ಆರ್.ಎನ್. ಜಯಗೋಪಾಲ್ ಕಂಡ 'ಡಾ. ರಾಜ್‌ಕುಮಾರ್'

Update: 2018-10-13 12:57 GMT

ಆರ್.ಎನ್. ಜಯಗೋಪಾಲ್ ಸಾವಿರ ಗೀತೆಗಳ ಸರದಾರರೆಂದು ಚಿತ್ರರಸಿಕರಿಂದ ಪ್ರೀತಿಯಿಂದ ಕರೆಸಿಕೊಂಡವರು. ಕಲಾವಿದರ ಕುಟುಂಬದಲ್ಲಿ ಜನಿಸಿ ಬಂದ ಅದೃಷ್ಟವಂತರಿವರು. ತಂದೆ ಆರ್. ನಾಗೇಂದ್ರರಾಯರು ಹುಟ್ಟು ಕಲಾವಿದರು. ಸೋದರ ಕೃಷ್ಣಪ್ರಸಾದ್ ಖ್ಯಾತ ಛಾಯಾಗ್ರಾಹಕರಾದರೆ, ಮತ್ತೊಬ್ಬ ಸೋದರ ಸುದರ್ಶನ್ ಖ್ಯಾತ ನಟ. ಇವರ ನಡುವಿನ ಜಯಗೋಪಾಲ್ ಸಾಹಿತಿ. ಇದೊಂದು ಅಪರೂಪದ ಅನುಬಂಧ ಕಲೆಯ ಸಂಬಂಧ.

ಜಯಗೋಪಾಲ್ ಜನಪ್ರಿಯ ಚಿತ್ರಸಾಹಿತಿ ಜೊತೆಗೆ ಯಶಸ್ವಿ ನಿರ್ದೇಶಕರೂ ಹೌದು. ಒಟ್ಟು ಹತ್ತು ಚಿತ್ರಗಳನ್ನು ಎರಡು ದೂರದರ್ಶನ ಧಾರಾವಾಹಿಗಳನ್ನು ನಿರ್ದೇಶಿಸಿರುವ ಜಯಗೋಪಾಲ್‌ರವರು ರಾಜ್‌ರ ‘ಧೂಮಕೇತು’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ರಾಜ್‌ರ ಅನೇಕ ಚಿತ್ರಗಳಿಗೆ ಸಾಹಿತ್ಯ ರಚನೆ ಮತ್ತು ಗೀತ ರಚನೆಗಳನ್ನು ಸಹ ಮಾಡಿದ್ದಾರೆ. ಆರ್.ಎನ್.ಜೆ. ಯವರನ್ನು ಭೇಟಿಯಾದಾಗ ಚಿತ್ರರಂಗದ ಹಿರಿಯ ಅನುಭವಿಗಳೂ ದಾಖಲೆಗಳ ಸಾಧನೆಗೈದ ಶ್ರೇಷ್ಠರೊಡನೆ ಮಾತನಾಡುವ ಅವಕಾಶ ದೊರೆಯಿತು. ಹೃದಯತುಂಬಿ ಮಾತನಾಡಿದ ಆರ್.ಎನ್.ಜೆ. ಯವರ ನುಡಿಗಳಿಲ್ಲಿವೆ ನಿಮಗಾಗಿ.

ಮೊದಲು ನೋಡಿದ್ದು

ರಾಜ್‌ರನ್ನು ನಾನು ಪ್ರಥಮವಾಗಿ ನೋಡಿದ್ದು ರಂಗದ ಮೇಲೆ ಸುಮಾರು 1950ರಲ್ಲಿ ಇರಬಹುದು. ಆಗ ಕೆಂಪೇಗೌಡ ರಸ್ತೆಯಲ್ಲಿದ್ದ ಹಿರಿಯಣ್ಣನವರ ನಾಟಕಮಂದಿರದಲ್ಲಿ ಸುಬ್ಬಯ್ಯ ನಾಯ್ಡುರವರ ಕಂಪೆನಿಯ ಜನಪ್ರಿಯ ನಾಟಕ ‘ಭಕ್ತ ಅಂಬರೀಷ’ ಪ್ರಯೋಗವಾಗುತ್ತಿತ್ತು. ನಾನಿನ್ನೂ ಆಗ ಶಾಲಾ ವಿದ್ಯಾರ್ಥಿ. ನಮ್ಮ ತಂದೆಯವರೊಡನೆ ನಾಟಕ ವೀಕ್ಷಣೆಗೆ ಹೋಗಿದ್ದೆ. ರಾಜ್ ರಮಾಕಾಂತನ ಪಾತ್ರ ವಹಿಸಿದ್ದರು. ಅದಾಗಲೇ ಆ ಪಾತ್ರದಲ್ಲಿ ಅವರು ಉತ್ತಮವಾಗಿ ಅಭಿನಯಿಸಿ ಜನಮನ್ನಣೆಯನ್ನೂ ಪಡೆದಿದ್ದರು. ಎಲ್ಲರೂ ಆ ಪಾತ್ರವನ್ನು ಹೊಗಳುವವರೇ. ಅಂದು ರಾಜ್ ಸುಶ್ರಾವ್ಯವಾಗಿ ಹಾಡಿದ ಮೋಹ ವಿಲಾಸ... ಎಂಬ ರಂಗಗೀತೆ ಇಂದಿಗೂ ನನ್ನ ಕಿವಿಯಲ್ಲಿ ಗುಂಯ್‌ಗುಡುತ್ತಿದೆ. ನಾಟಕದೊಡನೆ ರಾಜ್‌ರ ರಮಾಕಾಂತನ ಪಾತ್ರವೂ ಆಗ ನನ್ನನ್ನು ಭಾರೀ ಪ್ರಭಾವಿತನನ್ನಾಗಿ ಮಾಡಿತ್ತು. ನಾಟಕದ ನಂತರ ತಂದೆಯವರು ರಂಗವೇರಿ ಕಲಾವಿದರನ್ನೆಲ್ಲ ಹುರಿದುಂಬಿಸಿ ಪ್ರೋತ್ಸಾಹದ ನುಡಿಗಳನ್ನಾಡಿದರು. ವಿಶೇಷವಾಗಿ ಮುತ್ತುರಾಜರನ್ನು ಸಹ ಬೆನ್ನು ತಟ್ಟಿ ಹರಸಿ ಉತ್ತಮ ಅಭಿನಯಕ್ಕಾಗಿ ಶ್ಲಾಘಿಸಿದರು. ನಂತರ ನಾನವರನ್ನು ತೆರೆಯ ಮೇಲೆ ನೋಡಿದ್ದು ಬೇಡರ ಕಣ್ಣಪ್ಪ ಚಿತ್ರದಲ್ಲಿ. ಅದಂತೂ ಮಹೋನ್ನತ ಅನುಭವ. ಕಣ್ಣಪ್ಪನ ಜೀವಂತಿಕೆಯ ಕ್ಷಣಗಳು ಇಂದಿಗೂ ಅಮರವಾಗಿರುವುದರ ಹಿನ್ನೆಲೆಯಲ್ಲಿ ರಾಜ್ ಪರಕಾಯ ಪ್ರವೇಶ ಸ್ಮತಿ ಅಚಲ.

ನಾನು ಸಾಹಿತಿಯಾದ ನಂತರ ಅವರನ್ನು ಭೇಟಿಯಾದದ್ದು ‘ನಾಂದಿ’ ಚಿತ್ರದ ಆರಂಭದಲ್ಲಿ ಅದೊಂದು ಅಪೂರ್ವ ಅನುಭವ. ಪ್ರಥಮ ಭೇಟಿಯಲ್ಲಿಯೇ ನಾನವರ ಸೌಜನ್ಯಕ್ಕೆ ಮಾರು ಹೋದೆ. ಚಿತ್ರೀಕರಣವು ಮುಂದುವರಿದಂತೆಲ್ಲಾ ನಮ್ಮ ಸ್ನೇಹವು ಬೆಳೆಯುತ್ತಾ ಹೋಯಿತು. ಅವರಿಗೆ ಬಿಡುವಿನಲ್ಲಿ ಹಾಡುವ ಮತ್ತು ಗುನುಗುನಿಸುವ ಹವ್ಯಾಸ. ಆಗೆಲ್ಲ ನಾನವರಿಂದ ಹಾಡಿಸುತ್ತಿದ್ದೆ. ಒಳ್ಳೆಯ ಶಾರೀರ ಪಡೆದಿದ್ದ ರಾಜ್ ಹಾಡುತ್ತಿದ್ದರೆ ನಮಗೆಲ್ಲ ಖುಷಿ. ನನಗೂ ಒಂದಿಷ್ಟು ಸಂಗೀತ ಜ್ಞಾನವಿದ್ದುದರಿಂದ ರಾಜ್‌ರನ್ನು ಹಾಡಲು ಪ್ರೇರೇಪಿಸಿ ಅವರಿಂದ ಸೊಗಸಾಗಿ ಮೂಡಿ ಬರುತ್ತಿದ್ದ ಗಾಯನವನ್ನು ಕೇಳಿ ಆನಂದಿಸುತ್ತಿದ್ದೆವು.

ಚಿತ್ರದಲ್ಲಿ ರಾಜ್ ಉನ್ನತಮಟ್ಟದ ಅಭಿನಯವನ್ನು ನೀಡಿದ್ದಾರೆ. ನನಗಂತೂ ಚಿತ್ರ ಬಹು ಪ್ರಿಯ. ಅದರಲ್ಲಿನ ಒಂದು ಸನ್ನಿವೇಶ, ಹೆಂಡತಿ ಕಿವುಡಿ ಮತ್ತು ಮೂಕಿ. ಗರ್ಭಿಣಿಯಾದ ಆಕೆಯ ಹೊಟ್ಟೆಯಲ್ಲಿನ ತನ್ನ ಮಗುವಿಗೆ ಬಡತನದ ಬೇಗೆಯಲ್ಲಿ ಬೇಯುವ ತಾನು ಸೀಮಂತವನ್ನು ಮಾಡುವುದಾದರೂ ಹೇಗೆ? ಆ ಸಂದರ್ಭದಲ್ಲಿ ನಾಯಕ ನೊಂದು ಹಾಡುತ್ತಾನೆ ಹಾಡೊಂದ ಹಾಡುವೆ ನೀ ಕೇಳು ಮಗುವೆ... ಎಂದು. ನಿಜವಾದ ಬಡ ಗಂಡನೊಬ್ಬ ತೋರುವ ಭಾವನೆಗಳನ್ನೇ ಕೇಂದ್ರೀಕರಿಸಿ ಹೊರಹೊಮ್ಮಿಸಿದ ಅವರ ನೈಜ ಅಭಿನಯವನ್ನು ನಾನು ಬರೆದ ಈ ಹಾಡಿನಲ್ಲಿ ಅವರು ನೀಡಿದ್ದಾರೆ. ಅದು ನನಗೆ ಇಂದಿಗೂ ಮೆಚ್ಚಿನ ಹಾಡು ಮತ್ತು ಸನ್ನಿವೇಶ. ಎನ್ನೆಲ್ ನಿರ್ದೇಶನದ ಈ ಚಿತ್ರಕ್ಕೆ ನಾನು ಸಾಹಿತ್ಯ ಒದಗಿಸಿದ್ದೇನೆ.

ಈ ಗೀತೆಯ ಕಂಪೋಸಿಂಗ್ ಸಂದರ್ಭ. ರಾಜ್ ಮನೆಯಲ್ಲಿ ಊಟ ಮಾಡಿ ವರಾಂಡದಲ್ಲಿ ವಿರಮಿಸಿದ್ದೆವು. ರಾಜ್ ಮನೆಯೊಳಗೆ ಮಾತುಕತೆಯಲ್ಲಿದ್ದರು. ಸಾಮಾನ್ಯವಾಗಿ ಬಹುತೇಕ ಗೀತೆಗಳ ಕಂಪೋಸಿಂಗ್ ಬಹಳ ಸಮಯ ತೆಗೆದುಕೊಳ್ಳುತ್ತಿತ್ತು. ಅಂತೆಯೇ ಇದೂ ಸಹ ಹಾಗೆಯೇ ಆಗಬಹುದೆಂಬ ಅನಿಸಿಕೆ ತಂಡದಲ್ಲಿತ್ತು. ಆದರೆ ನಾನು ವಿಜಯಭಾಸ್ಕರ್ ಸೇರಿ ಕೇವಲ ಐದೇ ನಿಮಿಷದಲ್ಲಿ ಈ ಹಾಡಿನ ಕಂಪೋಸಿಂಗ್ ಅಲ್ಲಿಯೇ ಮುಗಿಸಿದೆವು. ಎಲ್ಲರಿಗೂ ಅಚ್ಚರಿ. ರಾಜ್‌ಗಂತೂ ಆಶ್ಚರ್ಯ. ಹಾಡನ್ನು ಕೇಳಿ ಮೆಚ್ಚಿಕೊಂಡರಲ್ಲದೆ ನೈಜವಾಗಿ ಅಭಿನಯಿಸಿದರೂ ಸಹ.

ತ.ರಾ.ಸು. ಸಂಭಾಷಣೆ

ತೆಲುಗಿನ ನಿರ್ದೇಶಕರಾದ ಪೆಕೇಟಿ ಶಿವರಾಂರವರು ತ.ರಾ.ಸು. ರವರ ಪ್ರಸಿದ್ಧ ಕೃತಿ ‘ಚಕ್ರತೀರ್ಥ’ ನಿರ್ದೇಶಿಸುತ್ತಿದ್ದ ಸಂದರ್ಭ. ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ತ.ರಾ.ಸು. ಅವರೇ ಸಿದ್ಧಪಡಿಸಿದ್ದರು. ನಿರ್ಮಾಪಕರಾದ ಪಾಲ್‌ರವರು ತ.ರಾ.ಸು. ಅವರ ಒಪ್ಪಿಗೆಯ ಮೇರೆಗೆ ಚಿತ್ರಕ್ಕೆ ಹೊಂದುವಂತೆ ಅದನ್ನು ಪರಿಷ್ಕರಿಸಿ ಕೊಡಲು ನನ್ನನ್ನು ಕೋರಿದರು. ನನಗಾದರೊ ತ.ರಾ.ಸು. ಅವರ ಸಾಹಿತ್ಯವನ್ನು ತಿದ್ದಲು ಮುಜುಗರ. ಆದರೆ ಸ್ವಯಂ ತ.ರಾ.ಸು. ಅವರೇ ನಿನ್ನ ಮೇಲೆ ಸಂಪೂರ್ಣ ನಂಬಿಕೆ ಇದೆಯೆಪ್ಪ.... ‘ಚಿತ್ರಕ್ಕೆ ಹೇಗೆ ಬೇಕೊ ಹಾಗೆ ಹೊಂದಿಸಿಕೊ....’ ಎಂದು ಆಶೀರ್ವದಿಸಿದರು. ತ.ರಾ.ಸು. ಹಾರೈಕೆಯಂತೆ ನನ್ನ ಕೆಲಸವೂ ನಿರ್ದೇಶಕ ನಿರ್ಮಾಪಕರಿಗೆ ಮೆಚ್ಚುಗೆಯಾಯಿತು. ಚಿತ್ರದಲ್ಲಿ ರಾಜ್-ಜಯಂತಿ-ಉದಯ್-ನರಸಿಂಹರಾಜು... ಹೀಗೆ ಉತ್ತಮ ತಾರಾಗಣವಿತ್ತು. ಚಿತ್ರ ಯಶಸ್ವಿಯಾಯಿತು. ಚಿತ್ರದಲ್ಲಿ ಸ್ವಯಂ ತ.ರಾ.ಸು. ಅವರೇ ಬರೆದ ಗೀತೆಗಳೂ ಇದ್ದು, ಹೃದಯಂಗಮವಾಗಿ ಚಿತ್ರಿತವಾಗಿತ್ತು. ಚಿತ್ರದ ಪರಿಣಾಮಕಾರಿ ಸನ್ನಿವೇಶದಲ್ಲಿ ಮೂಡಿ ಬರುವ ಗೀತೆಯೊಂದನ್ನು ನಾನೂ ಸಹ ಬರೆದೆ. ರಾಜ್-ಜಯಂತಿಯವರ ಮೇಲೆ ಚಿತ್ರಿಸಲಾದ ಆ ಹಾಡು ನಿನ್ನ ರೂಪು ಕಣ್ಣಲಿ, ನಿನ್ನ ದನಿಯು ಕಿವಿಯಲಿ, ನಿನ್ನ ಧ್ಯಾನ ಮನದಲಿ, ನಾನು ನಿನ್ನ ಬಳಿಯಲಿ.... ಇದೂ ಸಹ ನನ್ನ ಮೆಚ್ಚಿನ ಗೀತೆಗಳಲ್ಲೊಂದು.

ಧೂಮಕೇತು

ಒಮ್ಮೆ ಆಕಸ್ಮಿಕವೋ ಎಂಬಂತೆ ಪಾಲ್‌ರವರು ಮನೆಗೆ ಬಂದು ಶಾಕ್ ಎನ್ನಬಹುದಾದ ಸುದ್ದಿ ನೀಡಿದರು. ‘ಜಯಗೋಪಾಲ್ ನೀವು ನನ್ನ ಮುಂದಿನ ಚಿತ್ರ ನಿರ್ದೇಶಿಸಬೇಕು’ ಎಂದಾಗ ಒಂದು ಕ್ಷಣ ನನಗೆ ಏನು ಹೇಳಬೇಕೆಂಬುದೇ ತೋಚದಾಯಿತು. ‘ಸಾರ್ ತಂದೆಯವರನ್ನು ಕೇಳಿ ಹೇಳುವೆ’ ಎಂದೆ.

ತಂದೆಯವರನ್ನು ಕೇಳಿದೆ. ಅವರೂ ಸಹ ಬೆನ್ನು ತಟ್ಟಿ ಆಶೀರ್ವದಿಸಿದರು. ‘ನೀನು ಚಲನಚಿತ್ರದ ಎಲ್ಲ ವಿಭಾಗಗಳಲ್ಲೂ ಪರಿಣಿತಿ ಪಡೆಯಬೇಕು’ ಎಂದರು. ಚಿತ್ರಕ್ಕೆ ರಾಜ್ ನಾಯಕರು ಎಂದಾಗಲಂತೂ ನನಗೆ ಅಪಾರ ಸಂತೋಷವೇ ಆಯಿತು. ಅದುವರೆಗೆ ಬರವಣಿಗೆಯನ್ನಷ್ಟೇ ಮಾಡಿಕೊಂಡಿದ್ದ ನನ್ನ ಶ್ರದ್ಧೆ ತಾಳ್ಮೆಯ ಕೆಲಸಗಳನ್ನು ಕಂಡು ಪಾಲ್‌ರವರು ನಂಬಿಕೆಯಿಂದ ನಿರ್ದೇಶಕನ ಹೊಣೆ ಹೊರಿಸಿದರು. ಈ ಎಲ್ಲ ಆನಂದದ ಹಿನ್ನೆಲೆಯೊಡನೆ ನಾನು ‘ಧೂಮಕೇತು’ ಚಿತ್ರಕಥೆ ಸಿದ್ಧಪಡಿಸಿದೆ.

ರಾಜ್‌ರಿಗೆ ಇದು ನೂರ ಒಂದನೇ ಚಿತ್ರವಾದರೆ ನನಗೆ ನಿರ್ದೇಶಕನಾಗಿ ಪ್ರಥಮ ಚಿತ್ರವಾಯಿತು. ಅದಾಗಲೇ ರಾಜ್ ಶತ ಚಿತ್ರಗಳನ್ನು ಯಶಸ್ವಿಯಾಗಿ ಪೂರೈಸಿದ ಸವಿನೆನಪಿಗಾಗಿ ಬೆಂಗಳೂರಿನಲ್ಲಿ ಯೋಜಿಸಲಾಗಿದ್ದ ಅವಿಸ್ಮರಣೀಯ ಸನ್ಮಾನ ಸಮಾರಂಭವನ್ನು ಮುಗಿಸಿಕೊಂಡು ಮದ್ರಾಸ್‌ಗೆ ಹಿಂದಿರುಗಿದ್ದರು. ನಾವುಗಳು ಸಹ ಆ ಸಮಾರಂಭ ಮತ್ತು ಅಭೂತಪೂರ್ವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದೆವು. ನಿಜಕ್ಕೂ ಅದೊಂದು ಬೃಹತ್ತಮ ಸಮಾರಂಭವೇ ಸರಿ. ಕನ್ನಡ ಚಿತ್ರರಂಗ ಅದುವರೆಗೂ ಕಂಡು ಕೇಳರಿಯದ ಸಂಭ್ರಮೋತ್ಸಾಹದ ಕ್ಷಣಗಳು. ನಾಟಕ ಬ್ರಹ್ಮ ಗುಬ್ಬಿ ವೀರಣ್ಣನವರಿಂದ ರಾಜ್‌ರಿಗೆ ‘ನಟ ಸಾರ್ವಭೌಮ’ ಪ್ರಶಸ್ತಿ ಪ್ರದಾನವಾಯಿತು.

ಧೂಮಕೇತುವಿನಲ್ಲಿ ರಾಜ್-ಉದಯ್ ಪ್ರಧಾನ ಭೂಮಿಕೆಯಲ್ಲಿದ್ದರು. ಇದೊಂದು ಯಶಸ್ವಿ ಕಮಿರ್ಷಿಯಲ್ ಚಿತ್ರವಾಗಬೇಕೆಂದು ರಿಸ್ಕ್ ತೆಗೆದುಕೊಂಡು ನಿರ್ದೇಶಿಸಿದೆ. ಸಾಹಸ ಪ್ರಧಾನ ಸನ್ನಿವೇಶಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಸರ್ಕಸ್ ಪ್ರದರ್ಶನವನ್ನು ಚಿತ್ರದಲ್ಲಿ ಬಳಸಿಕೊಂಡಿದ್ದು, ಕನ್ನಡ ಚಿತ್ರದಲ್ಲಿ ಸರ್ಕಸ್ ಅಳವಡಿಕೆ ಅಂದಿನ ಮಟ್ಟಿನ ಹೊಸ ಪ್ರಯೋಗವೆನಿಸಿತು. ಅಂತೆಯೇ ಚಿತ್ರ ಯಶಸ್ವಿಯೂ ಆಯಿತು. ‘ಧೂಮಕೇತು’ ಶೀರ್ಷಿಕೆಗೆ ಅನ್ವರ್ಥವಾಗಿ ನವೀನ ಬಗೆಯಲ್ಲಿ ಖಳನಾಗಿ ಉದಯ್‌ಕುಮಾರ್ ಸಹ ಅದ್ಭುತ ಅಭಿನಯ ನೀಡಿದರು.

ವಿಜ್ಞಾನಿಯಾಗಿ ನರಸಿಂಹರಾಜುರವರ ಪ್ರಯೋಗಗಳ ಸನ್ನಿವೇಶಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿತ್ತು. ನನ್ನ ನಿರ್ದೇಶನದ ಮೊದಲ ಚಿತ್ರವಾದರೂ ರಾಜ್ ಎಲ್ಲಿಯೂ ಅಡಚಣೆಯಾಗದಂತೆ ಪೂರ್ಣವಾಗಿ ಸಹಕರಿಸುತ್ತಿದ್ದರು. ಹೊರಾಂಗಣಕ್ಕೆಂದು ನಂದಿಬೆಟ್ಟ, ಶ್ರೀರಂಗಪಟ್ಟಣ ಮುಂತಾದೆಡೆಗಳಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದ ರಾಜ್ ಮತ್ತೆ ಸಂಜೆ 6 ರಿಂದ ಹನ್ನೊಂದರ ತನಕ ಒಳಾಂಗಣ ಚಿತ್ರೀಕರಣಗಳಲ್ಲಿಯೂ ಭಾಗವಹಿಸಿ ಶೆಡ್ಯೂಲ್‌ಗಳನ್ನು ಕಾಲಕ್ಕೆ ಸರಿಯಾಗಿ ಮುಗಿಸಿಕೊಡುತ್ತಿದ್ದರು. ಸಮಯ ಪಾಲನೆ ಮತ್ತು ಕರ್ತವ್ಯ ಪ್ರಜ್ಞೆ ಅವರ ಶಿಸ್ತಿನ ಕಲಾ ಜೀವನದ ಅಧ್ಯಾಯದ ಮೊದಲ ಪುಟಗಳು ಎಂದೇ ಹೇಳಬೇಕು.

ಗೀತೆಗಳ ಕುರಿತು

ಕೆ.ಸಿ.ಎನ್. ರವರ ‘ದಾರಿ ತಪ್ಪಿದ ಮಗ’ ಚಿತ್ರಕ್ಕೆಂದು ದೊಡ್ಡಬಳ್ಳಾಪುರದಲ್ಲಿ ಗೀತೆಗಳನ್ನು ಕಂಪೋಸಿಂಗ್ ಮಾಡುತ್ತಿದ್ದೆವು. ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್‌ರವರ ಸಾಂದರ್ಭಿಕ ರಾಗಗಳಿಗೆ ನಾನು ಸಾಹಿತ್ಯ ರಚಿಸಿಕೊಟ್ಟಿದ್ದೆ. ಚಿತ್ರಕ್ಕೆಂದು ಆಯ್ಕೆಯಾದ ಒಂದು ಗೀತೆಯನ್ನು ಹಿಂದಿರುಗಿಸಲಾಗಿತ್ತು. ಗೀತೆಗಾಗಿ ನಮ್ಮಲ್ಲಿ ಕಾದಿದ್ದ ಬೇರೆ ನಿರ್ಮಾಪಕರೊಬ್ಬರಿಗೆ ಗೀತೆಯನ್ನು ನೀಡಿದೆವು. ನಂತರ ತಿಳಿಯಿತು ಅದೇ ಗೀತೆ ರಾಜ್‌ರಿಗೆ ಬಹು ಪ್ರಿಯವಾಗಿತ್ತು ಎಂದು.

ಸ್ವಯಂ ಜಿ.ಕೆ. ವೆಂಕಟೇಶ್‌ರವರೇ ರಾಜ್‌ರಿಗೆ ‘ಯೋಚ್ನೆ ಮಾಡ್ಬೇಡ ತಮ್ಮಯ್ಯ’ ಎಂದವರೇ ಅಗತ್ಯವಿದ್ದ ಸನ್ನಿವೇಶಕ್ಕೆ ಎಂಟು ರಾಗಗಳನ್ನು ಹಾಕಿ ತೋರಿಸಿದರು. ಅದರಲ್ಲಿ ಒಂದನ್ನು ರಾಜ್ ಮೆಚ್ಚಿ ಆರಿಸಿದರು. ಜಿ.ಕೆ. ವೆಂಕಟೇಶ್ ಅವರಿಗೆ ಸ್ಥಳದಲ್ಲಿಯೇ ರಾಗಗಳನ್ನು ಹೊಸೆಯುವ ಅದ್ಭುತ ಪ್ರತಿಭೆ ಇತ್ತು. ಸರಿ ರಾಜ್ ಆರಿಸಿದ ರಾಗಕ್ಕೆ ನಾನು ಸಾಹಿತ್ಯ ರಚಿಸಿದೆ. ರಾಜ್ ಮನಸಾರೆ ಮೆಚ್ಚಿಕೊಂಡರು. ಪಿ.ಬಿ. ಶ್ರೀನಿವಾಸ್ ಸೊಗಸಾಗಿ ಹಾಡಿದ ಗೀತೆಯಲ್ಲಿ ರಾಜ್ ತನ್ಮಯರಾಗಿ ಅಭಿನಯಿಸಿ ಗೀತೆಗೆ ಕಳೆತಂದುಕೊಟ್ಟರು. ಆ ಗೀತೆ ಯಾವುದೆಂದರೆ- ಕಣ್ಣಂಚಿನ ಈ ಮಾತಲಿ ಏನೇನೊ ತುಂಬಿದೆ, ಕವಿ ಕಾಣದ ಶೃಂಗಾರದ ರಸ ಕಾವ್ಯ ಇಲ್ಲಿದೆ...

ಆರ್.ಎನ್. ಜಯಗೋಪಾಲ್‌ರವರು ರಾಜ್ ಚಿತ್ರಗಳಿಗಾಗಿ ಸುಮಾರು ಒಂದು ನೂರಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದಾರೆ. ಈ ಗೀತೆಗಳಲ್ಲಿ ಅವರಿಗೆ ಎಲ್ಲವೂ ಪ್ರಿಯವೆ. ಎಷ್ಟಾದರೂ ಅವು ಉತ್ತಮ ರಚನೆಗಳಲ್ಲವೆ, ಅವುಗಳಲ್ಲಿ ಕೆಲವನ್ನು ಅವರೇ ನೆನೆಸಿಕೊಂಡಂತೆ ಇಲ್ಲಿ ಹೇಳಿದೆ. ಆಗದು ಎಂದು ಕೈಲಾಗದು ಎಂದು... ‘-ಬಂಗಾರದ ಮನುಷ್ಯ’

ನೀ ಬಂದು ನಿಂತಾಗ ನಿಂತು ನೀ ನಕ್ಕಾಗ... -‘ ಕಸ್ತೂರಿ ನಿವಾಸ’

ನಿನ್ನಾ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ... -‘ ಸ್ವಯಂವರ’

ಕಣ್ಣು ರೆಪ್ಪೆ ಒಂದನ್ನೊಂದು ಮರೆವುದೆ... -‘ಪರೋಪಕಾರಿ’

ನೀ ತಂದ ಕಾಣಿಕೆ ನಗೆ ಹೂವ ಮಾಲಿಕೆ... -‘ಹೃದಯ ಸಂಗಮ’

ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ... -‘ಸಂಧ್ಯಾರಾಗ’

ಒಂದು ದಿನ ಎಲ್ಲಿಂದಲೋ ನೀ ಬಂದೆ... -‘ಹಸಿರು ತೋರಣ’

ನಿದಿರೆಯು ಸದಾ ಏಕೋ ದೂರ... -‘ಸಿಪಾಯಿ ರಾಮು’

ಅವರು ನನ್ನ ಅನೇಕ ಭಕ್ತಿ ರಚನೆಗಳನ್ನು ಕ್ಯಾಸೆಟ್‌ಗಾಗಿಯೂ ಹಾಡಿದ್ದಾರೆ. ಗೀತೆ ಉತ್ತಮವಾಗಿ ಮೂಡಿ ಬರುವವರೆಗೂ ಅವರೇ ಸ್ವಯಂ ಒನ್ಸ್‌ಮೋರ್ ಆಗಿ ಪುನರ್ ಹಾಡುತ್ತಲೇ ಉತ್ತಮಿಕೆಗಾಗಿ ಪ್ರಯತ್ನಿಸುತ್ತಾರೆ. ನಾವುಗಳೆಲ್ಲಾ ಸಾರ್ ಓ.ಕೆ. ಎಂದರೂ ‘ಇನ್ನೊಂದು ಸಲ ಹಾಡಿ ಬಿಡ್ತೇನೆ’ ಎಂದು ಪ್ರೀತಿ ಮಿಶ್ರಿತ ಮನವಿ ಮಾಡಿಕೊಳ್ಳುತ್ತಾರೆ. ಅವರ ಆ ಹುಮ್ಮಸ್ಸು ಹಾಡಿನಿಂದ ನಿರೀಕ್ಷಿಸುವ ಖಚಿತ ಫಲಿತಾಂಶದ ಕಾತರ ಇವನ್ನೆಲ್ಲ ಸನಿಹದಿಂದ ಕಂಡಾಗ ಅವರಿನ್ನೂ ಕಲಿಯುತ್ತಿರುವರೇನೋ ಎನಿಸಿಬಿಡುತ್ತದೆ. ಅವರೆಂದೂ ಮಹಾನ್ ಗಾಯಕನೆಂದು ಸೋಗು ಹಾಕಿದವರಲ್ಲ. ನಮ್ಮಿಡನೆ ಒಂದಾಗಿ ಬೆರೆತು ನಮ್ಮವರಾಗಿ ಹಾಡುವ ರಾಜ್ ಭಾವಕ್ಕೆ ಪ್ರಾಧಾನ್ಯತೆ ನೀಡಿ ತನ್ಮಯರಾಗಿ ಹಾಡುವುದರಿಂದಲೇ ಅವರ ಗೀತೆಗಳಿಗೆ ಅಪಾರ ಬೇಡಿಕೆ. ಅವರ ಗಾಯನ ರಸಿಕರಲ್ಲಿ ಚಿರಸ್ಥಾಯಿ. ನಟನಾಗಿ ಅವರು ಹಾಡುತ್ತಾರೆ ಎಂಬುದೇ ವಿಶೇಷ.

ಮೆಚ್ಚಿದ ಪಾತ್ರಗಳು

ನಾನು ತುಂಬಾ ಮೆಚ್ಚಿಕೊಂಡ ಅವರ ಚಿತ್ರಗಳೆಂದರೆ, ‘ನಾಂದಿ’, ತುಕಾರಾಂ’, ‘ಕರುಳಿನ ಕರೆ’, ‘ಭಕ್ತ ಕುಂಬಾರ’, ‘ಕೃಷ್ಣದೇವರಾಯ’, ‘ಕಸ್ತೂರಿ ನಿವಾಸ’, ‘ಬಂಗಾರದ ಮನುಷ್ಯ’, ‘ಜೀವನ ಚೈತ್ರ’... ಇತ್ಯಾದಿ. ‘ಸನಾದಿ ಅಪ್ಪಣ್ಣ’ನಲ್ಲಿ ಷಹನಾಯ್ ನಾದಕ್ಕೆ ತುಟಿ ಚಲನೆ ಹೊಂದಿಸಿ ಅವರು ನೀಡಿದ ಪಾತ್ರೋಚಿತ ಅಭಿನಯ ಅಮೋಘ. ಕನಕದಾಸದಲ್ಲಿನ ರಾಜ್, ಪಿ.ಬಿ.ಎಸ್. ರವರ ಭಾವಸಂಗಮದಲ್ಲಿ ಮಿಲನವಾದ ಹಾಡುಗಳು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿದೆ.

ಮಂತ್ರಾಲಯ ಮಹಾತ್ಮೆ ನೆನೆದೊಡನೆ ರಾಯರ ಪಾತ್ರಧಾರಿ ರಾಜ್ ಕಣ್ಣೆದುರು ಪ್ರತ್ಯಕ್ಷರಾಗುತ್ತಾರೆ. ಚಿತ್ರ ನನಗೆ ಅಪಾರವಾಗಿ ಹಿಡಿಸಿತು. ಕೊನೆಯಲ್ಲಿ ಅವರು ಹಾಡುತ್ತಾ ಬರುವ ಇಂದು ಎನಗೆ ಗೋವಿಂದಾ.. ಹಾಡಿನ ಸನ್ನಿವೇಶದಲ್ಲಿಯಂತೂ ಕಣ್ಣೀರು ಬರುವ ಅಭಿನಯವಿದೆ. ಈ ಚಿತ್ರದುದ್ದಕ್ಕೂ ಅವರು ಸಾತ್ವಿಕರಾಗಿ ವ್ರತಾಚರಣೆ ಕೈಗೊಂಡು ಪಾತ್ರದಲ್ಲಿ ಪ್ರವೇಶಿಸಿ ಜೀವಿಸಿದ್ದನ್ನು ಮರೆಯಲಾಗದು.

ಪಾತ್ರಗಳ ದೃಷ್ಟಿಯಿಂದ ವೈವಿಧ್ಯ ಪಡೆದ ಶ್ರೇಷ್ಠರು ರಾಜ್ ಎಂದು ಅಭಿಪ್ರಾಯ ಪಡುವ ಆರ್.ಎನ್.ಜೆ. ರಾಜ್‌ರನ್ನು ‘ಕನ್ನಡ ಸಂಸ್ಕೃತಿಯ ಆಸ್ತಿ’ ಎನ್ನುತ್ತಾರೆ. ರಾಜ್ ಪೌರಾಣಿಕವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ. ಈ ದೃಷ್ಟಿಯಿಂದ ಅವರ ಪರಿಕಲ್ಪನೆಯಲ್ಲಿ ಒಡಮೂಡಿರುವ ಪಾತ್ರ ಮಹಾಭಾರತದ ‘ಕರ್ಣ’. ಕರ್ಣನಾಗಿ ರಾಜ್ ಆದಷ್ಟು ಬೇಗ ಬೆಳ್ಳಿತೆರೆ ಅಲಂಕರಿಸುವಂತಾಗಲಿ ಎಂದು ಹಾರೈಸುತ್ತಾರೆ. ಹಾಗೆಯೇ ದುರಂತ ಪಾತ್ರಗಳು ಸಾಮಾಜಿಕ ಕಥನಗಳತ್ತಲೂ ರಾಜ್ ಗಮನಹರಿಸುವಂತಾದರೆ ಚೆನ್ನು ಎನ್ನುತ್ತಾರೆ.

ನೆನಪು

ಅರವತ್ತರ ದಶಕದಲ್ಲಿ ಬರ ಪರಿಹಾರ ನಿಧಿಗೆಂದು ಕಲಾವಿದರ ತಂಡ ತೆರೆದ ವಾಹನಗಳಲ್ಲಿ ಬೆಂಗಳೂರಿನಲ್ಲಿ ಜಾಥಾ ಹೊರಟಿದ್ದೆವು. ‘ಬರಪೀಡಿತರಿಗೆ ದಾನ ಮಾಡಿ, ದೇಣಿಗೆ ನೀಡಿ’ ಎಂಬುದು ನಮ್ಮೆಲ್ಲರ ಘೋಷಣಾ ವಾಕ್ಯವೂ ಆಗಿತ್ತು. ಉತ್ಸಾಹದಿಂದ ಹೊರಟಿತ್ತು. ಕಲಾವಿದರ ಜಾಥಾ, ಬಿಸಿಲಿನ ಝಳ, ತಾಪ ಆದರೂ ಇವೆಲ್ಲದರ ನಡುವೆಯೂ ನಾವು ಹೊರಟ ಉದ್ದೇಶ ನಮಗೆ ಮುಖ್ಯವಾಗಿತ್ತು. ಆಯಾಸ ಬಳಲಿಕೆಗಳ ಮಧ್ಯೆ ರಾಜ್ ಆಗಾಗ ನಮಗೆ ಸಂತಸದ ಸಿಂಚನ ನೀಡುತ್ತಿದ್ದರು. ಬರ ಪೀಡಿತರಿಗೆ - ಸಹಾಯ ನೀಡಿ ಎಂಬ ಘೋಷಣೆಗಳ ಮಧ್ಯೆ ರಾಜ್ ಒಮ್ಮೆಮ್ಮೆ ವಿವಾಹ ಪೀಡಿತರಿಗೆ ಎಂದು ಬಿಡುತ್ತಿದ್ದರು. ಆಗ ನಾವೆಲ್ಲಾ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದೆವು ಎಂದು ನಗು ನಗುತ್ತಲೇ ನೆನೆಸಿಕೊಂಡರು ಆರ್.ಎನ್.ಜೆ.

ಆರ್.ಎನ್.ಆರ್.

ಆರ್.ಎನ್. ಜಯಗೋಪಾಲ್‌ರವರ ತಂದೆ ಆರ್. ನಾಗೇಂದ್ರರಾವ್‌ರವರು ಸಹ ರಾಜ್ ಅತಿಥಿ ನಟರಾಗಿದ್ದ ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ಸುದರ್ಶನ್ ನಾಯಕರಾಗಿದ್ದ ಹಳ್ಳಿಯ ಕಥಾ ಹಿನ್ನೆಲೆ ಹೊಂದಿದ ‘ನಾಡಿನ ಭಾಗ್ಯ’ ಚಿತ್ರದಲ್ಲಿ ರಾಜ್ ಸಿ.ಐ.ಡಿ. ಅಧಿಕಾರಿಯಾಗಿದ್ದಾರೆ. ಚಿತ್ರದಲ್ಲಿನ ಆಪಾದಿತರನ್ನು ಮಾರುವೇಷದಲ್ಲಿ ಹೋಗಿ ಹಿಡಿದು ಕಾನೂನಿಗೆ ಒಪ್ಪಿಸಿ ಆದರ್ಶವಾದಿ ನಾಯಕನ ಮೇಲೆ ಬಂದಂತಹ ಆಪಾದನೆಯನ್ನು ನಿವಾರಿಸಿ ನಿಜವಾದ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಪಾತ್ರದಲ್ಲಿ ರಾಜ್ ಸ್ನೇಹಪೂರ್ವಕವಾಗಿ ಅಭಿನಯಿಸಿದ್ದಾರೆ.

ರಾಜ್ ಚಿತ್ರ ಜೀವನದಲ್ಲಿ ಅವರು ಅತಿಥಿ ನಟನಾಗಿ ಕಾಣಿಸಿಕೊಂಡ ಪ್ರಸಂಗಗಳು ಬಹಳ ಕಡಿಮೆ. ಒಂದೆರಡು ಚಿತ್ರಗಳಲ್ಲಿ ಅವರು ಅತಿಥಿಗಳಾಗಿ ಅಭಿನಯಿಸಿದ್ದರು ಪೂರ್ಣ ಪ್ರಮಾಣದಲ್ಲಿ ಅತಿಥಿ ನಟರಾಗಿ ಅವರು ‘ನಾಡಿನ ಭಾಗ್ಯ’ದಲ್ಲಿ ಅಭಿನಯಿಸಿದ್ದಾರೆ. ಇದು ಅವರು ನಾಗೇಂದ್ರರಾಯರಲ್ಲಿ ಇಟ್ಟಿದ್ದ ವಿಶ್ವಾಸದ ದ್ಯೋತಕ. ಆರ್.ಎನ್.ಆರ್. ರವರು ರಾಜ್‌ರೊಡನೆ ‘ರಣಧೀರ ಕಂಠೀರವ’, ‘ಕರುಳಿನ ಕರೆ’, ‘ವೀರ ಕೇಸರಿ’, ‘ಹಣ್ಣೆಲೆ ಚಿಗುರಿದಾಗ’.... ಮುಂತಾದ ಚಿತ್ರಗಳಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ತಂದೆಯವರಿಗೂ ರಾಜ್‌ರನ್ನು ಕಂಡರೆ ಅಪಾರ ಅಭಿಮಾನ ವಾತ್ಸಲ್ಯಗಳಿತ್ತು ಎನ್ನುತ್ತಾರೆ ಆರ್.ಎನ್.ಜೆ.

ಆರ್.ಎನ್. ಜಯಗೋಪಾಲ್

Writer - ಎಸ್. ಜಗನ್ನಾಥರಾವ್ ಬಹುಳೆ

contributor

Editor - ಎಸ್. ಜಗನ್ನಾಥರಾವ್ ಬಹುಳೆ

contributor

Similar News