ಗಾಂಧಿ: ಕಥನ ಮತ್ತು ಸಂಕಥನ

Update: 2018-10-14 06:39 GMT

ಭಾಗ-3

ನನಗೆ ಚಿಕ್ಕಂದಿನಲ್ಲಿ ಯಾವಾಗ ಗಾಂಧಿ ಎಂಬ ಹೆಸರು ಕಿವಿಯ ಮೇಲೆ ಬಿದ್ದಿತು ಎಂಬುದು ನೆನಪಿಲ್ಲ. ನಾನಾಗ 8ನೇ ತರಗತಿಯಲ್ಲಿದ್ದೆ. ಆರೆಸ್ಸೆಸ್ ಶಾಖೆಗೆ ಹೋಗುತ್ತಿದ್ದೆ. ದಿನವೂ ಖಾಕಿ ಚಡ್ಡಿ ಮತ್ತು ಬಿದಿರು ಕೋಲು ಹಿಡಿದುಕೊಂಡು ಹೋಗುತ್ತಿದ್ದೆ. ಚಡ್ಡಿ ನನ್ನ ಅಳತೆಗೆ ಮೀರಿ ಉದುರಿ ಹೋಗುತ್ತಿತ್ತು. ಕೋಲು ನಾನು ಹಿಡಿಯಲಾರದಷ್ಟು ದೊಡ್ಡದಾಗಿತ್ತು. ನಿಯಮಿತವಾಗಿ ಅವರು ನಡೆಸುವ ಶಾಖೆ ಎಂದು ಕರೆಯುವ ಸಾಯಂಕಾಲದ ಕಾರ್ಯಕ್ರಮಗಳಿಗೆ ಹಾಜರಾಗತೊಡಗಿದೆ. ಶಾಖೆಯ ಪ್ರಮುಖರು ಮನೆಗೆ ಬರಲು ಶುರು ಮಾಡಿದರು. ನಮ್ಮ ತಂದೆ ತಾಯಿಯರಿಗೆ ಇದರಿಂದ ಅಂಥ ಸಂತೋಷವೇನು ಆಗಿರಲಿಲ್ಲ. ನಾನು ಆರೆಸ್ಸೆಸ್‌ಗೆ ಹೋಗ ತೊಡಗಿದಂತೆ ಅವರ ಆತಂಕ ಹೆಚ್ಚಾಯಿತು. ನೀನು ಯಾವ ಕಾರಣಕ್ಕೂ ಅವರ ಜೊತೆ ಸೇರಬೇಡ ಎಂದರು. ಅಲ್ಲಿ ಆಟ ಆಡಿಸುವುದು, ಹಾಡು ಹೇಳಿಸುವುದರ ಜೊತೆಗೆ ಶಿವಾಜಿ, ರಾಣಾಪ್ರತಾಪರು ಮುಸ್ಲಿಮರನ್ನು ಹೇಗೆ ಸದೆ ಬಡಿದರು ಇತ್ಯಾದಿ ಕಥೆಗಳನ್ನು ಹೇಳುತ್ತಿದ್ದರು. ನಮ್ಮ ಶಾಖೆಯ ಮುಖ್ಯಸ್ಥರು ಬ್ರಾಹ್ಮಣರಾಗಿದ್ದರು. ಪಾಕಿಸ್ತಾನದಿಂದ ನಮಗೆ ಎಂತಹ ಅಪಾಯವಾಗಬಹುದೆಂದು ದಿನವೂ ತಿಳಿಸಿಕೊಡುತ್ತಿದ್ದರು. ನನಗೆ ಪಾಕಿಸ್ತಾನ ಮತ್ತು ಮುಸಲ್ಮಾನರ ವಿರುದ್ಧ ದ್ವೇಷ ಬೆಳೆದಂತೆ ಅವರ ಜೊತೆ ಗಾಢ ಸಂಬಂಧ ಬೆಳೆಯತೊಡಗಿತು.

 ನಮ್ಮ ತಂದೆ-ತಾಯಿಯ ಬಳಿ ಈ ವಿಚಾರಗಳನ್ನು ನನಗೆ ತೋಚಿದ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದೆ. ಅದೇನಾಯಿತೋ ನಮ್ಮ ತಂದೆ-ತಾಯಿ ನನ್ನನ್ನು ಕರೆದು ‘‘ನೋಡಪ್ಪ ಅವರು ಗಾಂಧಿ ಮಹಾತ್ಮರನ್ನು ಕೊಂದವರು ಅಲ್ಲಿಗೆ ಹೋಗುವುವರೆಲ್ಲ ಶೆಟ್ಟರು, ಬ್ರಾಹ್ಮಣರು, ನಮಗೆ ಅವರ ಸಹವಾಸ ಬೇಡ’’ ಎಂದರು. ನಾನು ಅಲ್ಲಿಗೆ ಹೋಗುವುದನ್ನು ಬಿಟ್ಟೆ. ಚಿಕ್ಕಂದಿನಿಂದ ಗಾಂಧೀಜಿಯವರ ಬಗ್ಗೆ ಕೇಳಿದ್ದೇನೆಯೇ ಹೊರತು ಅವರ ಪರಿಚಯ ಈ ರೀತಿಯಲ್ಲಿ ಆಗಿದ್ದು, ಇದೇ ಮೊದಲು. ‘ಗಾಂಧಿಯನ್ನು ಗೋಡ್ಸೆ ಎಂಬ ಹಂತಕನು 1948 ಜನವರಿ 30 ರಂದು ಗುಂಡು ಹಾರಿಸಿ ಕೊಂದನು’ ಎಂಬ ವಾಕ್ಯವು ಎಲ್ಲ ವಾಕ್ಯಗಳಂತೆ ಬಂದು ಹೋಗಿತ್ತು. ಅದು ನನ್ನ ಎದೆಯಲ್ಲಿ ಪೈರಿನಂತೆ ನಾಟಿತು. ಜೊತೆಗೆ ಗಾಂಧಿಯೂ ಕೂಡ.

ಆ ವೇಳೆಗೆ ನನಗೆ ಗಾಂಧಿಯವರ ವಿಚಾರಗಳು ಎಲ್ಲ ಮಕ್ಕಳಿಗೆ, ಸಾಮಾನ್ಯ ಜನರಿಗೆ ತಿಳಿದಿರುವಷ್ಟೇ ತಿಳಿದಿತ್ತು. ನಮ್ಮ ಶಾಲೆಯ ಮಕ್ಕಳಿಗೆ ಸ್ವಲ್ಪ ಜಾಸ್ತಿಯೇ ತಿಳಿದಿತ್ತು. ಏಕೆಂದರೆ ನಮ್ಮ ಶಾಲೆಗೆ ದಾಸೇಗೌಡ ಎಂಬ ಗಾಂಧಿವಾದಿಗಳು ಮುಖ್ಯೋಪಾಧ್ಯಾಯರಾಗಿದ್ದರು. ಅಧ್ಯಾಪಕರನ್ನು ಒಳಗೊಂಡಂತೆ ನಾವೆಲ್ಲರೂ ಗಾಂಧಿ ಟೋಪಿಯನ್ನು ಹಾಕಿಕೊಳ್ಳುತ್ತಿದ್ದೆವು. ಬಿಳಿ ಬಟ್ಟೆಯು ನಮ್ಮ ಯುನಿಫಾರಂ ಆಗಿತ್ತು. ದಾಸೇಗೌಡರು ಗಾಂಧಿಯವರ ರೀತಿಯಲ್ಲೇ ಎಲ್ಲರೂ ಆದರ್ಶವಾಗಿ ಬಾಳಬೇಕೆಂದು ಹೇಳುತ್ತಿದ್ದರು. ಸುಳ್ಳು ಹೇಳುವುದು, ಸೇದುವುದು, ಕುಡಿಯುವುದು ತಪ್ಪೆಂದು, ಭಾಷಣ ಮಾಡುತ್ತಿದ್ದರು. ಗಾಂಧಿಯವರ ಚಿತ್ರವು ಮತ್ತೊಂದು ರೀತಿಯಲ್ಲಿ ನನ್ನೊಳಗೆ ರೂಪುಗೊಳ್ಳತೊಡಗಿತು.

ನಾವು ಕೆಳ ಮಧ್ಯಮ ವರ್ಗಕ್ಕೆ ಸೇರಿದ್ದರಿಂದ ನಮ್ಮ ಜೀವನವು ಅತ್ಯಂತ ಸರಳವಾಗಿಯೇ ಸಾಗುತ್ತಿತ್ತು. ನನ್ನ ಅಮ್ಮ ನಿಷ್ಠುರವಾದ ಪ್ರಾಮಾಣಿಕ ವ್ಯಕ್ತಿ ಮತ್ತು ಹಠಮಾರಿ. ಅವರಿಗೆ ಎಷ್ಟು ತಿಳಿದಿತ್ತೋ ಅಷ್ಟು ವಿಚಾರಗಳನ್ನು ಹೇಳಿ ಅದೇ ಗಾಂಧಿ ವಾದವೆಂಬಂತೆ ಬಿಂಬಿಸುತ್ತಿದ್ದರು. ಅವರಿಗೆ ಯಾವಾಗಲೂ ಏನೋ ಒಂದು ತೀವ್ರತರವಾದ ಕಾಯಿಲೆ ಇದ್ದಂತೆ ನೆನಪು. ಹಾಗಾಗಿ ನಾನು, ಅಣ್ಣ-ತಮ್ಮ, ತಂಗಿ, ತಂದೆ ಎಲ್ಲರೂ ಮನೆಯ ಕೆಲಸಗಳನ್ನು ವಿವಿಧ ರೀತಿಯಲ್ಲಿ ಹಂಚಿಕೊಂಡು ಮಾಡುತ್ತಿದ್ದೆವು. ನಾನು ಮನೆ ಕಸ ಗುಡಿಸುವುದು, ಪಾತ್ರೆ ತೊಳೆಯುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದೆ. ಇದನ್ನೆಲ್ಲವನ್ನೂ ಗಾಂಧಿಯವರ ಜೊತೆ ನನಗೆ ಸಮೀಕರಿಸಿಕೊಳ್ಳತೊಡಗಿದೆ. ಯುಗಾದಿ ಹಬ್ಬಕ್ಕೆ ಬಟ್ಟೆ ತರುವಾಗ ಏನನ್ನಾದರೂ ಕೊಡಿಸುವಾಗ ನಿನಗೆ ಏನಾದರೂ ಬೇಕಾ? ಎಂದು ಕೇಳಿದರೆ ನಾನು ಬೇಡವೆಂದು ಹೇಳುತ್ತಿದ್ದೆ. ನನಗೆ ಆಸೆಯಿದ್ದರೂ ಬೇಡವೆಂದು ಸುಳ್ಳು ಹೇಳುತ್ತಿದ್ದೆ. ಗಾಂಧಿಯವರ ವಿಚಾರಗಳಿಗೆ ವಿರುದ್ಧವಾಗಿ ವರ್ತಿಸುತ್ತಿದ್ದೇನೆ ಎಂದು ಗೊಂದಲಕ್ಕೆ ಒಳಗಾಗುತ್ತಿದ್ದೆ.

ನನ್ನ ಹದಿಹರೆಯದ ದಿನಗಳಲ್ಲಿ ಯಾವುದೇ ಶೋಕಿ ಮಾಡದೇ, (ಶೋಕಿ ಮಾಡಲು ಸಾಧ್ಯವಿರಲಿಲ್ಲ ಎಂಬುದು ಬೇರೆ ಮಾತು) ಇರುತ್ತಿದ್ದೆ ಅಥವಾ ಹಾಗೆ ನಟಿಸುತ್ತಿದ್ದ ನೆನಪು. ಡಿಗ್ರಿಯ ದಿನಗಳಲ್ಲಿ ಗಾಂಧೀಜಿಯವರ ‘ಶಿಕ್ಷಣ ಕುರಿತು’ ಅವರ ಆತ್ಮಕಥೆ ಇತ್ಯಾದಿಗಳನ್ನು ಓದಿದ ನೆನಪು. ಆಗ ನಮಗೆ ದಲಿತ ಸಂಘರ್ಷ ಸಮಿತಿಯ ಪರಿಚಯವಾಯಿತು. ನಮ್ಮ ಮೇಷ್ಟ್ರು ಎಂ.ಎಲ್. ನರಸಿಂಹಮೂರ್ತಿಯವರು ಗಾಂಧಿಯವರನ್ನು ಮತ್ತು ಮಹಿಳೆಯರ ಜೊತೆಗಿನ ಅವರ ಸಂಬಂಧಗಳನ್ನು ಪೋಲಿಯಾಗಿ ವಿಮರ್ಶಿಸಿದ್ದರು. ಅವರ ತುಂಟತನ ಮತ್ತು ಪೋಲಿತನದಲ್ಲಿಯೂ ವೈಚಾರಿಕತೆಯ ಬೆಳಕಿತ್ತು. ಇತಿಹಾಸದ ಮೇಷ್ಟ್ರು ರೇವಯ್ಯನವರು ಬಾಬಾ ಸಾಹೇಬರಿಗೂ ಮತ್ತು ಗಾಂಧಿಯವರಿಗೂ ಇದ್ದ ವ್ಯತ್ಯಾಸಗಳನ್ನು ತಿಳಿಸಿದರು. ಅವರ ಮಾತು ಹರಿತವಾಗಿತ್ತು. ಅದು ನಾನು ಗಾಂಧಿಯನ್ನು ಅನುಮಾನಾಸ್ಪದವಾಗಿ ಸೀಳಿ ನೋಡುವಂತೆ ಮಾಡಿತ್ತು. ಪೆರಿಯಾರ್, ಗಾಂಧಿ, ಅಂಬೇಡ್ಕರ್ ಆ ಸಮಯದಲ್ಲಿ ಪುಕುವೋಕಾರ ‘ಒಂದು ಹುಲ್ಲಿನ ಕ್ರಾಂತಿ’ ಬಂದಿತ್ತು. ಲಂಕೇಶ್ ಪತ್ರಿಕೆ ಹೀಗೆ ಏನೇನೂ ಓದಿದಂತಾಗಿ ಜಾತಿ, ದೇವರು ಮತ್ತು ಧರ್ಮದ ಮೇಲೆ ನಂಬಿಕೆ ಹೊರಟು ಹೋಗಿತ್ತು. ಆದರೆ ಗಾಂಧಿ ಮತ್ತು ಅವರ ವಿಚಾರಗಳು ಎಂದಿಗೂ ತೆಗೆಯಲಾರದ ಅವಶೇಷಗಳಂತೆ ತಲೆಯಲ್ಲಿ ಕುಳಿತಿವೆ.

ಸ್ನಾತಕೋತ್ತರ ಪದವಿಗೆ ಬಂದು ಜ್ಞಾನ ಭಾರತಿಯ ಹಾಸ್ಟೆಲ್‌ನಲ್ಲಿ ಸೋಶಿಯಾಲಜಿ ಕ್ಲಾಸ್ ರೂಂನಲ್ಲಿ ಗಾಂಧಿ ಕುರಿತ ವಿಚಾರಗಳು ಪರಸ್ಪರ ಡಿಕ್ಕಿ ಹೊಡೆದುಕೊಳ್ಳುತ್ತಿದ್ದವು. ನನ್ನ ಡಿಗ್ರಿಯ ದಿನಗಳಲ್ಲಿ ಗಾಂಧಿ ಕುರಿತ ವಿಮರ್ಶೆ ಪರಿಚಯವಿದ್ದರೂ, ಅವರನ್ನು ಏಕವಚನದಲ್ಲಿ ‘ದಲಿತ ದ್ರೋಹಿ’ ಎಂದು ಬೈಯುವುದನ್ನು ಕೇಳಿಸಿಕೊಂಡಾಗ ವಿಪರೀತ ಮುಜುಗರವಾಗುತ್ತಿತ್ತು. ಮಾಲೂರಿನಿಂದ ಬಂದಿದ್ದ ನಮ್ಮ ಹಾಸ್ಟೆಲ್ ಗೆಳೆಯ ಹನುಮಪ್ಪ ಬಾಬಾ ಸಾಹೇಬರ ಪುಸ್ತಕಗಳನ್ನು ಚೆನ್ನಾಗಿ ಓದಿಕೊಂಡಿದ್ದರು. ವಿವಿಧ ಹಾಸ್ಟೆಲ್‌ಗಳಿಂದ ಬಂದಿದ್ದ ಎಲ್ಲರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಂಬೇಡ್ಕರರ ಚೈತನ್ಯ ಎದ್ದು ಕಾಣುತ್ತಿತ್ತು. ಕೆಲವರಂತೂ ಅಂಬೇಡ್ಕರ್ ಹಾದಿಯೆಂದರೆ ಕಡ್ಡಾಯವಾಗಿ ಗಾಂಧಿಯನ್ನು ಟೀಕಿಸಲೇಬೇಕು ಎಂದುಕೊಂಡಿದ್ದರು. ಹಾಸ್ಟೆಲ್‌ನಲ್ಲಿ ಈ ರೀತಿ ವಾತಾವರಣವಿದ್ದರೆ, ಕ್ಲಾಸ್‌ರೂಂನಲ್ಲಿ ಬೇರೆಯದೇ ಆದ ಗಾಂಧಿಯ ಬಗೆಗೆ ಚರ್ಚೆ ನಡೆಯುತ್ತಿತ್ತು.

ವಿವಿಧ ಸಮಾಜಶಾಸ್ತ್ರೀಯ ಸಿದ್ಧಾಂತಗಳ ಪಾಠ ಮಾಡುತ್ತಿದ್ದ ಜಿ. ಶಿವರಾಮಕೃಷ್ಣನ್ ಮಾರ್ಕ್ಸ್, ಗಾಂಧಿ ಮತ್ತು ಲೋಹಿಯಾ ಕುರಿತು ಅದ್ಭುತವಾಗಿ ಪಾಠ ಮಾಡುತ್ತಿದ್ದರು. ಅವರನ್ನು ನಾವೆಲ್ಲರೂ ಜಿಎಸ್‌ಆರ್ ಎಂದು ಕರೆಯುತ್ತಿದ್ದೆವು. ‘ಔಟ್ ಆಫ್ ದಿ ಬಾಕ್ಸ್’ ಚಿಂತಿಸುವುದನ್ನು ಕಲಿಸಿದರು. ಈ ತರಗತಿಯಲ್ಲಿ ಮಾರ್ಕ್ಸ್‌ನ ಪ್ರತಿಭೆಯನ್ನು ಹಿಗ್ಗಾಮುಗ್ಗಾ ಹೊಗಳಿ, ಅದೇ ಮುಂದಿನ ತರಗತಿಯಲ್ಲಿ ಅವನನ್ನು ಚಿಂದಿ ಮಾಡುತ್ತಿದ್ದರು. ಆಗ ಧರ್ಮಪಾಲ್ ಎಂಬ ಬಲಪಂಥೀಯ ಗಾಂಧಿವಾದಿಯ ಜೊತೆ ಜಿಎಸ್‌ಆರ್ ತೀವ್ರ ವಿಚಾರ ವಿನಿಮಯದಲ್ಲಿ ತೊಡಗಿದ್ದರು. ಅವರ ಜೊತೆ ನಡೆದ ವಾದ-ವಾಗ್ವಾದಗಳನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಿದ್ದರು.

ಗಾಂಧಿ ಒಬ್ಬ ಒನ್ ಮ್ಯಾನ್ ಆರ್ಮಿಯ ರೀತಿ ಇದ್ದದ್ದು ಭಾರತದ ಬಂಡವಾಳಶಾಹಿಗಳ ದುರಹಂಕಾರವನ್ನು ಸ್ವಾತಂತ್ರ ಹೋರಾಟದ ಹೆಮ್ಮೆಯನ್ನಾಗಿ ಪರಿವರ್ತಿಸಿದ್ದನ್ನು ಶಕ್ತಿಶಾಲಿಯಾಗಿ ಮಂಡಿಸುತ್ತಿದ್ದರು. ಗಾಂಧಿಗೆ ಮಾರ್ಕ್ಸ್‌ನಂತೆ ಅತೀ ದೊಡ್ಡ ಮಹತ್ವಾಕಾಂಕ್ಷೆ ಅಥವಾ ದೂರದ ಕನಸೇನೂ ಇರಲಿಲ್ಲ. ಅವರಿಗೆ ಭಾರತದ ಮಿತಿ ಮತ್ತು ನಾಗರಿಕತೆಯ ಅರಿವಿತ್ತು. ಎದುರಾಳಿಗೆ ಕೊಡಬಹುದಾದಷ್ಟನ್ನು ಮಾತ್ರ ಕೇಳುತ್ತಿದ್ದರು. ಒಂದು ಹಿಡಿ ಉಪ್ಪನ್ನು ಹಿಡಿದು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಎದೆಯಲ್ಲಿ ನಡುಕ ಹುಟ್ಟಿಸುವ ಸಾಮರ್ಥ್ಯವಿತ್ತು. ನಮ್ಮ ಸಮಾಜದ ಮನೋಸ್ಥಿತಿ ಅವರಿಗೆ ಅರ್ಥವಾಗಿತ್ತು. ಶಸ್ತ್ರಾಸ್ತ್ರ ಹಿಡಿದು ತರ್ಕಬದ್ಧವಾಗಿ ಯುದ್ಧ ಹೂಡುವಷ್ಟು ನಮ್ಮ ಸಮಾಜ ವಿಕಾಸವಾಗಿಲ್ಲವೆಂಬುದು ಗಾಂಧಿ ನಂಬಿಕೆಯಾಗಿತ್ತು. ತರ್ಕ ಮತ್ತು ವಿಜ್ಞಾನವನ್ನು ಅಂತಿಮ ಎಂದುಕೊಂಡಿದ್ದ ಮಾರ್ಕ್ಸ್‌ನಿಗೆ ಇಲ್ಲಿನ ಸಂಕೀರ್ಣವನ್ನು ಗ್ರಹಿಸುವುದು ಅಷ್ಟು ಸುಲಭವಾಗಿರಲಿಲ್ಲ. ಗಾಂಧಿ ಯಾವುದಕ್ಕೂ ಅಷ್ಟು ಸುಲಭವಾಗಿ ಬಗ್ಗುವವರಾಗಿರಲಿಲ್ಲ. ಅವರೊಬ್ಬ ನಿಜವಾದ ಅರ್ಥದಲ್ಲಿ ಕಮಾಂಡರ್ ಆಗಿದ್ದರು. ಹಾಗಿಲ್ಲದೇ ಹೋಗಿದ್ದರೆ ಅವರು ಕೋಟ್ಯಂತರ ಭಾರತೀಯರನ್ನು ಒಂದು ಸೈನ್ಯದಂತೆ ಮುನ್ನಡೆಸಲು ಸಾಧ್ಯವಿತ್ತೆ?

ಹೇಗೆ ಜಿಎಸ್‌ಆರ್ ಉಪನ್ಯಾಸದಲ್ಲಿ ಶಸ್ತ್ರ ಹಿಡಿಯದ ಕ್ರಾಂತಿಕಾರಿ ಗಾಂಧಿ ಪರಿಚಯವಾದರು. ಸಂಜೆ ಹಾಸ್ಟೆಲ್‌ಗೆ ಹೋದರೆ ಅಲ್ಲಿ ಪರಿಸ್ಥಿತಿ ಬೇರೆಯೇ ಇರುತ್ತಿತ್ತು. ಹನುಮಪ್ಪ ಮುಂತಾದ ಗೆಳೆಯರು ಬಾಬಾ ಸಾಹೇಬರನ್ನು ಚೆನ್ನಾಗಿ ಓದಿಕೊಂಡಿದ್ದರು. ಗಾಂಧಿಯನ್ನು ಕಟುವಾಗಿ ಟೀಕಿಸುತ್ತಿದ್ದರು.

ಪೂನಾ ಒಪ್ಪಂದದ ವೇಳೆ ಗಾಂಧಿ ಅಂಬೇಡ್ಕರ್‌ರನ್ನು ಕುಗ್ಗಿಸಿದ ರೀತಿ ದಲಿತರಿಗೆ ಬಗೆದ ಮಹಾ ದ್ರೋಹವಾಗಿತ್ತು. ವರ್ಣಾಶ್ರಮ ವ್ಯವಸ್ಥೆಯನ್ನು ಸಮರ್ಥಿಸುತ್ತಿದ್ದ ಗಾಂಧಿ ಅಸ್ಪಶ್ಯತೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದರು. ಸವರ್ಣೀಯ ಹಿಂದೂಗಳ ನಾಯಕರಾಗಿದ್ದ ಗಾಂಧಿಗೆ ಎಂದೂ ಅಸ್ಪಶ್ಯತೆಯ ಕರಾಳ ಮುಖ ಅರ್ಥವಾಗಲೇ ಇಲ್ಲ. ಹೆಚ್ಚೆಂದರೆ ಅನುಕಂಪ ಇತ್ತು. ಗಾಂಧಿಯದು ಯಾವಾಗಲೂ ಬಹಳ ಮನೋನಿಷ್ಠವಾದ ಇಗೊ ಸೆಂಟ್ರಿಕ್‌ವಾದವಾಗಿತ್ತು. ಆ ಕಾಲದ ಶ್ರೇಷ್ಠ ಅಡ್ವೊಕೇಟ್‌ಗಳಲ್ಲಿ ಒಬ್ಬರಾಗಿದ್ದ ಬಾಬಾ ಸಾಹೇಬರ ತರ್ಕ ಮತ್ತು ವಾದದ ಎದುರು ಗಾಂಧಿಯ ವಾದ ಎಲ್ಲೂ ನಿಲ್ಲುತ್ತಿರಲಿಲ್ಲ. ನನ್ನ ಗೆಳೆಯರ ಬಳಿ ಗಾಂಧಿಯ ಪರವಾಗಿ ವಾದ ಮಾಡಲು ಏನೂ ಉಳಿಯುತ್ತಲೇ ಇರಲಿಲ್ಲ. ಆ ವಾದಗಳ ಎದುರು ನಿರಾಯುಧನಾಗಿ ಶರಣಾಗಿ ಬಿಡುತ್ತಿದ್ದೆ. ಬಾಬಾ ಸಾಹೇಬರನ್ನು ಗಾಂಧಿ ನಿಜಕ್ಕೂ ಸರಿಯಾಗಿ ನಡೆಸಿಕೊಳ್ಳಲಿಲ್ಲವೇ? ಪರಸ್ಪರ ಅವರಿಬ್ಬರೂ ತಮ್ಮ ಗೆಳೆಯರ ಜೊತೆ ಒಬ್ಬರ ಬಗ್ಗೆ ಮತ್ತೊಬ್ಬರು ಎಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು ಎಂಬುದನ್ನು ಸಂಶೋಧನೆ ಮಾಡಬೇಕೆನ್ನಿಸಿತು. ಸಮಕಾಲೀನ ರಾಜಕಾರಣಿಗಳು ಮತ್ತು ಐಡಿಯಲಾಜಿಗಳು ಕಾಲಘಟ್ಟದ ಮಿತಿಯಲ್ಲಿ ನಡೆದುಕೊಳ್ಳುವುದು ಹೀಗೆಯೇ ಅಲ್ಲವೆ? ಕೋಟೆಗಾನಹಳ್ಳಿ ರಾಮಯ್ಯನವರು ಕೋಲಾರದ ಅಂತರಗಂಗೆಯ ಬಳಿ ಆದಿಮ ಸಂಸ್ಥೆಯನ್ನು ಕಟ್ಟಿದರು. ಒಂದು ದಿನ ಆದಿಮ ಟ್ರಸ್ಟ್‌ನಿಂದ ಅವರನ್ನು ಹೊರಹಾಕಲಾಯಿತು. ಆ ಸಭೆಯ ಅಧ್ಯಕ್ಷತೆಯನ್ನು ದೇವನೂರು ವಹಿಸಿದ್ದರು. ನಮ್ಮ ಕನ್ನಡ ಕ್ರಿಶ್ಚಿಯನ್ ಸ್ನೇಹಿತರ ಮೇಲೆ ಸುಳ್ಳು ಕೊಲೆ ಮೊಕದ್ದಮೆಯನ್ನು ಹೂಡಲಾಗಿತ್ತು. ಅದನ್ನು ದೇವನೂರು ತಮ್ಮ ಪ್ರಭಾವ ಮತ್ತು ಮಧ್ಯಪ್ರವೇಶಿಕೆಯಿಂದ ತಪ್ಪಿಸಬಹುದಾಗಿತ್ತು ಏಕೆ ತಪ್ಪಿಸಲಿಲ್ಲ? ರೈತ ನಾಯಕ ನಂಜುಂಡಸ್ವಾಮಿ ಮತ್ತು ಪಿ. ಲಂಕೇಶ್ ಮುಖಾಮುಖಿ ಮಾತನಾಡಬಹುದಾಗಿತ್ತು ಏಕೆ ಮಾತನಾಡಲಿಲ್ಲ? ಈ ಪ್ರಶ್ನೆಗಳಿಗೆಲ್ಲಾ ಉತ್ತರ ಹುಡುಕಲು ಹೋಗುತ್ತಿಲ್ಲ. ಇವರ ನಡೆಗಳು ತಪ್ಪು ಅಥವಾ ಸರಿ? ಎಂದು ಹೇಳುತ್ತಿಲ್ಲ. ಪ್ರತಿಯೊಂದು ಕಾಲಘಟ್ಟಕ್ಕೂ ಆದರದೇ ಆದ ವ್ಯಾಕರಣ ರೂಪುಗೊಂಡಿರುತ್ತದೆ. ಅದರಲ್ಲಿ ನಂಬಿಕೆ, ವ್ಯವಹಾರ, ಸಿದ್ಧಾಂತ, ಅವಕಾಶ, ಅಧಿಕಾರ, ಸಾಧ್ಯತೆ ಮತ್ತು ಕನಸುಗಳು ಸೇರಿಕೊಂಡು ಬಿಟ್ಟಿರುತ್ತವೆ. ಅದು ಹಾಗೆಯೇ ಜರುಗುತ್ತದೆ ಎನಿಸುತ್ತದೆ. ಹಾಗೆಯೇ ಗಾಂಧಿ ಅಂಬೇಡ್ಕರರ ಸಂಬಂಧವೂ ಇದ್ದಿರಬೇಕು ಎಂದೇ ಇಂದಿಗೂ ಯೋಚಿಸುತ್ತೇನೆ.

ನಾನು ಅಧ್ಯಾಪಕನಾಗಿ ಸೇರಿಕೊಂಡ ಮೇಲೆ ಮಾರ್ಕ್ಸ್‌ವಾದದ ಪ್ರಭಾವ ತೀವ್ರವಾಯಿತು. ದ್ವಂದ್ವಾತ್ಮಕ ಭೌತವಾದ, ಗತಿ ತಾರ್ಕಿಕತೆ ಬೂರ್ಷ್ಟಾ, ಬಂಡವಾಳಶಾಹಿ ಮತ್ತು ವರ್ಗ ಸಮರದ ಪರಿಕಲ್ಪನೆಗಳು ಅವುಗಳ ನಿಜವಾದ ಅರ್ಥದಲ್ಲಿ ಹೊಳೆಯತೊಡಗಿದವು. ನನಗೆ ಸಿಪಿಎಂ ಮತ್ತು ಸಿಪಿಐ ಮಾರ್ಕ್ಸ್‌ವಾದಿಗಳ ಪರಿಚಯವೇ ಇರಲಿಲ್ಲ. ಎಂ.ಎ ತರಗತಿಯಲ್ಲಿ ಜಿಎಸ್‌ಆರ್ ಅವರಿಂದ ಮಾರ್ಕ್ಸ್ ವಾದದ ಪರಿಚಯವಾಗಿತ್ತು. ಅಂತಿಮವಾಗಿ ಅದು ಪರೀಕ್ಷೆಗಾಗಿ ಬರೆಯುವ ತೆಳುವಾದ ಮಾರ್ಕ್ಸ್‌ವಾದವಾಗಿ ದುರ್ಬಲಗೊಂಡಿತ್ತು.

ಒಂದು ರೀತಿಯಲ್ಲಿ ಮಾರ್ಕ್ಸ್‌ವಾದ ಅದರ ಆಚರಣೆಯೊಡನೆಯೇ ಜಾರಿಗೆ ಬಂದಿತು. ಮಾರ್ಕ್ಸ್ ವಾದದ ವೈವಿಧ್ಯಮಯ ಕವಲುಗಳಾದ ಮಾವೋವಾದ, ನಕ್ಸಲ್‌ವಾದ ಅದರೊಳಗಿನ ಭಿನ್ನತೆಗಳ ಅರಿವು ಮೂಡತೊಡಗಿತು. ನಾನು ಕನಕಪುರದಲ್ಲಿದ್ದಾಗ ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಳೆ, ಸಿದ್ದೇಗೌಡ ಮತ್ತು ಎಂ.ಸಿ ನಾಗರಾಜ ಇವರ ಚಿಂತನ ಶಾಲೆಯ ತೀವ್ರತೆ ನನ್ನನ್ನು ಕಾಡತೊಡಗಿತು. ಆದರೆ ಅಲ್ಲಿದ್ದ ಚರ್ಚ್‌ನ ಗೆಳೆಯ ಫಾದರ್ ಚಸರಾ ಈ ತೀವ್ರತೆಯನ್ನು ನನ್ನಷ್ಟು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಭಾರತದಲ್ಲಿ ಅದು ನಡೆಯಲಾರದು ಎಂಬ ನಂಬಿಕೆಯನ್ನು ಹೊಂದಿದ್ದರು.

ಮಾರ್ಕ್ಸ್‌ವಾದವು ಬೈಬಲ್‌ನ ಅಥವಾ ಕ್ರಿಶ್ಚಿಯನ್ ಧರ್ಮದ ಮತ್ತೊಂದು ರೂಪ ಅಷ್ಟೇ ಕರ್ಮಠರೆಂದು ಮುಲಾಜಿಲ್ಲದೇ ಹೇಳುತ್ತಿದ್ದರು. ಆ ಸಮಯದಲ್ಲಿ ಕ್ರಿಶ್ಚಿಯನ್ ಪಾದ್ರಿ ಸ್ಟೇನ್ಸ್‌ರನ್ನು ಹಿಟ್ಲರ್‌ವಾದಿಗಳು ಒಡಿಶಾದಲ್ಲಿ ಸುಟ್ಟು ಹಾಕಿದರು. ನಾವೆಲ್ಲಾ ಆ ಘಟನೆಯಿಂದ ವಿಚಲಿತರಾದರೂ ಅವರು ಒಂದಿಷ್ಟೂ ವಿಚಲಿತರಾಗಲಿಲ್ಲ. ಕ್ರಿಶ್ಚಿಯನ್ನರಿಗೆ ಮತ್ತು ಮಾರ್ಕ್ಸ್‌ವಾದಿಗಳಿಬ್ಬರಿಗೂ ಹುತಾತ್ಮರು ಬೇಕು ಎಂದು ಪ್ರತಿಕ್ರಿಯಿಸಿದರು. ಈ ನಡುವೆಯೂ ನಮ್ಮ ಗೆಳೆಯರೆಲ್ಲಾ ಕೂತು ಗಾಂಧಿಯ ಹಿಂದ್ ಸ್ವರಾಜ್ ಪುಸ್ತಕ ಓದಿದೆವು. ನನಗೆ ನೆನಪಿರುವಂತೆ ಅದರ ಬಗ್ಗೆ ಯಾರೂ ಹೆಚ್ಚು ಚರ್ಚಿಸಲು ಹೋಗಲಿಲ್ಲ. ಮಾರ್ಕ್ಸ್ ಮಾವೋವಾದಿಗಳಲ್ಲಿ ಗಾಂಧಿಯವರ ಬಗ್ಗೆ ತೀವ್ರ ತಿರಸ್ಕಾರವಿತ್ತು. ಅವರ ಟ್ರಸ್ಟೀ ಶಿಪ್ ಪರಿಕಲ್ಪನೆಯು ಊಳಿಗಮಾನ್ಯ ಬಂಡವಾಳಶಾಹಿಗಳನ್ನು ಬೆಂಬಲಿಸುವುದಾಗಿತ್ತು.

ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವರನ್ನು ನೇಣು ಹಾಕುವುದರಿಂದ ತಪ್ಪಿಸಬಹುದಾಗಿತ್ತು. ವರ್ಗಸಮರವನ್ನು ತಪ್ಪಿಸಲೆಂದೇ ಹುಟ್ಟಿಬಂದ ಕಾಂಪ್ರೊಡಾರ್ ಬೂಜ್ವಾ ಆಗಿದ್ದರು. ಅವರಿಗೆ ಯಾವುದೇ ಒಂದು ಸ್ಪಷ್ಟ ರಾಜಕೀಯ ನಿಲುವಿರಲಿಲ್ಲ. ತಮ್ಮ ಅನುಕೂಲಕ್ಕೆ ತಕ್ಕಂತೆ ವರ್ತಿಸುವ ವ್ಯಕ್ತಿವಾದಿಯಾಗಿದ್ದರು. ಸಶಸ್ತ್ರ ಹೋರಾಟವಿಲ್ಲದೆ ಭಾರತಕ್ಕೆ ಸ್ವಾತಂತ್ರ ಬರುವುದು ತಡವಾಯಿತು. ಅಹಿಂಸೆ ಮತ್ತು ಸತ್ಯಾಗ್ರಹ ವರ್ಗಸಮರವನ್ನು ತಪ್ಪಿಸಿ ಸ್ವಾತಂತ್ರಾನಂತರವೂ ದೇಶದ ಅಧಿಕಾರ ಬಂಡವಾಳಶಾಹಿಗಳ ಕೈಗೆ ಹೋಗುವಂತೆ ಮಾಡಿದರು. ಗಾಂಧಿಯಿಂದ ಕೈಗಾರಿಕೀಕರಣ ಪ್ರಕ್ರಿಯೆಗೆ ಹಿನ್ನಡೆಯುಂಟಾಗಿ, ಊಳಿಗ ಮಾನ್ಯ ವ್ಯವಸ್ಥೆಯ ಪ್ರಾಚೀನ ಉತ್ಪಾದನಾ ವಿಧಾನಗಳಿಗೆ ಭಾರತ ಮರಳುವಂತಾ ಯಿತು. ಅದರಿಂದಾಗಿ ಇಂದಿಗೂ ಕೂಡ ನಮ್ಮ ದೇಶ ಅರೆ ಉಳಿಗಮಾನ್ಯ ಸಮಾಜ ವಾಗಿಯೇ ಉಳಿದಿದೆ ಎಂಬುದು ಕೆಲ ಎಡಪಂಥೀಯರ ವಾದವಾಗಿತ್ತು.

ಗಾಂಧಿ ಅಥವಾ ಗಾಂಧಿವಾದ ಮಾರ್ಕ್ಸ್‌ವಾದಿಗಳ ದೃಷ್ಟಿಯಲ್ಲಿ ಅಪ್ರಸ್ತುತ ವಾಗಿತ್ತು. ಅತಿ ಆಶ್ಚರ್ಯಕರ ವಿಚಾರವೆಂದರೆ ನಮ್ಮ ಸುತ್ತಮುತ್ತಲಿನ ಮಾರ್ಕ್ಸ್ ವಾದಿಗಳ ಜಾತಿಯ ಗ್ರಹಿಕೆ ಬಹಳ ತೆಳುವಾಗಿತ್ತು. ವರ್ಗ ಸಮರದಲ್ಲಿ ಯಶಸ್ವಿ ಯಾದರೆ ಅದನ್ನು ಬಹಳ ಸುಲಭವಾಗಿ ಅಳಿಸಿ ಹಾಕಬಹುದೆಂದು ನಂಬಿದ್ದರು. ಅಂಬೇಡ್ಕರರ ಸಾಮಾಜಿಕ ಗ್ರಹಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದಂತೆ ತೋರಲಿಲ್ಲ. ಇದೇ ಸಂದರ್ಭದಲ್ಲಿಯೇ ಕಾನ್ಶೀರಾಂರ ನೇತೃತ್ವದಲ್ಲಿ ಬಹುಜನ ಸಮಾಜ ಪಕ್ಷವು ಅಂಬೇಡ್ಕರ ವಾದವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲು ಪ್ರಯತ್ನಿಸು ತ್ತಿತ್ತು. ಕಾನ್ಶೀರಾ ಮತ್ತು ಮಾಯಾವತಿಯವರು ಅಂಬೇಡ್ಕರ್ ವಾದವನ್ನು ಕ್ರಿಯಾ ಶೀಲವಾಗಿ ತುಸು ಆಕ್ರಮಣಕಾರಿಯಾಗಿಯೇ ಮಂಡಿಸಿದರು. ಇದು ರಾಷ್ಟ್ರದಾ ದ್ಯಂತ ಸಂಚಲನವನ್ನು ಉಂಟುಮಾಡಿತು. ಅಂಬೇಡ್ಕರ್ ವಾದವನ್ನು ಹರಡ ಬೇಕಾದರೆ ಅಲ್ಪಸ್ವಲ್ಪ ಉಳಿದಿದೆ ಎಂದು ಭಾವಿಸಲಾದ ಗಾಂಧಿವಾದ ಜೊತೆಗೆ ತೀವ್ರರೂಪದಲ್ಲಿ ಮಾರ್ಕ್ಸ್ ವಾದವನ್ನು ಬೌದ್ಧಿಕವಾಗಿ ಬಗ್ಗುಬಡಿಯಲೇ ಬೇಕಾಗಿತ್ತು. ಬಿಎಸ್ಪಿ ಬಡಿಗೆಗೆ ಸಿಕ್ಕ ಗಾಂಧಿ ಮತ್ತು ಗಾಂಧಿವಾದ ನುಚ್ಚು ನೂರಾಯಿತು. ತಳಮಟ್ಟದ ಕಾರ್ಯಕರ್ತರಲ್ಲಂತೂ ಗಾಂಧಿ ಹಿಂದೂಗಳ ನಾಯಕ ನಾಗಿಯೂ, ನಿರ್ವಿವಾದವಾಗಿ ದಲಿತರ ಶತ್ರುವಾಗಿಯೂ ರೂಪುಗೊಂಡರು.

ನಾನು ಅಂಬೇಡ್ಕರ್ ವಿಚಾರಧಾರೆಯ ತೀವ್ರ ಪ್ರಭಾವಕ್ಕೆ ಒಳಗಾದರೂ ದಲಿತರ ಶತ್ರುವನ್ನಾಗಿ ಗಾಂಧಿಯನ್ನು ನೋಡಲು ಸಾಧ್ಯವಾಗಲಿಲ್ಲ. ನಾನು ಇಂದಿಗೂ ಸಾರ್ವಜನಿಕವಾಗಿ ಅಂಬೇಡ್ಕರ್‌ವಾದಿಯೆಂದು ಘೋಷಿಸಿ ಕೊಂಡರೂ ಗಾಂಧಿ ವಿರೋಧಿಯೆಂದು ಹೇಳಲು ಸ್ವಲ್ಪ ಕಷ್ಟವಾಗುತ್ತದೆ. ಕಳೆದೆರಡು ದಶಕಗಳಲ್ಲಿ ಹಿಟ್ಲರ್‌ವಾದಿಗಳು ನಮ್ಮ ಸಮಾಜದಲ್ಲಿ ಮೇಲುಗೈ ಸಾಧಿಸಿದರು. ಅವರ ಗೆಲುವು ಕಾಂಗ್ರೆಸ್, ಮಾರ್ಕ್ಸ್ ವಾದಿ ಪಕ್ಷಗಳು ಬಿಎಸ್ಪಿ ಮತ್ತು ಎಲ್ಲಾ ಉದಾರವಾದಿಗಳನ್ನು ಬಗ್ಗು ಬಡಿಯುವುದಾಗಿತ್ತು. ಗಾಂಧಿ ಹತ್ಯೆಯ ಕಳಂಕದಿಂದ ಪಾರಾಗಲು ಗಾಂಧಿಗೆ ಮೊಳೆ ಹೊಡೆದು ಶಿಲುಬೆಗೇರಿಸಲು ಪ್ರಾರಂಭಿಸಿದರು. ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲು, ಮೊದಲು ಅದರ ಐಕಾನ್‌ಗಳಾದ ಗಾಂಧಿ ಮತ್ತು ನೆಹರೂರನ್ನು ಮುಗಿಸಲು ವಾದಗಳನ್ನು ತಯಾರಿಸತೊಡಗಿದರು. ಗಾಂಧಿ ಮುಸ್ಲಿಮರ ಬೆಂಬಲಿಗ, ಭಾರತ ಇಬ್ಬಾಗವಾಗಲು ಅವರೇ ಕಾರಣ ಅವರು ತನ್ನ ಸ್ವಾರ್ಥಕ್ಕಾಗಿ ಅನೇಕ ಹೋರಾಟಗಾರರನ್ನು ಬಲಿಕೊಟ್ಟು, ಪಾಕಿಸ್ತಾನಕ್ಕೆ ಹೆಚ್ಚು ಅನುಕೂಲವಾಗುವಂತೆ ಮಾಡಿದರು. ಗೋಡ್ಸೆ ಅವರನ್ನು ಬಹಳ ತಡವಾಗಿ ಕೊಂದ. ಮೊದಲೇ ಕೊಂದಿದ್ದರೆ ಅನುಕೂಲವಾಗುತ್ತಿತ್ತು. ಅವರು ನಿಜವಾಗಿಯೂ ಬ್ರಹ್ಮಚರ್ಯ ಆಚರಿಸಲಿಲ್ಲ. ಬಲಪಂಥೀಯರು ಗಾಂಧಿಯ ಮೇಲೆ ಈ ರೀತಿಯ ದಾಳಿಯನ್ನು 1930ರಿಂದಲೇ ಆರಂಭಿಸಿದರು. 1948ರಲ್ಲಿ ಗಾಂಧಿಯನ್ನು ದೈಹಿಕವಾಗಿಯೂ ಮುಗಿಸಿದರು. ಈಗ ಗಾಂಧಿ ಕಳಂಕವಾಗಿ ಭಾರತೀಯರ ನೆನಪಲ್ಲಿ ಉಳಿಯಬೇಕು. ಬೇಕಾದಾಗ ಚುನಾವಣಾ ಸಂಕೇತವಾಗಬೇಕು. ಹೀಗೆ ಇಬ್ಬಗೆಯ ರೀತಿಯಲ್ಲಿ ಗಾಂಧಿಯನ್ನು ನಿರ್ವಹಿಸುತ್ತಿದ್ದಾರೆ. ಗಾಂಧಿಯನ್ನು ದ್ವೇಷಿಸುತ್ತಾ ಬಳಸಿಕೊಳ್ಳಬೇಕು. ಬಳಸಿ ಕೊಳ್ಳುತ್ತಾ ದ್ವೇಷಿಸಬೇಕು. ಹೀಗೆ ಹೊಸ ಸೈಕಾಲಜಿಕಲ್ ಗೇಮ್‌ಗೆ ಭಾರತೀಯ ರನ್ನು ಒಗ್ಗಿಸಲಾಗಿದೆ. ನಾನು ಗಾಂಧೀಜಿಯವರನ್ನು ಅನುಮಾನಗಳೊಂದಿಗೆ ಪ್ರೀತಿಸುವವನಾಗಿ ಅವರ ಕುರಿತ ಎಲ್ಲ ಕಥನ ಮತ್ತು ಸಂಕಥನಗಳಿಗೆ ಮುಖಾಮುಖಿಯಾಗಿದ್ದೇನೆ. ಅವರು ತಮ್ಮ ಇರುವಿಕೆ ಮತ್ತು ವಿಚಾರಗಳ ಮೂಲಕ ಎಲ್ಲರಲ್ಲೂ ಮೆಚ್ಚುಗೆ ಮತ್ತು ಟೀಕೆಯ ಕ್ರಿಯಾಶೀಲ ವಾಗ್ವಾದಕ್ಕೆ ಕಾರಣರಾಗಿದ್ದಾರೆ. ನಾವು ಒಪ್ಪಲಿ, ಬಿಡಲಿ ಸದ್ಯಕ್ಕಂತೂ ಗಾಂಧಿ ಭಾರತದ ತಾತ್ವಿಕ ಕ್ಯಾನ್ವಾಸಿನಿಂದ ನಿರ್ಗಮಿಸುವ ಯಾವ ಲಕ್ಷಣವೂ ಇಲ್ಲ. ಹಾಗೆಯೇ ನನ್ನ ಮನಸ್ಸಿನ ಭಿತ್ತಿಯಿಂದ ಕೂಡ.

Writer - ಡಾ. ಸಿ.ಜಿ. ಲಕ್ಷ್ಮೀಪತಿ

contributor

Editor - ಡಾ. ಸಿ.ಜಿ. ಲಕ್ಷ್ಮೀಪತಿ

contributor

Similar News