ಅಗ್ರ ಸ್ಥಾನ ಭದ್ರಪಡಿಸಿಕೊಂಡ ವಿರಾಟ್ ಕೊಹ್ಲಿ

Update: 2018-10-12 18:56 GMT

ಹೈದರಾಬಾದ್,ಅ.12: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ 139 ರನ್ ಬಾರಿಸುವ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಎಡ್ಜ್‌ಬಸ್ಟನ್ ಟೆಸ್ಟ್‌ನಲ್ಲಿ ಮೊದಲ ಬಾರಿ ಅಗ್ರ ಸ್ಥಾನಕ್ಕೇರಿದ ಕೊಹ್ಲಿ ನಂತರ ಟ್ರೆಂಟ್ ಬ್ರಿಡ್ಜ್ ಟೆಸ್ಟ್ ನಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದರು. ಸದ್ಯ ಭಾರತದಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾ ಕಪ್ತಾನ ತನ್ನ ಅಮೋಘ ನಿರ್ವಹಣೆಯನ್ನು ಮುಂದುವರಿಸಿದ್ದು 937 ಅಂಕಗಳೊಂದಿಗೆ ಅಗ್ರ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿರುವ ಸ್ಪಿನ್ನರ್ ಕುಲದೀಪ ಯಾದವ್ 16 ಸ್ಥಾನಗಳ ಜಿಗಿತ ಕಂಡಿದ್ದು 52ನೇ ಸ್ಥಾನಕ್ಕೇರಿದ್ದಾರೆ. ಇದೇ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದ ರವೀಂದ್ರ ಜಡೇಜಾ ಬ್ಯಾಟ್ಸ್‌ಮನ್‌ಗಳ ಪೈಕಿ ಆರು ಸ್ಥಾನಗಳ ಏರಿಕೆ ಕಂಡಿದ್ದು 51ನೇ ಸ್ಥಾನಕ್ಕೇರಿದ್ದಾರೆ. ವಿಂಡೀಸ್‌ನ ನಾಲ್ಕು ವಿಕೆಟ್‌ಗಳನ್ನು ಕೀಳುವ ಮೂಲಕ ಆಲ್‌ರೌಂಡರ್ ಆಗಿಯೂ ತನ್ನ ಸ್ಥಾನವನ್ನು ಉತ್ತಮ ಪಡಿಸಿಕೊಂಡಿದ್ದಾರೆ. ರಾಜ್‌ಕೋಟ್ ಟೆಸ್ಟ್ ನಲ್ಲಿ ಶತಕದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಅಮೋಘ ಪಾದಾರ್ಪಣೆ ಮಾಡಿರುವ ಯುವ ಬ್ಯಾಟ್ಸ್ ಮ್ಯಾನ್ ಪೃಥ್ವಿ ಶಾ 73ನೇ ಸ್ಥಾನದೊಂದಿಗೆ ರ್ಯಾಂಕಿಂಗ್ ಪಟ್ಟಿಯಲ್ಲೂ ತನ್ನ ಹೆಸರು ದಾಖಲಿ ಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News