ರಾಜಕಾರಣಿಗಳ ಬೆನ್ನು ಬಿದ್ದು ಲಾಬಿ ನಡೆಸುವ ಸಂಸ್ಕೃತಿ ಸೃಷ್ಟಿ: ಸಭಾಪತಿ ಬಸವರಾಜ ಹೊರಟ್ಟಿ

Update: 2018-10-13 17:56 GMT

ಬೆಂಗಳೂರು, ಅ.13: ರಾಜಕಾರಣಿಗಳ ಬೆನ್ನು ಬಿದ್ದು ಪ್ರಶಸ್ತಿ, ಬಿರುದು, ಸನ್ಮಾನಗಳಿಗಾಗಿ ಲಾಭಿ ನಡೆಸುವಂತಹ ಕೆಟ್ಟ ಸಂಸ್ಕೃತಿ ಸೃಷ್ಟಿಯಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಶನಿವಾರ ನಗರದ ರೇಸ್‌ಕೋರ್ಸ್ ರಸ್ತೆಯ ಭಾರತೀಯ ವಿದ್ಯಾಭವನದಲ್ಲಿ ಡಾ. ಸಿ.ಸೋಮಶೇಖರ ಮತ್ತು ಎನ್.ಸರ್ವಮಂಗಳ ಸಾಹಿತ್ಯ ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ ಸಂಸ್ಕೃತಿ ಸಂಗಮ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಡಿದರು.

ಸದ್ಯದ ಪರಿಸ್ಥಿತಿಯಲ್ಲಿ ರಾಜಕಾರಣಿಗಳೆಂದರೆ ಶೇ.99ರಷ್ಟು ಜನರು ಕೆಟ್ಟ ದೃಷ್ಟಿಯಿಂದ ನೋಡುವಂತಹ ವಾತಾರವಣ ಸೃಷ್ಟಿಯಾಗಿದೆ. ಅಂತಹ ರಾಜಕಾರಣಿಗಳ ಸಾಲಿನಲ್ಲಿ ನಾವು ನಿಲ್ಲಬಾರದು ಎಂಬ ಉದ್ದೇಶದಿಂದ ಸಾಮಾಜಿಕ ಬದುಕು ರೂಪಿಸಿಕೊಳ್ಳಬೇಕು ಎಂದು ನುಡಿದರು.

ಪ್ರತಿಯೊಬ್ಬರು ತಮ್ಮ ಜೀವನದ ಜವಾಬ್ಧಾರಿಗಳನ್ನು ಅರಿತು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಮಸ್ಯೆಗಳು ಉದ್ಭವಿಸುವುದಿಲ್ಲ. ಪೋಷಕರು ತಮ್ಮ ಮಕ್ಕಳು ಉನ್ನತ ಅಧಿಕಾರಿಗಳಾಗಲಿ ಮತ್ತು ಶ್ರೀಮಂತರಾಗಲಿ ಎಂದು ಬಯಸುತ್ತಾರೆ. ಆದರೆ, ಜೀವನದ ಮೌಲ್ಯಗಳನ್ನು ಬೆಳೆಸುವುದಿಲ್ಲ. ಇದರಿಂದಾಗಿ ವೃದ್ಧಾಶ್ರಮ ಮತ್ತು ಅನಾಥಶ್ರಮಗಳ ಸಂಖ್ಯೆ ವೃದ್ಧಿಯಾಗುತ್ತಿದೆ ಎಂದು ನುಡಿದರು.

ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸೌಹಾದರ್ತೆ ಕಾಪಾಡುವಂತಹ ಕಾರ್ಯಕ್ರಮಗಳನ್ನು ನೋಡಿದರೆ ನಿಜಕ್ಕೂ ಖುಷಿ ಎನಿಸುತ್ತದೆ. ಜೀವನದಲ್ಲಿ ಸಾಮಾಜಿಕ ಬದ್ಧತೆ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು ಸಮಾಜ ಸೇವೆಯನ್ನು ಮಾಡೋಣ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ್ ಕಂಬಾರ, ಪ್ರತಿಷ್ಠಾನದ ಅಧ್ಯಕ್ಷ ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ.ಸೋಮಶೇಖರ್, ಶೈಲಜಾ ವಿ.ಸೋಮಣ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News