ಬೌಲರ್‌ಗಳ ಸಾಹಸ: ಝಿಂಬಾಬೈಯನ್ನು ಆರು ವಿಕೆಟ್‌ಗಳಿಂದ ಮಣಿಸಿದ ದ.ಆಫ್ರಿಕ

Update: 2018-10-13 19:17 GMT

  

ಪೊಶೆಫ್‌ಸ್ಟ್ರೂಮ್ (ದ.ಆಫ್ರಿಕ), ಅ.13: ಇಲ್ಲಿನ ಸೆನ್ವೆಸ್ ಪಾರ್ಕ್ ಮೈದಾನದಲ್ಲಿ ನಡೆದ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಸುಲಭ ಜಯ ದಾಖಲಿಸುವ ಮೂಲಕ ಅತಿಥೇಯ ದಕ್ಷಿಣ ಆಫ್ರಿಕ ಮೂರು ಪಂದ್ಯಗಳ ಸರಣಿಯಲ್ಲಿ 2-0ಯಿಂದ ಮುನ್ನಡೆ ಸಾಧಿಸಿದೆ. ದ.ಆಫ್ರಿಕದ ಗೆಲುವಿನಲ್ಲಿ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ವೇಗಿ ಡೇನ್ ಪ್ಯಾಟರ್ಸನ್ 22 ರನ್ ನೀಡಿ ಝಿಂಬಾಬ್ವೆಯ ಇಬ್ಬರು ಅಗ್ರ ಕ್ರಮಾಂಕದ ಆಟಗಾರರನ್ನು ಪೆವಿಲಿಯನ್‌ಗೆ ಕಳುಹಿಸುವ ಮೂಲಕ ಝಿಂಬಾಬ್ವೆಗೆ ಆರಂಭಿಕ ಹೊಡೆತ ನೀಡಿದರು. ಈ ಅದ್ಭುತ ನಿರ್ವಹಣೆಗಾಗಿ ಪ್ಯಾಟರ್ಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ದಕ್ಷಿಣ ಆಫ್ರಿಕದ ಪದ ವೇಗಿಗಳಾದ ಲುಂಗಿ ಗಿಡಿ, ಪ್ಯಾಟರ್ಸನ್ ಮತ್ತು ರಾಬಿ ಫ್ರಿಲಿಂಕ್ ತಲಾ ಎರಡು ವಿಕೆಟ್ ಪಡೆದರು. ಅಂಡೈಲ್ ಫಹ್ಲುಕ್ವಾಯೊ ವಿಕೆಟ್ ಪಡೆಯಲು ವಿಫಲವಾದರೂ ತನ್ನ ನಾಲ್ಕು ಓವರ್‌ಗಳಲ್ಲಿ ಕೇವಲ 15 ರನ್‌ಗಳನ್ನಷ್ಟೇ ಬಿಟ್ಟುಕೊಟ್ಟರು. ಇದಕ್ಕೆ ತದ್ವಿರುದ್ಧ ನಿರ್ವಹಣೆಯನ್ನು ನೀಡಿದ ಸ್ಪಿನ್ನರ್ ತಬ್ರೈಝ್ ಶಮ್ಸಿ ನಾಲ್ಕು ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಪಡೆದು 37 ರನ್ ನೀಡುವ ಮೂಲಕ ದುಬಾರಿ ಬೌಲರ್ ಎನಿಸಿದರು. ಶಮ್ಸಿಯ ಅಂತಿಮ ಓವರ್‌ನಲ್ಲಿ ಝಿಂಬಾಬ್ವೆ 24 ರನ್ ಬಾಚಿಕೊಂಡಿತ್ತು. ನಿಗದಿತ 20 ಓವರ್‌ಗಳಲ್ಲಿ ಝಿಂಬಾಬ್ವೆಯನ್ನು 132 ರನ್‌ಗೆ ಕಟ್ಟಿ ಹಾಕಿದ ನಂತರ ಗುರಿಯನ್ನು ಬೆಂಬತ್ತಿ ಮೈದಾನಕ್ಕಿಳಿದ ದ.ಆಫ್ರಿಕದ ಎಲ್ಲ ಆರು ಆಟಗಾರರು ಎರಡಂಕೆಯನ್ನು ದಾಟಿದರು. ಡುಮಿನಿ ಓಟಾಗದೆ 33 ರನ್ ಗಳಿಸಿದರು ಅಂತಿಮವಾಗಿ ದಕ್ಷಿಣ ಆಫ್ರಿಕ ಇನ್ನೂ 4.2 ಓವರ್ ಬಾಕಿಯಿರುವಂತೆ ಪಂದ್ಯವನ್ನು ಕೈವಶ ಮಾಡಿಕೊಂಡಿತು. ಝಿಂಬಾಬ್ವೆ ವಿರುದ್ಧ ನಡೆದ ಏಕದಿನ ಸರಣಿಯನ್ನು ಈಗಾಗಲೇ ದ.ಆಪ್ರಿಕ 3-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿದೆ. ಇದೀಗ ಟಿ-ಟ್ವೆಂಟಿಯಲ್ಲೂ ಮೂರು ಪಂದ್ಯಗಳಲ್ಲಿ ಎರಡನ್ನು ಜಯಿಸಿ ಸರಣಿ ವಶಪಡಿಸಿಕೊಂಡಿದೆ. ಮುಂದಿನ ಹಾಗೂ ಅಂತಿಮ ಟಿ-ಟ್ವೆಂಟಿ ಪಂದ್ಯ ರವಿವಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News