭವೀಕರಣದ ನೆಪದಲ್ಲಿ ಮನುವಾದ ಜಾರಿ: ನಿವೃತ್ತ ಐಪಿಎಸ್ ಅಧಿಕಾರಿ ಮರಿಸ್ವಾಮಿ ಆತಂಕ

Update: 2018-10-12 17:31 GMT

ಬೆಂಗಳೂರು, ಅ.12: ಪರಂಪರೆಯ ವೈಭವೀಕರಣದ ಹೆಸರಿನಲ್ಲಿ ಸಾಮಾನ್ಯ ಜನತೆಯ ಮೇಲೆ ಮನುವಾದ ಹೇರಿಕೆಯಾಗುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಡಾಂತರ ಕಾದಿದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಮರಿಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬಿಎಚ್‌ಇಎಲ್‌ನ ಪರಿಶಿಷ್ಟ ಜಾತಿ -ಪರಿಶಿಷ್ಟ ವರ್ಗಗಳ ಏಳಿಗೆಯ ಸಂಘ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ ಚಿಂತನೆಗಳ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಆಹಾರದ ಹೆಸರಿನಲ್ಲಿ, ಗೋ ಸಾಗಾಟದ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಕಾನೂನಿನ ಚೌಕಟ್ಟನ್ನು ಮೀರಿ ವ್ಯಕ್ತಿಗಳನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದ ಹಲವೆಡೆ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ಸುಟ್ಟು ಹಾಕಲಾಗುತ್ತಿದೆ. ಹಾಗೂ ಸಂವಿಧಾನದ ಜಾಗದಲ್ಲಿ ಮನುವಾದವನ್ನು ತರಲು ಹವಣಿಸಲಾಗುತ್ತಿದೆ. ಆ ಮೂಲಕ ಸಾವಿರಾರು ವರ್ಷಗಳಿಂದ ದೇಶದಲ್ಲಿ ಜಾರಿಯಲ್ಲಿದ್ದ ಅಸ್ಪಶ್ಯತೆ, ಶ್ರೇಣಿಕರಣ ವ್ಯವಸ್ಥೆಯನ್ನು ಮರುಸ್ಥಾಪಿಸಲು ಹೊರಟ್ಟಿದ್ದಾರೆ ಎಂದು ಅವರು ವಿಷಾದಿಸಿದರು.

ರಾಷ್ಟ್ರವೆಂದರೆ ಗಡಿಯಲ್ಲ: ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರದ ಪರಿಕಲ್ಪನೆಯನ್ನು ದೇಶದ ಗಡಿ ರೇಖೆಗಳಿಗೆ ಹೋಲಿಸಿ, ರಾಷ್ಟ್ರಕ್ಕಿರುವ ವಿಶಾಲವಾದ ಅರ್ಥವನ್ನು ಮರೆ ಮಾಚಲಾಗುತ್ತಿದೆ. ದೇಶದೊಳಗಿರುವ ಜನತೆಯೆ ರಾಷ್ಟ್ರವಾಗಿದ್ದು, ಇಲ್ಲಿನ ಜನತೆ ಸಮಾನವಾಗಿ, ಭಾತೃತ್ವದಿಂದ ಬದುಕುವ ವ್ಯವಸ್ಥೆಯೆ ನಿಜವಾದ ದೇಶ ಪ್ರೇಮವಾಗಿದೆ. ಇಂತಹ ವ್ಯವಸ್ಥೆಯನ್ನು ಜಾರಿ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಮಗ್ನರಾಗಬೇಕೆಂದು ಅವರು ಆಶಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ರಚನೆಯ ಸಂವಿಧಾನದ ಮುಖ್ಯ ಆಶಯಗಳಾದ ಸಮಾನತೆ, ಸ್ವಾತಂತ್ರ ಹಾಗೂ ಜನಪರವಾದ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗಬೇಕಾದರೆ, ದೇಶದಲ್ಲಿರುವ ಜಾತಿ, ಮತ ಹಾಗೂ ಧರ್ಮಗಳನ್ನು ಮೀರಿ ಎಲ್ಲರೂ ಭಾತೃತ್ವದಿಂದ ಬದುಕುವಂತಾಗಬೇಕೆಂದು ಅವರು ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ಶೋಷಿತ ವರ್ಗಗಳಿಗೆ ಮಾತ್ರ ಶ್ರಮಿಸಿದವರಲ್ಲ. ದೇಶದ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ಜನಪರವಾದ ಕಾನೂನುಗಳನ್ನು ರಚಿಸಿದವರು. ಮಹಿಳೆಯರಿಗೆ, ಹಿಂದುಳಿದ, ಅಲ್ಪಸಂಖ್ಯಾತರ ಏಳ್ಗೆ ಗೆ ಚಿಂತಿಸಿದ್ದಾರೆ. ಹಾಗೂ ದೇಶದ ಹಲವು ಅಣೆಕಟ್ಟುಗಳ ನಿರ್ಮಾಣದಲ್ಲಿ ಹಾಗೂ ಆರ್‌ಬಿಐ ಬ್ಯಾಂಕ್ ರಚನೆಯಲ್ಲಿ ಅಂಬೇಡ್ಕರ್ ಬಹುಮುಖ್ಯವಾದ ಪಾತ್ರ ವಹಿಸಿದ್ದಾರೆ. ಈ ಬಗ್ಗೆ ಎಲ್ಲರೂ ತಿಳಿಯುವಂತಾಗಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬುದ್ಧ ಪ್ರತಿಷ್ಠಾನ ಕೇಂದ್ರದ ಅಧ್ಯಕ್ಷ ಡಾ.ರಾಜನಂದ್ ಬೊಧ್, ಅಂಬೇಡ್ಕರ್‌ವಾದಿ ಹೊ.ಬ.ನಾಗಸಿದ್ಧಾರ್ಥ ಹೊಲೆಯಾರ್, ಬಿಎಚ್‌ಇಎಲ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಆನಂದ ಸಿ, ಬಿಎಚ್‌ಇಎಲ್‌ನ ಆದಿಶೇಷು ಹಾಗೂ ಬಿಎಚ್‌ಇಎಲ್‌ನ ಎಸ್ಸಿ-ಎಸ್ಟಿ ಏಳಿಗೆಯ ಸಂಘದ ಅಧ್ಯಕ್ಷ ಡಿ.ಜಿ.ಶಿವಕುಮಾರಯ್ಯ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News