ಬಿಬಿಎಂಪಿ ಮೇಯರ್ ಅವಧಿ ತಿಳಿದ ಜರ್ಮನಿಯ ಮೇಯರ್ ನಿಕೋಲಿ ಹ್ಯುಬರ್ ಅಚ್ಚರಿ

Update: 2018-10-13 17:25 GMT

ಬೆಂಗಳೂರು, ಅ. 13: ಬಿಬಿಎಂಪಿಯ ಮೇಯರ್ ಅವಧಿ ಕೇವಲ ಒಂದು ವರ್ಷ ಇರುವುದನ್ನು ತಿಳಿದು ಜರ್ಮನ್ ದೇಶದ ಹಿಡಿಲ್ ಬರ್ಗ್ ನಗರದ ಉಪ ಮೇಯರ್ ನಿಕೋಲಿ ಹ್ಯುಬರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರಕ್ಕೆ 11 ಸದಸ್ಯರ ಜರ್ಮನ್ ತಂಡದೊಂದಿಗೆ ಬಿಬಿಎಂಪಿ ಮೇಯರ್ ಗಂಗಾಬಿಕೆಯನ್ನು ಭೇಟಿ ಮಾಡಿದ ಅವರು, ಜರ್ಮನ್‌ನಲ್ಲಿ ಮೇಯರ್-ಉಪಮೇಯರ್ ಅವಧಿ 8 ವರ್ಷ ಇರುತ್ತದೆ. ಈ ಅವಧಿಯಲ್ಲೇ ನಮಗೆ ಸಂಪೂರ್ಣ ಕೆಲಸ ಮಾಡಲಾಗುವುದಿಲ್ಲವಲ್ಲ ಎಂದು ಯೋಚಿಸುತ್ತೇವೆ ಎಂದು ತಿಳಿಸಿದರು.

ಇಡೀ ವಿಶ್ವದಲ್ಲಿ ಸಿಲಿಕಾನ್ ಸಿಟಿ ಎಂದೇ ಗುರುತಿಸಿಕೊಂಡಿರುವ ಬೆಂಗಳೂರಿನ ಮೇಯರ್ ಅವಧಿ ಒಂದು ವರ್ಷವಾಗಿರುವುದು ವಿಷಾದನೀಯವಾಗಿದೆ. ಇಷ್ಟರಲ್ಲಿ ಯಾವ ಕೆಲಸ ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಜರ್ಮನ್ ದೇಶದ ಶಿಕ್ಷಣ, ಸಂಸ್ಕೃತಿ ಮತ್ತು ತಂತ್ರಜ್ಞಾನಗಳನ್ನು ಬೆಂಗಳೂರಿನಲ್ಲಿ ಅಳವಡಿಸಿಕೊಳ್ಳಿ. ನಾವು ಎಲ್ಲ ಸಹಕಾರ ನೀಡುತ್ತೇವೆ. ಅಲ್ಲದೆ, ಜರ್ಮನ್ ದೇಶದ ಸಂಸ್ಕೃತಿ ನಗರಗಳು ಹೇಗೆ ಅಭಿವೃದ್ಧಿಯಾಗಿವೆ ಎಂಬುದು ಗೊತ್ತಾಗಬೇಕಾದರೆ ಒಂದು ನಿಯೋಗವನ್ನು ಅಲ್ಲಿಗೆ ಕಳುಹಿಸಿಕೊಡಿ ಎಂದು ಮೇಯರ್ ಗಂಗಾಂಬಿಕೆ ಅವರಲ್ಲಿ ಮನವಿ ಮಾಡಿದರು.

ಹಿಡಿಲ್ ಬರ್ಗ್‌ನ ಉಪ ಮೇಯರ್ ನಿಯೋಗವು ಬೆಂಗಳೂರು ನಗರದೊಂದಿಗೆ ಶಿಕ್ಷಣ, ಸಂಸ್ಕೃತಿ, ತಂತ್ರಜ್ಞಾನ, ತಾಂತ್ರಿಕ ಕ್ಷೇತ್ರದಲ್ಲಿ ಸಹಭಾಗಿತ್ವ ಹೊಂದುವ ಬಗ್ಗೆ ಪ್ರಸ್ತಾಪಿಸಿದ್ದು, ಈ ಕುರಿತು ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಲಾಗುವುದು, ಈ ಕುರಿತು ಒಡಂಬಡಿಕೆ ಮಾಡಿಕೊಳ್ಳಲು ಆಸಕ್ತಿ ಹೊಂದಿರುವುದಾಗಿ ನಿಕೋಲಿ ಹ್ಯುಬರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News