ಬ್ರಾಹ್ಮಣರಂತೆ ಜ್ಯೋತಿಷಿಗಳಿಗೂ ನಿಗಮ ಮಂಡಳಿ ಬೇಕು: ಶಿವಯೋಗಿ ರಾಜೇಂದ್ರ ಸ್ವಾಮೀಜಿ

Update: 2018-10-13 16:44 GMT

ಬೆಂಗಳೂರು, ಅ.13: ಬ್ರಾಹ್ಮಣರ ಸಮುದಾಯಕ್ಕೆ ಅಭಿವೃದ್ಧಿ ನಿಗಮ ಮಂಡಳಿ ಇರುವ ಹಾಗೇ, ಜ್ಯೋತಿಷ್ಯಗಾರರ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪಿಸಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಕೋಡಿಮಠ ಮಹಾಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಶನಿವಾರ ನಗರದ ಕೆಜಿ ರಸ್ತೆಯ ಶಿಕ್ಷಕರ ಸದನದಲ್ಲಿ ಕರ್ನಾಟಕ ರಾಜ್ಯ ವಂಶಪಾರಂಪರ್ಯ ಜ್ಯೋತಿಷ್ಯಗಾರರ ಸಂಘದ 5ನೆ ವಾರ್ಷಿಕ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರಕಾರ ವೈದಿಕರಾದ ಬ್ರಾಹ್ಮಣರ ಕಲ್ಯಾಣಕ್ಕೆ 20 ಕೋಟಿ ಮೀಸಲಿಟ್ಟು, ಅಭಿವೃದ್ಧಿ ನಿಗಮಯೊಂದನ್ನು ಸ್ಥಾಪಿಸಿದೆ. ಅದೇ ರೀತಿ, ಜ್ಯೋತಿಷ್ಯಗಾರರ ಆರ್ಥಿಕ ಪ್ರಗತಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಜ್ಯೋತಿಷಿಗಳು ಮನುಕುಲದ ಹಿತಕ್ಕೆ ದುಡಿಯುತ್ತಿದ್ದಾರೆ. ಇವರ ಬಗ್ಗೆ ವ್ಯಂಗ್ಯವಾಡುವುದು ಸರಿಯಲ್ಲ ಎಂದು ಹೇಳಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಪದ್ಮಾಶೇಖರ್ ಮಾತನಾಡಿ, ವಾಸ್ತವನ್ನು ತಿಳಿದುಕೊಳ್ಳಲು, ಜ್ಯೋತಿಷ್ಯಕ್ಕೆ ವೈಜ್ಞಾನಿಕ ಬೆಂಬಲ ನೀಡಬೇಕು. ವಂಶಪಾರಂಪರ್ಯ ಜ್ಯೋತಿಷ್ಯಗಾರರನ್ನು ಉಳಿಸಿ ಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗಾಗಿ, ಜ್ಯೋತಿಷ್ಯ ಶಾಸ್ತ್ರ ಅಧ್ಯಯನದಲ್ಲಿ ತೊಡಗುವಂತೆ ಸಲಹೆ ಮಾಡಿದರು.

ಸಂಘದ ಅಧ್ಯಕ್ಷ ಕೆಂಗಲ್ ಹನುಮಂತಯ್ಯ ಮಾತನಾಡಿ, ಕರ್ನಾಟಕದಲ್ಲಿ ಮೂಲ ಜ್ಯೋತಿಷ್ಯರನ್ನು ಹುಡುಕುವುದು ಸದ್ಯದ ಪರಿಸ್ಥಿತಿಯಲ್ಲಿ ಕಷ್ಟ. ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿದ್ದು, ಬೈರಾಗಿ, ಸೋಲಿಗ, ಸುಡುಗಾಡು ಸಿದ್ದ ಎಂದೆಲ್ಲಾ ಕರೆಯುತ್ತಾರೆ. ಆದರೆ, ಎಲ್ಲರೂ ‘ಕಾರ್ಯಗಾಳ’ ಜಾತಿಗೆ ಒಳಗೊಳ್ಳುತ್ತಾರೆ ಎಂದರು.

ಸಮ್ಮೇಳನದಲ್ಲಿ ತಂಗನಹಳ್ಳಿ ಕಾಶಿ ಅನ್ನಪೂರ್ಣೇಶ್ವರಿ ಮಹಾ ಸಂಸ್ಥಾನದ ಮಠದ ಬಸವ ಮಹಾಲಿಂಗ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರನಾಥ ಸ್ವಾಮೀಜಿ, ದೂಪಂ ಆಂಜಿನಪ್ಪ, ಗಂಗರೆಡ್ಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ಟಿವಿ ಜ್ಯೋತಿಷಿಗಳಿಂದ ನಂಬಿಕೆ ಉಳಿದಿಲ್ಲ’

ಪ್ರತಿ ನಿತ್ಯವೂ, ಟಿವಿ ವಾಹಿನಿಗಳಲ್ಲಿ ಜ್ಯೋತಿಷಿಗಳು ಬಂದು, ಭಯ, ಸುಳ್ಳುಗಳನ್ನು ಹೇಳುತ್ತಾರೆ. ಇವರಿಂದ ಗ್ರಾಮೀಣ ಭಾಗದ ಮತ್ತು ವಂಶ ಪಾರಂಪರ್ಯ ಜ್ಯೋತಿಷಿ ಮೇಲಿನ ನಂಬಿಕೆ ಹಾಳಾಗಿದೆ. ಅಷ್ಟೇ ಅಲ್ಲದೆ, ಹೊಟ್ಟೆಪಾಡಿಗೂ ಕಷ್ಟದ ವಾತಾವರಣ ಇದೆ ಎಂದು ವಂಶ ಪಾರಂಪರ್ಯ ಜ್ಯೋತಿಷ್ಯಗಾರರ ಸಂಘ ಅಧ್ಯಕ್ಷ ಕೆಂಗಲ್ ಹನುಮಂತಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News