ಎರಡನೇ ಟೆಸ್ಟ್: ಭಾರತ 367 ರನ್‌ಗೆ ಆಲೌಟ್

Update: 2018-10-14 06:44 GMT

ಹೈದರಾಬಾದ್, ಅ.14: ನಾಯಕ ಜೇಸನ್ ಹೋಲ್ಡರ್(5-56) ಹಾಗೂ ಗ್ಯಾಬ್ರಿಯಲ್(3-107) ದಾಳಿಗೆ ಸಿಲುಕಿದ ಭಾರತ ತಂಡ ವೆಸ್ಟ್‌ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 367 ರನ್‌ಗೆ ಆಲೌಟ್ ಆಗಿದೆ.

ಮೂರನೇ ದಿನವಾದ ರವಿವಾರ 4 ವಿಕೆಟ್ ನಷ್ಟಕ್ಕೆ 308 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಭಾರತ ನಿನ್ನೆಯ ಮೊತ್ತಕ್ಕೆ 59 ರನ್ ಸೇರಿಸುವಷ್ಟರಲ್ಲಿ ಉಳಿದ 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಕೇವಲ 56 ರನ್ ಮುನ್ನಡೆ ಪಡೆಯಲಷ್ಟೇ ಶಕ್ತವಾಯಿತು.

ಇಂದು ಇನಿಂಗ್ಸ್ ಆರಂಭಿಸಿದ ಅಜಿಂಕ್ಯ ರಹಾನೆ ಹಾಗೂ ರಿಷಭ್ ಪಂತ್ 5ನೇ ವಿಕೆಟ್‌ಗೆ 152 ರನ್ ಜೊತೆಯಾಟ ನಡೆಸಿ 182 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಆಸರೆಯಾದರು. ನಿನ್ನೆಯ ಮೊತ್ತಕ್ಕೆ 19 ರನ್ ಸೇರಿಸಿದ ರಹಾನೆಗೆ ನಾಯಕ ಹೋಲ್ಡರ್ ಪೆವಿಲಿಯನ್ ಹಾದಿ ತೋರಿಸಿದರು.

ಆಲ್‌ರೌಂಡರ್ ರವೀಂದ್ರ ಜಡೇಜ ಖಾತೆ ತೆರೆಯಲು ವಿಫಲವಾಗಿ ಹೋಲ್ಡರ್ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.

92 ರನ್‌ಗೆ(134 ಎಸೆತ, 11 ಬೌಂಡರಿ, 2 ಸಿಕ್ಸರ್)ಔಟಾದ ಪಂತ್ ಸತತ ಎರಡನೇ ಇನಿಂಗ್ಸ್‌ನಲ್ಲಿ ಶತಕ ವಂಚಿತರಾದರು. 1997ರಲ್ಲಿ ರಾಹುಲ್ ದ್ರಾವಿಡ್ ಶ್ರೀಲಂಕಾ ವಿರುದ್ಧ 92 ಹಾಗೂ 93 ರನ್ ಗಳಿಸಿ ಶತಕ ವಂಚಿತರಾಗಿದ್ದರು. 35ರನ್ ಗಳಿಸಿದ ಅಶ್ವಿನ್ ಭಾರತಕ್ಕೆ ಅಲ್ಪ ಮುನ್ನಡೆ ಒದಗಿಸಿದರು.

ವೆಸ್ಟ್‌ಇಂಡೀಸ್ ಮೊದಲ ಇನಿಂಗ್ಸ್‌ನಲ್ಲಿ 311 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News