ಯಾವ ಪುರುಷಾರ್ಥಕ್ಕೆ ರಾಹುಲ್ ಸಂವಾದ: ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ
ಬೆಂಗಳೂರು, ಅ. 13: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಚ್‌ಎಎಲ್ ನೌಕರರೊಂದಿಗೆ ಸಭೆ ನಡೆಸಲು ಅವರಿಗೇನು ಅಧಿಕಾರವಿದೆ ಎಂದಿರುವ ಸಂಸದೆ ಶೋಭಾ ಕರಂದ್ಲಾಜೆ, ಯಾವ ಪುರುಷಾರ್ಥಕ್ಕಾಗಿ ಸಂವಾದ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಶನಿವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೋದಲ್ಲಿ-ಬಂದಲ್ಲಿ ರಫೇಲ್ ಯುದ್ಧ ವಿಮಾನ ಖರೀದಿಯ ಬಗ್ಗೆ ದಿನಕ್ಕೊಂದು ಸುಳ್ಳು ಹೇಳುತ್ತಿದ್ದಾರೆ. ಯುಪಿಎ ಆಡಳಿತಾವಧಿಯಲ್ಲಿ ಸೇನಾ ರಕ್ಷಣಾ ಸಾಮರ್ಥ್ಯವೇನು ಎಂಬುದು ದೇಶಕ್ಕೆ ಗೊತ್ತಿದೆ ಎಂದು ಟೀಕಿಸಿದರು.
ಐವತ್ತು ವರ್ಷಕ್ಕೂ ಹೆಚ್ಚು ಕಾಲ ದೇಶ ಆಳಿದ ಕಾಂಗ್ರೆಸ್ ಪಕ್ಷ ರಕ್ಷಣಾ ಇಲಾಖೆಗೆ ಅಗತ್ಯ ಯುದ್ಧ ಸಾಮಗ್ರಿ ಖರೀದಿಸಿಲ್ಲ. ರಾತ್ರಿ ಹೊತ್ತು ಗಸ್ತು ಕಾಯುವಾಗ ಸೈನಿಕರು ಬಳಸುವ ಕನ್ನಡಕವನ್ನೂ ಖರೀದಿಸಿಲ್ಲ. ಯುಪಿಎ ಸರಕಾರದ ಅವಧಿಯಲ್ಲೇ ರಫೇಲ್ ಯುದ್ಧ ವಿಮಾನ ಖರೀದಿಯನ್ನು ಏಕೆ ಮಾಡಲಿಲ್ಲ ಎಂದು ಕಿಡಿಕಾರಿದರು.
ರಫೇಲ್ ಯುದ್ದ ವಿಮಾನ ಖರೀದಿಗೆ ಸಂಬಂಧ ಮನಸೋ ಇಚ್ಛೆ ಮಾತನಾಡುವ ಮೂಲಕ ಕಾಂಗ್ರೆಸ್ ಮುಖಂಡರು ರಕ್ಷಣಾ ಇಲಾಖೆಯ ಹಾಗೂ ಸೈನಿಕರ ಮನೋ ಸಾಮರ್ಥ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ರಾಹುಲ್ ಗಾಂಧಿ ಸಭೆಯಲ್ಲಿ ಪಾಲ್ಗೊಳ್ಳಲು ಎಚ್‌ಎಎಲ್ ಸಿಬ್ಬಂದಿ ನಿರಾಕರಿಸಿದ್ದಾರೆ ಎಂದು ಹೇಳಿದರು.
ಕೇಂದ್ರದ ವಿರುದ್ಧ ಅಪಪ್ರಚಾರ ನಡೆಸಲು ನೀವು ಯಾರೊಂದಿಗೆ ಸಂವಾದ ನಡೆಸುತ್ತೀದ್ದೀರಿ ಎಂದು ಪ್ರಶ್ನಿಸಿದ ಅವರು, ನಿಷೇಧಿತ ಪ್ರದೇಶದಲ್ಲಿ ಸಭೆ ಮಾಡಲು ಸಾಧ್ಯವಿಲ್ಲ. ಆದರೆ, ನಿಮಗೆ ಈ ಅಧಿಕಾರವನ್ನು ಯಾರು ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ಮೈತ್ರಿ ಸರಕಾರ ರಚನೆಯೊಂದಿಗೆ ಆರಂಭವಾದ ಮಹಾಘಟ ಬಂಧನ ವಿಧಾನಸೌಧದಲ್ಲೆ ಅಂತ್ಯಕಂಡಿದೆ. ಮೈತ್ರಿ ಸರಕಾರದ ಪಾಲುದಾರ ಪಕ್ಷದ ಶಾಸಕ ಎನ್.ಮಹೇಶ್ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸಲು ದೇಶದ ಯಾವುದೇ ಪಕ್ಷಗಳು ಸಿದ್ದವಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಒಂದೆಡೆ ನೆರೆ, ಮತ್ತೊಂದೆಡೆ ತೀವ್ರ ಸ್ವರೂಪದ ಬರ ಸ್ಥಿತಿ ಆವರಿಸಿದೆ. ಸಿಎಂ ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಪಕ್ಷದ ಶಾಸಕರು ಸಚಿವ ಸ್ಥಾನಕ್ಕಾಗಿ ಬಂಡಾಯ ಏಳುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ಬಿಜೆಪಿ ವಿರುದ್ಧ ದಂಗೆ ಏಳಿ ಎಂದರೆ, ಜೆಡಿಎಸ್ ಶಾಸಕರೊಬ್ಬರು ಜಲಾಶಯಕ್ಕೆ ಡೈನಾಮೆಟ್ ಇಡುತ್ತೇನೆಂಬ ಮಾತನಾಡುತ್ತಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದರು.