ತೈಲೋತ್ಪನ್ನಗಳ ಈ ಇಳಿಕೆ ದರ ಸಂಭ್ರಮಿಸುವಂತಹದ್ದೇ?

Update: 2018-10-12 18:37 GMT

ಇನ್ನೂ 80/85 ಡಾಲರ್ ಆಸುಪಾಸಿನಲ್ಲೇ ಇರುವ ಕಚ್ಚಾ ತೈಲ ಬೆಲೆಯ ವಿರುದ್ಧ ಮೋದಿ ನೇತೃತ್ವದ ಸರಕಾರ ನಿತ್ಯ ಪರಿಷ್ಕರಿಸುತ್ತಿರುವ ಬೆಲೆ ಪೆಟ್ರೋಲ್‌ಗೆ ರೂ. 83.52 ಮತ್ತು ಡೀಸೆಲ್‌ಗೆ ರೂ. 75 ದಾಟುತ್ತಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ಈಗಿನ ಪ್ರಮಾಣದಂತೆ ಬೆಲೆ ಏರಿಸುತ್ತಾ ಹೋದರೆ ಕಾಂಗ್ರೆಸ್ ಆಡಳಿತ ಅವಧಿಯಂತೆ ಕಚ್ಚಾ ತೈಲಬೆಲೆ 114 ಡಾಲರ್‌ಗೆ ಏರಿಕೆಯಾದರೆ ಈ ಸರಕಾರ ನಿಗದಿಪಡಿಸಬಹುದಾದ ಸಂಭಾವ್ಯ ಪೆಟ್ರೋಲ್ ಬೆಲೆ ಲೀಟರ್ 1ರ ರೂ. 119 (2011-14ರ ರೂ. 78ರ ವಿರುದ್ಧ) ಮತ್ತು ಡೀಸೆಲ್ ಬೆಲೆ ರೂ. 108ಕ್ಕೆ (ರೂ. 61.33ರ ಬದಲು) ಏರಬಹುದು!


ಮಧ್ಯಪ್ರಾಚ್ಯ ಮತ್ತು ಇತರ ಕೆಲರಾಷ್ಟ್ರಗಳಿಂದ ಆಮದು ಮಾಡಲಾದ ಕಚ್ಚಾತೈಲವನ್ನು ಸಂಸ್ಕರಿಸಿ ಉತ್ಪಾದನೆಯಾಗುವ ಪೆಟ್ರೋಲಿಯಂ ಉತ್ಪನ್ನಗಳ ದೇಶವ್ಯಾಪಿ ಮಾರಾಟ ವ್ಯವಹಾರವನ್ನು ಸರಕಾರಿ ಒಡೆತನದ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿ) ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ (ಎಚ್‌ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ (ಬಿಪಿಸಿಎಲ್) ಕಂಪೆನಿಗಳು ಆಡಳಿತಾರೂಢ ಸರಕಾರಗಳ ಮರ್ಜಿಯಂತೆ ಕಾರ್ಯ ನಿರ್ವಹಿಸುವವೇ ಹೊರತು ಗ್ರಾಹಕರ ಹಿತರಕ್ಷಣೆ ಕಾಯುವ ಗೋಜಿಗೆ ಹೋಗದ ಕಾರಣ ಸದರಿ ತೈಲಸಂಸ್ಥೆಗಳು ಮತ್ತು ಕೇಂದ್ರ ಸರಕಾರ ಬಹಳ ಸುಲಭವಾಗಿ ಗ್ರಾಹಕರನ್ನು ಶೋಷಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಕಾಂಗ್ರೆಸ್ ನೇತೃತ್ವದ ವಿರೋಧಪಕ್ಷಗಳು ಇತ್ತೀಚೆಗೆ ತೈಲ ಉತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಭಾರತ್‌ಬಂದ್‌ಗೆ ಕರೆಕೊಟ್ಟು ಹರತಾಳ ಮೂಲಕ ಜನರನ್ನು ಎಚ್ಚರಿಸಿದಾಗ, ಅಧಿಕಾರ ನಡೆಸುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರ ಗ್ರಾಹಕರ ಚಳವಳಿಗೆ ಬೆಲೆಕೊಡದೆ ಬೆಲೆ ಇಳಿಕೆ ಕುರಿತಂತೆ ಅವರ ಬೇಡಿಕೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿ, ತನ್ನ ಅಹಂ ಮತ್ತು ಜನ ವಿರೋಧಿ ನಿಲುವನ್ನು ಪ್ರದರ್ಶಿಸಿದೆ.

ವಿರೋಧ ಪಕ್ಷಗಳ ಆಗ್ರಹಪೂರ್ವಕ ಬೇಡಿಕೆಗಳನ್ನು ನಿರ್ಲಕ್ಷಿಸಿದ ಬಿಜೆಪಿ ಸರಕಾರ ಎಂದಿನಂತೆ ಕಚ್ಚಾತೈಲ ಬೆಲೆ ಏರಿಕೆಯಾದಾಗಲೆಲ್ಲ ‘‘ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ಕೂಡಾ ಆಗಾಗ ಬೆಲೆ ಏರಿಸುತ್ತಿತ್ತು’’ ಎಂದು ಹೇಳುತ್ತಾ ಸದರಿ ಬೆಲೆ ಏರಿಕೆಯನ್ನು ಸಮರ್ಥಿಸುತ್ತಿದೆ ವಿನಹ ಗ್ರಾಹಕರ ಹಿತರಕ್ಷಣೆ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಇದೀಗ ದಿನಾಂಕ: 04-10-2018ರಂದು ಕೇಂದ್ರ ಸರಕಾರ ಲೀಟರ್ 1ಕ್ಕೆ 2.50 (ಸುಂಕ ಮತ್ತು ಟ್ಯಾಕ್ಸ್ ಸೇರಿ ರೂ. 3) ವಿನಾಯಿತಿ ಘೋಷಿಸಿರುವುದನ್ನು ಉಲ್ಲೇಖಿಸಿ ಬಿಜೆಪಿಯ ಕಾರ್ಯಕರ್ತರು ಮತ್ತು ಸಮರ್ಥಕರು ದೇಶದಾದ್ಯಂತ ಸಂಭ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ 2004ರಿಂದ 2014ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಹಾಗೂ ಇದೀಗ 2014ರಿಂದ ಅಧಿಕಾರ ನಡೆಸುತ್ತಿರುವ ಮೋದಿ ಸರಕಾರ ಕಚ್ಚಾತೈಲ ಬೆಲೆ ಏರಿಕೆ ಸಂದರ್ಭಗಳಲ್ಲಿ ತೈಲ ಉತ್ಪನ್ನಗಳ ಮಾರಾಟ ಬೆಲೆಯನ್ನು ಯಾವ ರೀತಿ ನಿರ್ವಹಿಸಿವೆ ಎಂಬುದನ್ನು ನೋಡುವುದಾದರೆ ಕಾಂಗ್ರೆಸ್/ಯುಪಿಎ ಆಡಳಿತದ ಜನವರಿ 2005ರಲ್ಲಿ ಕಚ್ಚಾತೈಲ ಬೆಲೆ 45.84 ಡಾಲರ್ ಇದ್ದಾಗ ಪೆಟ್ರೋಲ್ ಮಾರಾಟ ಬೆಲೆ ರೂ. 45.51 ಮತ್ತು ಡೀಸೆಲ್ ಬೆಲೆ ರೂ. 30.80 ಇತ್ತು.

ಈಗಿನ ಬಿಜೆಪಿ ಆಡಳಿತದ ಮಾರ್ಚ್ 2015ರಲ್ಲಿ ಕಚ್ಚಾ ತೈಲ ಬೆಲೆ 45.57 ಮೇಲಿನ 2005ರ ಬೆಲೆ 45.84 ಡಾಲರ್‌ಗೆ ಸಮಾನವಾಗಿತ್ತು. ಆದರೆ ಈ ಕಚ್ಚಾ ತೈಲ ಬೆಲೆಯ ವಿರುದ್ಧ ಮೋದಿ ಸರಕಾರ ನಿಗದಿಪಡಿಸಿದ ಪೆಟ್ರೋಲಿಯಂ ಬೆಲೆ ರೂ. 66.08 ಕಾಂಗ್ರೆಸ್ ಸರಕಾರ ನಿಗದಿಪಡಿಸಿದ ಬೆಲೆ ರೂ. 45.51ಕ್ಕಿಂತ ಸುಮಾರು ಶೇ.45 ಅಧಿಕ ಹಾಗೂ ಡೀಸೆಲ್ ಬೆಲೆ ರೂ. 54.06 ಹಿಂದಿನ ಸರಕಾರ ಆಡಳಿತ ಸಂದರ್ಭದ ರೂ. 30.80ಕ್ಕಿಂತ ಶೇ. 75 ಜಾಸ್ತಿಯಾಗಿತ್ತು! ಇದೇ ತೆರನಾಗಿ ಅಕ್ಟೋಬರ್ 2007ರಲ್ಲಿ ಕಚ್ಚಾ ತೈಲ ಬೆಲೆ ರೂ. 77.12ರ ವಿರುದ್ಧ ಪೆಟ್ರೋಲ್ ರೂ. 50.58 ಮತ್ತು ಡೀಸೆಲ್ ಬೆಲೆ ರೂ. 35.23ರ ವಿರುದ್ಧ ಮೋದಿ ಆಡಳಿತ ಸಂದರ್ಭ ಸೆಪ್ಟಂಬರ್ 2015ರ ಕಚ್ಚಾ ತೈಲದ ಸಮಾನ ಬೆಲೆ 77.48 ಡಾಲರ್‌ಗೆ ಪೆಟ್ರೋಲ್ ಬೆಲೆ ರೂ. 83.22 ಅಂದರೆ ಶೇ. 64ರಷ್ಟು ಹೆಚ್ಚು ಮತ್ತು ಡೀಸೆಲ್ ಬೆಲೆ ರೂ. 35.23ರ ವಿರುದ್ಧ ರೂ. 75.03 ಅಂದರೆ ಶೇ. 114ರಷ್ಟು ಏರಿಕೆ ಕಂಡುಬರುತ್ತದೆ.!

ಜುಲೈ 2008ರಲ್ಲಿ ಕಚ್ಚಾ ತೈಲದ ಬೆಲೆ 131.27 ಡಾಲರ್ ದಾಖಲೆ ಮಟ್ಟಕ್ಕೆ ಏರಿಕೆಯಾದಾಗ ಅಂದಿನ ಪೆಟ್ರೋಲ್ ಬೆಲೆ 57.17, ಡೀಸೆಲ್ ಬೆಲೆ 39.15. ಆದರೆ ಮೋದಿ ಆಡಳಿತದ ಸರಕಾರ ಜನವರಿ 2016ರಲ್ಲಿ ಕಚ್ಚಾತೈಲ ಬೆಲೆ ಯುಎಸ್‌ಡಿ 26.81 ಡಾಲರ್‌ಗೆ (ದಶಕದ ಕನಿಷ್ಠ ಬೆಲೆ) ಇಳಿದ ಸಂದರ್ಭದಲ್ಲಿ ಅವರು ನಿಗದಿಪಡಿಸಿದ ಕನಿಷ್ಠ ಮಾರಾಟ ಬೆಲೆ ಪೆಟ್ರೋಲ್‌ಗೆ ರೂ. 61.82 ಮತ್ತು ಡೀಸೆಲ್‌ಗೆ ರೂ. 46.72 ಮೇಲಿನ 2008 ದಾಖಲೆ ಏರಿಕೆ ಸಂದರ್ಭದ ಬೆಲೆಗಿಂತಲೂ ಹೆಚ್ಚಾಗಿತ್ತು ಎಂದರೆ ಮೋದಿ ಸರಕಾರವು ಗ್ರಾಹಕರ ಹಿತದ ವಿರುದ್ಧ ಎಷ್ಟೊಂದು ನಿರ್ದಾಕ್ಷಿಣ್ಯದಿಂದ ವರ್ತಿಸುತ್ತಿದೆ ಎಂಬುದನ್ನು ತಿಳಿಯಬಹುದಾಗಿದೆ.

2011ರಿಂದ 2014ರ ಮಧ್ಯೆ ಕಚ್ಚಾ ತೈಲ ಬೆಲೆ ನಿರಂತರ 100 ಡಾಲರ್‌ನಿಂದ 114 ಡಾಲರ್‌ನಷ್ಟು ಏರಿಕೆ ಕಂಡ ಸಂದರ್ಭದಲ್ಲಿ ಅಂದಿನ ಕಾಂಗ್ರೆಸ್ ಸರಕಾರ ನಿಗದಿಪಡಿಸಿದ ಬೆಲೆ ಪೆಟ್ರೋಲ್‌ಗೆ ರೂ. 59.77 ರಿಂದ 78.69 ಇದ್ದರೆ, ಡೀಸೆಲ್ ಬೆಲೆ ರೂ. 55ರಿಂದ ರೂ. 61.33 ಆಗಿತ್ತು. ಆದರೆ ಇದೀಗ ಇನ್ನೂ 80/85 ಡಾಲರ್ ಆಸುಪಾಸಿನಲ್ಲೇ ಇರುವ ಕಚ್ಚಾ ತೈಲ ಬೆಲೆಯ ವಿರುದ್ಧ ಮೋದಿ ನೇತೃತ್ವದ ಸರಕಾರ ನಿತ್ಯ ಪರಿಷ್ಕರಿಸುತ್ತಿರುವ ಬೆಲೆ ಪೆಟ್ರೋಲ್‌ಗೆ ರೂ. 83.52 ಮತ್ತು ಡೀಸೆಲ್‌ಗೆ ರೂ. 75 ದಾಟುತ್ತಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರ ಈಗಿನ ಪ್ರಮಾಣದಂತೆ ಬೆಲೆ ಏರಿಸುತ್ತಾ ಹೋದರೆ ಕಾಂಗ್ರೆಸ್ ಆಡಳಿತ ಅವಧಿಯಂತೆ ಕಚ್ಚಾ ತೈಲಬೆಲೆ 114 ಡಾಲರ್‌ಗೆ ಏರಿಕೆಯಾದರೆ ಈ ಸರಕಾರ ನಿಗದಿಪಡಿಸಬಹುದಾದ ಸಂಭಾವ್ಯ ಪೆಟ್ರೋಲ್ ಬೆಲೆ ಲೀಟರ್ 1ರ ರೂ. 119 (2011-14ರ ರೂ. 78ರ ವಿರುದ್ಧ) ಮತ್ತು ಡೀಸೆಲ್ ಬೆಲೆ ರೂ. 108ಕ್ಕೆ (ರೂ. 61.33ರ ಬದಲು) ಏರಬಹುದು!

ಅಬಕಾರಿ ಸುಂಕದ ತೀವ್ರ ಏರಿಕೆಯೇ ಮೇಲಿನಂತೆ ಬೆಲೆಗಳ ತೀವ್ರ ಏರಿಕೆಗೆ ಕಾರಣ: 

ಬಿಜೆಪಿ ಆಡಳಿತ ಅವಧಿಯಲ್ಲಿ ಕಚ್ಚಾತೈಲಬೆಲೆ ಕುಸಿತ ಕಂಡಾಗಲೆಲ್ಲಾ (2015, 16 ಮತ್ತು 17ರಲ್ಲಿ) ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವ ಬದಲು ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ರೂ. 9.47 (01.04.2014) ರಿಂದ ರೂ. 19.48 ಮತ್ತು ಡೀಸಲ್ ಮೇಲೆ ರೂ. 3.56 ರಿಂದ ರೂ. 15.33ಕ್ಕೆ ಏರಿಸಿ ಈಗಿನ ತೀವ್ರ ಪ್ರಮಾಣದ ಬೆಲೆ ಏರಿಕೆಗೆ ಕಾರಣರಾಗಿದ್ದಾರೆ, ಅಲ್ಲದೆ ಗ್ರಾಹಕರನ್ನು ನಿರಂತರ 4 ವರ್ಷಗಳಿಂದ ವಂಚಿಸುತ್ತಲೇ ಇದ್ದಾರೆ.

ಕಚ್ಚಾ ತೈಲ ಬೆಲೆ ಕುಸಿತ ಮತ್ತು ತೈಲ ಉತ್ಪನ್ನಗಳ ಬೆಲೆ ಏರಿಕೆ ಆದಾಯದಿಂದ ನೋಟು ಅಮಾನ್ಯತೆಯಿಂದ ಉಂಟಾದ ಕೊರತೆ ನೀಗಿಸಿಕೊಂಡ ಸರಕಾರ:

2010-2011 ಮತ್ತು 2013-14ರ ಮಧ್ಯೆ ನಾಲ್ಕು ವರ್ಷಗಳ ಕಾಲ ನಿರಂತರ ಏರುಗತಿಯಲ್ಲಿ (ಬ್ಯಾರಲ್‌ಗೆ 100 ರಿಂದ 130 ಡಾಲರ್ ಅಸುಪಾಸು) ಇದ್ದ ಕಚ್ಚಾ ತೈಲ ಬೆಲೆ ಜೂನ್ 2014ರಿಂದ ಮಾರ್ಚ್ 2018ರ ಮಧ್ಯೆ ಕನಿಷ್ಠ 26 ಡಾಲರ್‌ಗೆ ಕುಸಿತ ಕಂಡು ಮುಂದೆ ಸರಾಸರಿ 30ರಿಂದ 50ಡಾಲರ್ ಒಳಗಡೆ ಇದ್ದಾಗ ಕೇಂದ್ರ ಸರಕಾರ ಆಗಾಗ ಹೆಚ್ಚುವರಿ ಅಬಕಾರಿ ಸುಂಕ ಸೇರಿಸುತ್ತ ಕಚ್ಚಾ ತೈಲೆ ಬೆಲೆ ಕುಸಿತದ ಲಾಭವನ್ನು ಗ್ರಾಹಕರಿಗೆ ನೀಡದೆ ಖಜಾನೆ ತುಂಬಿಸುತ್ತಾ ಒಟ್ಟು ರೂ. 11 ಲಕ್ಷ ಕೋಟಿಯಷ್ಟು ಹೆಚ್ಚುವರಿ ಆದಾಯಗಳಿಸಿತ್ತು! ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೋಟು ಅಮಾನ್ಯ ಕುರಿತಂತೆ ಭವಿಷ್ಯ ನುಡಿದಂತೆ ದೇಶ ಅಗಾಧ ಪ್ರಮಾಣದ ಆರ್ಥಿಕ ನಷ್ಟ ಮತ್ತು ಅದರ ಪರಿಣಾಮ ಜಿಡಿಪಿ ತೀವ್ರ ನಷ್ಟ ಅನುಭವಿಸುವ ಸಾಧ್ಯತೆ ನಿಚ್ಚಳವಾಗುತ್ತಿದ್ದಂತೆ ಮೇಲೆ ಹೇಳಿರುವಂತೆ ಪೆಟ್ರೋಲಿಯಂ ಉತ್ಪನ್ನ ಬೆಲೆಗಳನ್ನು ಇಳಿಸದೆ ಸದರಿ ಹೆಚ್ಚುವರಿ ಆದಾಯವನ್ನು ತನ್ನ ಮೇಲಿನ ಸ್ವಯಂಕೃತ ಅಪರಾಧದ ಪರಿಣಾಮ ಉಂಟಾದ ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ಬಳಸಿಕೊಂಡರು.

ಅಬಕಾರಿ ಸುಂಕ ಏರಿಕೆ ಪ್ರಮಾಣ:

2009-14ರಲ್ಲಿ ಒಟ್ಟು ಅಬಕಾರಿ ಸುಂಕದ ಆದಾಯದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕದ ಪಾಲು ಶೇ. 8.8 ಇದ್ದರೆ, ಅದು ಈಗ ಶೇ. 12.5ರಷ್ಟು ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಕಾರ್ಪೊರೇಟ್ ವಲಯದ ಆದಾಯ ಶೇ. 36.5ನಿಂದ 30.2ಕ್ಕೆ ಕುಸಿದಿದೆ. ಅಂದರೆ ಮೋದಿ ನೇತೃತ್ವದ ಸರಕಾರ ಕಾರ್ಪೊರೇಟ್ ವಲಯದ ಶ್ರೀಮಂತ ಉದ್ಯಮಿಗಳಿಗೆ ಕರಭಾರ ಏರಿಸುವ ಬದಲು ಪೆಟ್ರೋಲಿಯಂ ಉತ್ಪನ್ನಗಳ ಸಾಮಾನ್ಯ ಬಳಕೆದಾರರ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವ ಮೂಲಕ ಅವರನ್ನು ನಾಲ್ಕು ವರ್ಷಗಳಿಂದ ಸತತ ವಂಚನೆ ಮಾಡುತ್ತಲೇ ಇದೆ. ಈ ನಯವಂಚನೆಯ ಜಾಲವನ್ನು ಮಾನ್ಯ ಬಳಕೆದಾರರು ಅರ್ಥ ಮಾಡಿಕೊಳ್ಳಬೇಕಾಗಿದೆ. ಜನಸಾಮಾನ್ಯರಿಗೆ ನೀಡುತ್ತಿದ್ದ ಎಲ್‌ಪಿಜಿ ಗ್ಯಾಸ್ ಸಬ್ಸಿಡಿಯಲ್ಲೂ ಇಳಿಕೆ: ಯುಪಿಎ ಆಡಳಿತ ಎರಡನೇ ಅವಧಿಯಲ್ಲಿ ಗ್ಯಾಸ್ ಸಬ್ಸಿಡಿಗಾಗಿ ಒಟ್ಟು ರೂ. 5.73 ಲಕ್ಷ ಕೋಟಿ ಬಿಡುಗಡೆಯಾಗಿದ್ದರೆ, ಅದು ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ ರೂ. 1.80 ಲಕ್ಷ ಕೋಟಿಗೆ ಇಳಿಕೆಯಾಗಿ ಜನ ಸಾಮಾನ್ಯರಿಗೆ ಸರಕಾರ ಇಲ್ಲೂ ಹೊಡೆತ ನೀಡಿದೆ.

ಬೆಲೆ ಪರಿಷ್ಕರಣೆ ಮೂಲಕ ಸುಲಭವಾಗಿಯೇ ಗ್ರಾಹಕರಿಗೆ ಮೋಸ: 

ಈ ಹಿಂದೆ ತಿಂಗಳಾಂತ್ಯ ಇಲ್ಲವೇ 15 ದಿನಗಳಿಗೊಮ್ಮೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಪರಿಷ್ಕರಣೆ ನಡೆಯುತ್ತಿದ್ದರೆ, ಮೋದಿ ಸರಕಾರವು ಗ್ರಾಹಕರನ್ನು ನಾಜೂಕಾಗಿಯೇ ಮೋಸಗೊಳಿಸುವ ಉದ್ದೇಶದಿಂದ ದಿನವಹಿ ಬೆಲೆ ಪರಿಷ್ಕರಣೆಗೆ ಒಳಪಡಿಸತೊಡಗಿತು. ಈ ದಿನವಹಿ ಬೆಲೆ ಪರಿಷ್ಕರಣೆಯ ಹಿಂದೆ ಜನರಿಗೆ ತಿಳಿಯದಂತೆ ಮೋಸಗೊಳಿಸುವ ಒಂದು ಗುಟ್ಟು ಇದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ ಆರ್‌ಟಿಐ ಪ್ರಶ್ನೆಗೆ ಉತ್ತರಿಸುತ್ತಾ ‘‘ದೇಶದ ಒಟ್ಟಾರೆ ಬೇಡಿಕೆಗೆ ಅನುಗುಣವಾಗಿ ಕಚ್ಚಾತೈಲ ಬೇಡಿಕೆಯ ಬಹುತೇಕ ಪಾಲನ್ನು ವಾರ್ಷಿಕ ಪೂರೈಕೆ ಒಪ್ಪಂದದ ಅನುಗುಣ ಮತ್ತು ಇನ್ನುಳಿದ ಅಗತ್ಯವನ್ನು ಮಾಸಿಕ/ತಿಂಗಳ ಅಂತರದಲ್ಲಿ ಟೆಂಡರ್ ಪ್ರಕ್ರಿಯೆ ಆಧಾರದಲ್ಲಿ ಅಮದು ಮಾಡಲಾಗುತ್ತಿದೆ’’ ಎಂದು ತಿಳಿಸಿತ್ತು.

2016ರ ಆರಂಭದಲ್ಲಿ ವಾರ್ಷಿಕ ಪೂರೈಕೆ ಒಪ್ಪಂದ ಆಗಿದ್ದರೆ ಆ ವರ್ಷ ಪೂರ್ತಿ ಒಪ್ಪಿತ ಬೆಲೆಯಲ್ಲೇ ಕಚ್ಚಾತೈಲ ಪೂರೈಸಬೇಕಾಗಿದೆ. 2016ರ ಆರಂಭದಲ್ಲಿ ತೈಲೆ ಬೆಲೆ 30 ಡಾಲರ್ ಆಸುಪಾಸಲ್ಲೇ ಇತ್ತು. ಅಂದರೆ 2016ರ ಅಂತ್ಯದಲ್ಲಿ ತೈಲಬೆಲೆ ರೂ. 50 ಡಾಲರ್ ತಲುಪಿದ್ದರೂ ಒಪ್ಪಂದದಂತೆ ಸರಬರಾಜು ಕಂಪೆನಿ, 30 ಡಾಲರ್ ಬೆಲೆಗೆ ಸರಬರಾಜು ಮಾಡಬೇಕಾಗುತ್ತದೆ. ಹೀಗೆ ಜನವರಿ ತಿಂಗಳ ಒಪ್ಪಂದದ ಬೆಲೆ 30 ಡಾಲರ್‌ಗೆ ಸರಬರಾಜು ಆದ ಕಚ್ಚಾತೈಲ ಉತ್ಪನ್ನಕ್ಕೆ ಡಿಸೆಂಬರ್ 16ರ ತೈಲ ಬೆಲೆ 50 ಡಾಲರ್‌ಗೆ ಅನುಗುಣವಾಗಿ ಸದರಿ ಆಯಿಲ್ ಕಂಪೆನಿಗಳು ಬೆಲೆ ನಿಷ್ಕರ್ಷೆ ಮಾಡಿ ಮಾರಾಟ ಮಾಡಿದರೆ, ಅದು ಸರಕಾರ ಗ್ರಾಹಕರಿಗೆ ಉದ್ದೇಶಪೂರ್ವಕವಾಗಿ ಮಾಡುವ ವಂಚನೆ ಅಲ್ಲವೇ?

ದಿನ ವಹೀ ಮಾರಾಟ ಬೆಲೆ ಮತ್ತು ತಿಂಗಳ ಬೆಲೆ ಪರಿಷ್ಕರಣೆಯ ವ್ಯತ್ಯಾಸಗಳು:

ತಿಂಗಳಿಗೊಮ್ಮೆ ಬೆಲೆ ಪರಿಷ್ಕರಣೆ ಸಂದರ್ಭ ಕಚ್ಚಾತೈಲ ಬೆಲೆಯ ಅನುಗುಣ ರೂ. 2 ಅಥವಾ 3ರಷ್ಟು ಹೆಚ್ಚುವರಿಯಾಗಿ ನಿಗದಿಯಾಗಿದ್ದರೆ ಅದು ಗ್ರಾಹಕರಿಗೆ ದುಬಾರಿ ಎಂದು ಕಂಡು ಬಂದು ಅವರು ಪ್ರತಿಭಟಿಸುವ ಸಾಧ್ಯತೆ ಇದೆ. ಅದೇ ದಿನವಹೀ 15/25 ಪೈಸೆಗಳು ಹೆಚ್ಚುವರಿಯಾಗಿ ಪರಿಷ್ಕರಣೆಗೊಂಡಾಗ ಯಾರೂ ಅದನ್ನು ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ. ಆದರೆ ತಿಂಗಳಾಂತ್ಯಕ್ಕೆ ಈ ಎಲ್ಲಾ ಪರಿಷ್ಕರಣೆ ಒಟ್ಟಾಗಿ ಲೆಕ್ಕ ಹಾಕಿದರೆ ಅದು ರೂ. 3 ಅಥವಾ 4 ಆಗಬಹುದು. ಈ ಕಾರಣಕ್ಕಾಗಿ ಆಡಳಿತಾರೂಢ ಬಿಜೆಪಿ ಸರಕಾರವು ತಾನು ದಿನವಹೀ ಕಚ್ಚಾ ತೈಲ ಆಮದು ಮಾಡದೇ ಇದ್ದರೂ ತೈಲ ಉತ್ಪನ್ನಗಳ ಮಾರಾಟ ಬೆಲೆಗಳನ್ನು ದಿನವಹೀ ಪರಿಷ್ಕರಣೆ ಮಾಡುವುದು ಗ್ರಾಹಕರನ್ನು ಮೋಸಗೊಳಿಸುವ ಹುನ್ನಾರ ದಿಂದಲೇ ಮಾಡಲಾಗುತ್ತಿದೆ ಎಂದೇ ಗ್ರಾಹಕರು ಅರ್ಥೈಸಬೇಕಾಗಿದೆ.

ಪೆಟ್ರೋಲ್ ರೂ. 60, ಡೀಸೆಲ್ ರೂ. 50ರಂತೆ ಮಾರಾಟ ಮಾಡಲು ಸಾಧ್ಯ:
ಕಚ್ಚಾ ತೈಲದ ಪ್ರಸ್ತುತ ಆಮದು ಬೆಲೆ ಬ್ಯಾರೆಲ್ 1ರ 80/85 ಡಾಲರ್ ಅನುಗುಣವಾಗಿ ಈಗ ಚಾಲ್ತಿಯಲ್ಲಿರುವ ಗರಿಷ್ಠ ಜಿಎಸ್‌ಟಿ ದರ ಶೇ.28ರಂತೆ ಪೆಟ್ರೋಲ್ ಮತ್ತು ಡೀಸಲ್‌ನ್ನು ಕ್ರಮವಾಗಿ ರೂ. 60 ಮತ್ತು ರೂ. 50ರ ಆಸುಪಾಸಿನಲ್ಲಿ ಮಾರಾಟ ಮಾಡಲು ಸಾಧ್ಯ. ಅಂತಹ ಜನಪರ ದೃಢ ನಿರ್ಧಾರ ಮಾಡಲು ಆಡಳಿತ ನಡೆಸುವವರಲ್ಲಿ ನಿಜಕ್ಕೂ ‘56’ ಇಂಚು ವಿಶಾಲ ಹೃದಯದ ಅವಶ್ಯಕತೆ ಇದೆ ಅಷ್ಟೆ.

Writer - ಎಸ್. ವಿ. ಅಮೀನ್

contributor

Editor - ಎಸ್. ವಿ. ಅಮೀನ್

contributor

Similar News