ಕೇಂದ್ರದ ಅನುದಾನ ಸದ್ಬಳಕೆಯಾಗಬೇಕು: ಕೇಂದ್ರ ಸಚಿವ ಸದಾನಂದಗೌಡ

Update: 2018-10-13 16:48 GMT

ಬೆಂಗಳೂರು, ಅ. 13: ಅಮೃತ ಯೋಜನೆಯಡಿ ಅನುದಾನ ನೀಡಿದರೆ ಅದನ್ನು ಸದ್ಬಳಕೆಯಾಗದಂತೆ ಸ್ಥಳೀಯ ಶಾಸಕರು, ಬಿಬಿಎಂಪಿ ಸದಸ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಸದಾನಂದಗೌಡ, ದಾಸರಹಳ್ಳಿ ಅಭಿವೃದ್ಧಿಯಾದರೆ ದೇಶದ ಅಭಿವೃದಿಯಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಇಲ್ಲಿನ ದಾಸರಹಳ್ಳಿ ಕ್ಷೇತ್ರದ ಮಲ್ಲಸಂದ್ರ ವಾರ್ಡ್‌ನಲ್ಲಿ ಕೇಂದ್ರದ ಅಮೃತ್ ಯೋಜನೆ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಲೋಕಸಭಾ ಸದಸ್ಯರ ಅನುದಾನದ ಬಗ್ಗೆ ಬೋರ್ಡ್ ಹಾಕಿದರೆ ಅದನ್ನು ಕಿತ್ತು ಹಾಕುವ ಮೂಲಕ ಶಾಸಕ ಮಂಜುನಾಥ ರಾಜಕೀಯ ಮಾಡುತ್ತಿದ್ದಾರೆಂದು ಕಿಡಿಕಾರಿದರು.

ಸಣ್ಣ ರಾಜಕಾರಣ ಮಾಡುವವರು ಸಮಾಜ ಸುಧಾರಣೆ ಮಾಡುವವರಲ್ಲ. ಅವರು ಯಾವುದೋ ಒಂದು ಅಡ್ಡದಾರಿಯಿಂದ ಅಧಿಕಾರಕ್ಕೆ ಬಂದಿರಬಹುದು. ಅಧಿಕಾರಕ್ಕೆ ಬಂದ ಕೂಡಲೇ ಇಡೀ ಊರನ್ನು ಅವರಿಗೇ ಬರೆದುಕೊಟ್ಟಿಲ್ಲ. ನಮ್ಮ ಪಕ್ಷಕ್ಕೂ ಇಲ್ಲಿ ಕಾರ್ಯಕರ್ತರಿದ್ದು ಅವರನ್ನು ರಕ್ಷಿಸುವ ಹೊಣೆ ನಮ್ಮ ಮೇಲಿದೆ ಎಂದರು.

ನಾಲ್ಕು ತಿಂಗಳಿಂದ ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿ ಸಂಪೂರ್ಣ ಕುಂಠಿತ ಆಗಿದೆ. ಇದರ ಬಗ್ಗೆ ಶಾಸಕರನ್ನು ಪ್ರಶ್ನಿಸಬೇಕು. ಕ್ಷೇತ್ರದಲ್ಲಿ ಒಂದು ಕಾರ್ಯಕ್ರಮವಿದ್ದರೆ ಅಧಿಕಾರಿಗಳು ಶಿಷ್ಟಾಚಾರದ ಪ್ರಕಾರ ಆಹ್ವಾನ ನೀಡಿದ್ದರೂ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಕಿಡಿಕಾರಿದರು.

ಅಧಿಕಾರ ಯಾರಿಗೂ ಶಾಶ್ವತ ಅಲ್ಲ. ನಮಗೆ ಸಿಕ್ಕ ಅಧಿಕಾರವನ್ನು ಜನರ ಸೇವೆಗೆ ಬಳಕೆ ಮಾಡಬೇಕು. ಸಂದರ್ಭ ಬಂದಾಗ ಅದನ್ನು ಬಿಚ್ಚಿಡುತ್ತೇವೆ. ನಾವೇನು ಸುಮ್ಮನೆ ಬಿಡ್ತೀವಿ ಅಂತಾ ಅಂದುಕೊಳ್ಳೋದು ಬೇಡ. ಕೇಂದ್ರ ಸರಕಾರದ ಅನುದಾನವನ್ನು ದಾಸರಹಳ್ಳಿಯಲ್ಲಿ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News