ಎನ್.ಮಹೇಶ್ ರಾಜೀನಾಮೆ: ತೆರವಾದ ಸ್ಥಾನಕ್ಕೆ ಜೆಡಿಎಸ್ ಶಾಸಕರ ಮಧ್ಯೆ ತೀವ್ರ ಪೈಪೋಟಿ

Update: 2018-10-13 17:52 GMT

ಬೆಂಗಳೂರು, ಅ. 13: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ರಾಜೀನಾಮೆ ಬೆನ್ನಲ್ಲೆ ಸಚಿವ ಸ್ಥಾನಕ್ಕಾಗಿ ಜೆಡಿಎಸ್ ಶಾಸಕರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್ಪಿ ಮೈತ್ರಿ ಸರಕಾರದಲ್ಲಿ ಪಾಲುದಾರರಾಗಿದ್ದ ಸಚಿವ ಎನ್.ಮಹೇಶ್ ಎರಡು ದಿನಗಳ ಹಿಂದೆಯೆಷ್ಟೇ ರಾಜೀನಾಮೆ ನೀಡಿದ್ದಾರೆ. ಮಹೇಶ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಜೆಡಿಎಸ್‌ನ ಐವರು ಶಾಸಕರು ಲಾಬಿ ಆರಂಭಿಸಿದ್ದಾರೆ.

ಸಕಲೇಶಪುರ ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ, ಸಭಾಪತಿ ಬಸವರಾಜ ಹೊರಟ್ಟಿ, ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿ ಹಾಗೂ ಮಹಾಲಕ್ಷ್ಮಿ ಪುರ ಕ್ಷೇತ್ರದ ಶಾಸಕ ಕೆ.ಗೋಪಾಲಯ್ಯ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ಪರಿಶಿಷ್ಟ ಜಾತಿ ಕೋಟಾದಡಿ ಬಿಎಸ್ಪಿ ಶಾಸಕ ಮಹೇಶ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಇದೀಗ ಅದೇ ಸಮುದಾಯದ ಹಿರಿಯ ಶಾಸಕ ಎಚ್.ಕೆ. ಕುಮಾರಸ್ವಾಮಿ, ಸಂಪುಟದಲ್ಲಿ ತೆರವಾಗಿರುವ ಸ್ಥಾನವನ್ನು ತನಗೆ ನೀಡಬೇಕೆಂದು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಆಗ್ರಹಿಸಿದ್ದಾರೆಂದು ಗೊತ್ತಾಗಿದೆ.

ಈ ಮಧ್ಯೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮೇಲೆ ವಿಶೇಷ ಆಸಕ್ತಿ ಹೊಂದಿರುವ ಸಭಾಪತಿ ಬಸವರಾಜ ಹೊರಟ್ಟಿಯವರು ಸಚಿವ ಸ್ಥಾನಕ್ಕೆ ಪಟ್ಟು ಹಿಡಿದ್ದಾರೆ. ಆದರೆ, ಸಿಎಂ ಕುಮಾರಸ್ವಾಮಿ ಮಹೇಶ್ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾಗಿರುವ ಸ್ಥಾನವನ್ನು ಯಾರಿಗೆ ನೀಡಲಿದ್ದಾರೆಂಬುದು ಕುತೂಹಲ ಸೃಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News