ಯುವಕರ, ಪದವೀಧರರ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಕೇಂದ್ರ ಸರಕಾರ: ರಾಹುಲ್‌ ಗಾಂಧಿ

Update: 2018-10-13 14:34 GMT

ಬೆಂಗಳೂರು, ಅ.13: ಎಚ್‌ಎಎಲ್ ಜೊತೆಗಿನ ರಫೆಲ್ ಯುದ್ಧ ವಿಮಾನ ತಯಾರಿಸುವ ಒಪ್ಪಂದವನ್ನು ರದ್ದುಪಡಿಸುವುದರ ಜೊತೆಗೆ ಕೇಂದ್ರ ಸರಕಾರವು ಸಾವಿರಾರು ಮಂದಿ ಉತ್ಸಾಹಿ, ಯುವ ಪದವೀಧರರ ಭವಿಷ್ಯದ ಜೊತೆ ಚೆಲ್ಲಾಟವಾಡಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ನಗರದ ಎಚ್‌ಎಎಲ್ ಕೇಂದ್ರ ಕಚೇರಿಯ ಎದುರು ಇರುವ ಮಿನ್ಕ್ಸ್ ಸ್ಕ್ವೇರ್(ಕಬ್ಬನ್‌ಪಾರ್ಕ್)ನಲ್ಲಿ ಎಚ್‌ಎಎಲ್ ನಿವೃತ್ತ ನೌಕರರೊಂದಿಗೆ ಹಮ್ಮಿಕೊಂಡಿದ್ದ ಸಂವಾದದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕೇಂದ್ರ ಸರಕಾರವು ಎಚ್‌ಎಎಲ್ ಜೊತೆಗಿನ ಒಪ್ಪಂದವನ್ನು ರದ್ದುಪಡಿಸುವ ಮುನ್ನ ಆಲೋಚನೆ ಮಾಡಬೇಕಿತ್ತು. ಇಂದಿನ ಸಂವಾದದಲ್ಲಿ ನಾನು ಎಚ್‌ಎಎಲ್‌ನ ನಿವೃತ್ತ ಸಿಬ್ಬಂದಿಗಳ ಜೊತೆ ಚರ್ಚೆ ಮಾಡಿದ್ದೇನೆ. ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಎಚ್‌ಎಎಲ್ 70 ವರ್ಷಗಳ ಸುದೀರ್ಘ ಅನುಭವ ಹೊಂದಿದೆ ಎಂದು ಅವರು ಹೇಳಿದರು.

ಸುಖೋಯ್, ತೇಜಸ್ ಸೇರಿದಂತೆ ಅನೇಕ ಯುದ್ಧ ವಿಮಾನಗಳನ್ನು ಎಚ್‌ಎಎಲ್ ಸಿದ್ಧಪಡಿಸಿದೆ. ಅವರ ಪರಿಶ್ರಮಕ್ಕೆ ಕೇಂದ್ರ ಸರಕಾರ ಅವಮಾನ ಮಾಡಿದೆ. ಎಚ್‌ಎಎಲ್‌ಗೆ ಸಾಮರ್ಥ್ಯ ಇಲ್ಲ ಎನ್ನುವ ಕೇಂದ್ರ ರಕ್ಷಣಾ ಸಚಿವೆ, ಯಾವುದೇ ಅನುಭವವಿಲ್ಲದ ಅನಿಲ್ ಅಂಬಾನಿ ಜೊತೆ 30 ಸಾವಿರ ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಯಾಕೆ ಮೌನವಹಿಸಿದ್ದಾರೆ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದರು.

ಎಚ್‌ಎಎಲ್‌ನ ಅನುಭವ, ಸಾಮರ್ಥ್ಯ ಹಾಗೂ ಅನಿಲ್ ಅಂಬಾನಿಯ ನಡುವೆ ಯಾವ ಹೋಲಿಕೆಯೂ ಇಲ್ಲ. ಪ್ರಧಾನಿ ನರೇಂದ್ರಮೋದಿ, ಅನಿಲ್ ಅಂಬಾನಿಗೆ ಸಹಾಯ ಮಾಡಲು ಈ ಒಪ್ಪಂದವನ್ನು ಬಳಸಿಕೊಂಡಿದ್ದಾರೆ. ದೇಶದ ಪ್ರತಿಯೊಬ್ಬ ನಾಗರಿಕರೂ ಇದನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಎಚ್‌ಎಎಲ್ ಸಂಸ್ಥೆ ನಷ್ಟದಲ್ಲಿಲ್ಲ. ಆದರೆ, ಅನಿಲ್ ಅಂಬಾನಿ ನಷ್ಟದಲ್ಲಿದ್ದಾರೆ. ಎಚ್‌ಎಎಲ್ ಜೊತೆಗಿನ ಒಪ್ಪಂದವನ್ನು ರದ್ದುಪಡಿಸುವ ಮೂಲಕ ದೇಶದ ಯುವಕರ ಭವಿಷ್ಯವನ್ನೆ ಕಸಿಯಲಾಗಿದೆ. ಎಚ್‌ಎಎಲ್‌ನ ಸಿಬ್ಬಂದಿಗಳು ತಮ್ಮ ಜೀವನವನ್ನೆ ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ ಎಂದು ರಾಹುಲ್‌ ಗಾಂಧಿ ತಿಳಿಸಿದರು.

ರಫೆಲ್ ಯುದ್ಧ ವಿಮಾನದ ಒಪ್ಪಂದ ಕುರಿತು ರಕ್ಷಣಾ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಫ್ರಾನ್ಸ್‌ನ ಮಾಜಿ ಅಧ್ಯಕ್ಷರೇ ಈ ಒಪ್ಪಂದ ಕುರಿತು ಹೇಳಿದ್ದಾರೆ ಎಂದು ರಾಹುಲ್‌ ಗಾಂಧಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News