ಮೋಸ ಹೋಗುವವರಿದ್ದರೆ ಮೋಸ ಮಾಡುವವರಿಗೆ ಬಲು ಸುಲಭ

Update: 2018-10-13 12:42 GMT

►►ಭಾಗ-58

ಬ್ಯಾಂಕ್‌ಗಳಿಂದಾಗಿ ಜನಸಾಮಾನ್ಯರಿಗೆ ಸಾಕಷ್ಟು ಉಪಕಾರ ಆಗಿದೆ. ಅದರಲ್ಲೂ ನಮ್ಮ ದ.ಕ. ಜಿಲ್ಲೆ ಹಲವು ಬ್ಯಾಂಕ್‌ಗಳ ಉಗಮಸ್ಥಾನವಾಗಿ ಗುರುತಿಸಿಕೊಂಡಿದೆ. ಬಂದರು ನಗರ, ಶೈಕ್ಷಣಿಕ ಹಬ್ ಜತೆಗೆ ನಮ್ಮ ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರವಾಗಿಯೂ ಗುರುತಿಸಿಕೊಂಡಿದೆ. ಹಾಗಿದ್ದರೂ ಬುದ್ಧಿವಂತರ ಜಿಲ್ಲೆಯಲ್ಲಿ ಬುದ್ಧಿವಂತರಿಂದಲೂ ಮೋಸ ನಡೆಯುತ್ತಿರುತ್ತದೆ. ಬಡಪಾಯಿಗಳು ಬಲಿಪಶುಗಳಾಗುತ್ತಾರೆ ಎಂಬುದನ್ನು ಕಡೆಗಣಿಸಬಾರದು. ನಾವು ಹೆಚ್ಚು ಜಾಗರೂಕರಾಗಿದ್ದಷ್ಟು ಮೋಸ ಹೋಗುವುದರಿಂದ ನಮ್ಮನ್ನು ನಾವು ತಪ್ಪಿಸಿಕೊಳ್ಳಬಹುದು.

ಮೋಸ ಹೋಗುವವರಿದ್ದರೆ, ಮೋಸ ಮಾಡುವವರಿಗೆ ಬಲು ಸುಲಭ ಎಂಬ ಮಾತಿಗೆ ಉದಾಹರಣೆಯಾಗಿ ನನ್ನದೇ ಅನುಭವನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ನಾನು ಖಾಸಗಿ ಬ್ಯಾಂಕ್‌ನಲ್ಲಿ ಸಿಲ್ವರ್ ಕಾರ್ಡೊಂದನ್ನು ಹೊಂದಿದ್ದೆ. ಅದಕ್ಕೆ ನಿಯಮವೆಂದರೆ, ನನ್ನ ಬ್ಯಾಂಕ್ ಖಾತೆಯಿಂದ ಎರಡು ತಿಂಗಳಿಗೊಮ್ಮೆ ಹಣ ಡೆಬಿಟ್ ಆಗುತ್ತಿತ್ತು. ಹಠಾತ್ತಾಗಿ ಅದೊಂದು ದಿನ ಬ್ಯಾಂಕ್‌ನವರು ಗೋಲ್ಡ್ ಕಾರ್ಡ್ ಕಳುಹಿಸಿ, ನಿಮ್ಮ ಸಿಲ್ವರ್ ಕಾರ್ಡ್‌ಗೆ ಬದಲಿಯಾಗಿ ಇದನ್ನು ನೀಡಲಾಗಿದೆ. ಅದರ ಬದಲಿಗೆ ಈ ಕಾರ್ಡ್‌ನ್ನು ಬಳಕೆ ಮಾಡಿ ಎಂದು ಹೇಳಿದ್ದರು. ನಾನು ಹಿಂದಿನಂತೆಯೇ ಆ ಕಾರ್ಡ್ ಎಂದು ಭಾವಿಸಿ ಸುಮ್ಮನಿದ್ದೆ. ಅದೊಂದು ದಿನ ನನ್ನ ಕಾರ್ಡ್ ಓವರ್ ಡ್ಯೂ ಆಗಿದ್ದು, ಹಣ ಪಾವತಿಸಬೇಕೆಂದು ನೋಟಿಸು ಬಂದಾಗ ನನಗೆ ಅಚ್ಚರಿ. ಬ್ಯಾಂಕ್‌ಗೆ ಕರೆ ಮಾಡಿದಾಗ, ನಿಮ್ಮ ಬ್ಯಾಂಕ್ ಖಾತೆಯಿಂದ ಡೆಬಿಟ್ ಮಾಡುವಂತೆ ನೀವು ಅನುಮತಿ ನೀಡಿಲ್ಲ. ಹಾಗಿದ್ದರೆ ನನ್ನ ಹಳೆಯ ಕಾರ್ಡ್ ರದ್ದು ಮಾಡಿ ಹೊಸ ಕಾರ್ಡ್ ನೀಡಿದ್ದು ಯಾರು ನೀವಲ್ಲವೆ? ಹಾಗಿದ್ದರೆ ಹಳೆಯ ನಿಯಮ ಇದಕ್ಕೆ ಅನ್ವಯ ಆಗುವುದಿಲ್ಲ ಎಂದು ಹೇಗೆ ಹೇಳುತ್ತೀರಿ ಎಂದು ಪ್ರಶ್ನಿಸಿದೆ. ನೀವು ಪತ್ರ ಕೊಟ್ಟು ನಿಮ್ಮ ಖಾತೆಯಿಂದ ಡೆಬಿಟ್ ಮಾಡಲು ಬೇಡಿಕೆ ಸಲ್ಲಿಸಿ ಎಂದು ಉತ್ತರಿಸಿದರು. ನಾನು ಪತ್ರ ಕೊಡುವುದಿಲ್ಲ. ನಾನೇನೂ ನಿಮ್ಮಲ್ಲಿ ನನ್ನ ಕಾರ್ಡ್ ಬದಲಿಸಲು ಹೇಳಿಲ್ಲ ಎಂದು ಮರುತ್ತರಿಸಿದೆ. ಎಲ್ಲವನ್ನೂ ರಿವರ್ಸ್ ಮಾಡಿ ಎಂದು ಅವರಿಗೆ ಒತ್ತಾಯಿಸಿದೆ. ಕೊನೆಗೆ ಅದನ್ನೆಲ್ಲಾ ಸರಿ ಪಡಿಸಿದರು. ನಾವು ತಪ್ಪು ಮಾಡದೆಯೂ ಕೆಲವೊಮ್ಮೆ ಈ ರೀತಿಯಾದ ಬಲೆಗೆ ಬೀಳುವ ಸಾಧ್ಯತೆ ಅಧಿಕ. ನಾನೇನಾದರೂ ಮರು ಪತ್ರ ಬರೆಯಲು ಒಪ್ಪಿಕೊಂಡಿದ್ದರೆ, ಅದನ್ನೇ ಮುಂದಿಟ್ಟು, ನನ್ನ ಕಾರ್ಡ್ ನ ಓವರ್ ಡ್ಯೂ ಬಗ್ಗೆ ನನ್ನನ್ನೇ ಏಮಾರಿಸುತ್ತಿದ್ದರು.

ಹಾಗಾಗಿ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದಾಗ ಬಳಕೆದಾರರ ಹಕ್ಕುಗಳನ್ನು ಸಮರ್ಥವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ನನ್ನ ವೇತನ ಠೇವಣಿಯಾಗುತ್ತಿದ್ದ ಬ್ಯಾಂಕ್‌ನಲ್ಲಿ ನಾನು ಮನೆಗೆ ಬೇಕಾದ ಫ್ರಿಡ್ಜ್‌ಗೆ ಸಾಲ ಪಡೆಯಲು ಹೋಗಿದ್ದೆ. ಅಲ್ಲಿ ಲೋನ್ ಕೊಡುತ್ತೇವೆ. ನೀವು ಆರ್‌ಡಿ ತೆರೆಯಬೇಕು ಎಂದಾಗ ಯಾಕೆ ಎಂದು ಕೇಳಿದೆ. ಅದು ನಿಮಗೆ ಒಳ್ಳೆಯದು ಎಂದಾಗ, ಅದನ್ನು ನಿರ್ಧರಿಸುವುದು ನಾನು ಎಂದೆ. ಅವರು ಮತ್ತೆ ಒತ್ತಾಯಿಸಿದಾಗ, ನೀವು ಆರ್‌ಡಿಯನ್ನು ಸಾಲಕ್ಕೆ ಪೂರ್ವ ಬೇಡಿಕೆಯಾಗಿ ಪಡೆಯುವುದಾಗಿ ಬರೆದು ಕೊಡಿ ಎಂದೆ. ಆಗವರು ಇದೆಲ್ಲಾ ಉಸಾಬರಿ ಬೇಡಪ್ಪ ಎಂದು ಫ್ರಿಡ್ಜ್‌ಗೆ ಸಾಲ ಕೊಡಿಸಿದರು.

ಹಿಂದೆ ಆದಾಯ ತೆರಿಗೆ ಪಾವತಿ ಮಾಡುವಾಗ ಕಡ್ಡಾಯ ಠೇವಣಿಯನ್ನೂ ಇರಿಸಬೇಕಾಗಿತ್ತು. ಠೇವಣಿ ಪಡೆಯಲು ಹೋಗುವಾಗ ಬ್ಯಾಂಕ್ ಸಿಬ್ಬಂದಿ, ಅರ್ಜಿ ಇಲ್ಲ ಎನ್ನುತ್ತಾರೆ. ಯಾಕಿಲ್ಲ ಎಂದು ಕೇಳಿದರೆ, ಆ ಫಾರಂ ಇಲ್ಲ ಎಂದಾಗ, ನಿಮ್ಮಲ್ಲಿ ಬೀಗ ಇಲ್ಲವೇ ಹಾಕಿ ಮನೆಗೆ ಹೋಗಿ ಎಂದಾಗ, ನೀವು ಆ ರೀತಿಯಾಗಿ ಮಾತನಾಡಬಾರದು ಎಂದು ಬ್ಯಾಂಕ್ ಸಿಬ್ಬಂದಿ ಪ್ರತಿಕ್ರಿಯಿಸಿದ. ಹಾಗಾದರೆ ನಾನು ಯಾವ ರೀತಿಯಲ್ಲಿ ಮಾತನಾಡಬೇಕು ಎಂದು ಪ್ರಶ್ನಿಸಿದೆ. ಅದು ನನ್ನ ಹಣ. ನಾನು ಅದನ್ನು ಹಿಂಪಡೆಯಬೇಕು ಎಂದಾಗ ಅದನ್ನು ಹಿಂದಿರುಗಿಸುವುದು ನಿಮ್ಮ ಜವಾಬ್ದಾರಿ. ಅದು ಬಿಟ್ಟು ಫಾರಂ ಇಲ್ಲ ಎಂದರೆ ಏನರ್ಥ ಎಂದು ಜೋರಾಗಿ ಮಾತನಾಡಿದೆ. ನಾನು ಬ್ಯಾಂಕ್‌ನ ಬೇರೆ ಶಾಖೆಗೆ ಹೋಗಿ 10 ಫಾರಂ ತಂದು, ಅದರಲ್ಲಿ ಒಂದನ್ನು ಭರ್ತಿ ಮಾಡಿ ಉಳಿದ 9 ಫಾರಂ ಅಟೆಂಡರ್ ಕೈಗೆ ನೀಡಿ, ಇದನ್ನು ನೀವು ಇಟ್ಟುಕೊಳ್ಳಿ. ಬಂದವರಿಗೆ ಈ ರೀತಿ ಶೋಷಣೆ ಮಾಡಬೇಡಿ ಎಂದು ಹೇಳಿ ಬಂದೆ. ಬ್ಯಾಂಕ್‌ನ ಆಡಳಿತದಿಂದ ಬಳಕೆದಾರರು ಕೆಲ ರೀತಿಯ ಶೋಷಣೆಗೆ ಒಳಗಾಗುವುದಲ್ಲದೆ, ಕೆಲವೊಮ್ಮೆ ಬ್ಯಾಂಕ್‌ನ ಕೆಲ ಸಿಬ್ಬಂದಿಗಳ ಉದ್ದಟತನವನ್ನೂ ಎದುರಿಸಬೇಕಾಗುತ್ತದೆ. ಅದಕ್ಕಾಗಿ ಬಳಕೆದಾರರು ತಮ್ಮ ಹಕ್ಕುಗಳನ್ನು ತಿಳಿದುಕೊಂಡಿರುವುದು ಅತ್ಯಗತ್ಯ.

ನರೇಂದ್ರ ನಾಯಕ್

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News