ಎಂ.ಜೆ ಅಕ್ಬರ್ ರನ್ನು ಸಂಪುಟದಿಂದ ಕಿತ್ತು ಹಾಕಿ: ಪ್ರಧಾನಿಗೆ ಪತ್ರ ಬರೆದ ದಿಲ್ಲಿ ಮಹಿಳಾ ಆಯೋಗ ಮುಖ್ಯಸ್ಥೆ

Update: 2018-10-13 08:19 GMT

ಹೊಸದಿಲ್ಲಿ, ಅ. 13:  ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ಎಂ.ಜೆ ಅಕ್ಬರ್ ಅವರನ್ನು ಸಂಪುಟದಿಂದ ಕಿತ್ತೊಗೆಯಬೇಕೆಂದು ಕೋರಿ ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

''ಎಂ.ಜೆ ಅಕ್ಬರ್ ಅವರನ್ನು ಕೂಡಲೇ ಸರಕಾರದಿಂದ ಹೊರ ಹಾಕಿ. ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಹೊತ್ತುಕೊಂಡು ಅವರು ಇಂತಹ ಪ್ರಮುಖ ಖಾತೆಯನ್ನು ಹೊಂದಿರುವುದು ಸರಿಯಲ್ಲ'' ಎಂದು ಅವರು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಆದಷ್ಟು ಬೇಗ ತನಿಖಾ ಸಮಿತಿಯನ್ನು ರಚಿಸಿ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವವರೆಲ್ಲರನ್ನೂ ತನಿಖೆಗೆ ಒಳಪಡಿಸಬೇಕೆಂದೂ ಅವರು ಪ್ರಧಾನಿಯನ್ನು ಆಗ್ರಹಿಸಿದ್ದಾರೆ.

ಹೆಚ್ಚು ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಹಾಗೂ ದೇಶಾದ್ಯಂತ ಹೆಚ್ಚು ಪೊಲೀಸರನ್ನು ನಿಯೋಜಿಸಿ ಮಹಿಳೆಯರಿಗೆ ನ್ಯಾಯ ಮತ್ತು ರಕ್ಷಣೆ ಒದಗಿಸಬೇಕೆಂದು ಅವರು ತಮ್ಮ ಪತ್ರದಲ್ಲಿ ಮನವಿ ಮಾಡಿದ್ದಾರಲ್ಲದೆ ಹಲವಾರು ಮಹಿಳೆಯರು ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳನ್ನು ಹೊರಗೆಡಹುತ್ತಿರುವ ಈ  #ಮೀ ಟೂ ಅಭಿಯಾನವನ್ನು ಯಾರೂ ಅಮುಕದಂತೆ ನೋಡಿಕೊಳ್ಳಬೇಕೆಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News