ಎಚ್1 ಎನ್1 ಮುನ್ನಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ಸೂಚನೆ

Update: 2018-10-14 11:48 GMT

ಬೆಂಗಳೂರು, ಅ. 14: ರಾಜ್ಯದಲ್ಲಿ ಎಚ್1ಎನ್1 ಭೀತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಅಗತ್ಯ ಮುನ್ನೆಚ್ಚರಿಕ ಕ್ರಮ ತೆಗೆದುಕೊಳ್ಳಬೇಕೆಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರವಿವಾರ ಇಲ್ಲಿನ ಸದಾಶಿವನಗರದಲ್ಲಿನ ಬಿಡಿಎ ಕ್ವಾಟ್ರಸ್‌ನಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಎಚ್1 ಎನ್1 ವೈರಾಣು ಜ್ವರ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಈ ವರೆಗೆ ಒಟ್ಟು 456 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. ಜನವರಿ 2018ರಿಂದ ಇಲ್ಲಿಯವರಗೆ ಒಟ್ಟು 4902 ಜನರನ್ನು ಪರೀಕ್ಷಿಸಲಾಗಿದೆ. ಈ ಪೈಕಿ 456 ಪ್ರಕರಣಗಳು ಎಚ್1 ಎನ್1 ರೋಗಾಣು ಇರುವುದು ದೃಢಪಟ್ಟಿದ್ದು, ಆತಂಕ ಮೂಡಿಸಿದೆ. ಈ ಬಗ್ಗೆ ಈಗಾಗಲೇ ಎಲ್ಲ ವಿಭಾಗದ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಸಾರ್ವಜನಿಕರು ಯಾವುದೇ ರೀತಿಯ ಜ್ವರ ಕಂಡು ಬಂದರೂ ಅಥವಾ ಈ ರೋಗಾಣುವಿನ ಲಕ್ಷಣದ ಅನುಭವವಾದರೆ ಕೂಡಲೇ ಜನರು ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದ ಅವರು, ಪ್ರತಿವರ್ಷ ಎಚ್1ಎನ್1 ಪ್ರಕರಣಗಳು ದಾಖಲಾಗುತ್ತಿವೆ. 2015ರಲ್ಲಿ ಈ ರೋಗಾಣುವಿನಿಂದ 94ಮಂದಿ ಸಾವನ್ನಪ್ಪಿದ್ದರು. ನಂತರದ ವರ್ಷದಲ್ಲಿ ಅಗತ್ಯ ಮುನ್ನಚ್ಚರಿಕೆ ವಹಿಸಿದ್ದರಿಂದ ಈ ರೋಗಾಣುವಿನಿಂದ ಸಾವನ್ನಪ್ಪಿದವರ ಸಂಖ್ಯೆ ಇಳಿಮುಖವಾಗಿದೆ. 2017ರಲ್ಲಿ 3 ಸಾವಿರ ಪ್ರಕರಣಗಳು ಪತ್ತೆಯಾಗಿದ್ದವು. ಈ ವರ್ಷವೂ ಎಚ್1 ಎನ್1 ಆತಂಕ ಹರಡುತ್ತಿದೆ. ಈ ಬಗ್ಗೆ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆದರೆ ಗಾಬರಿಯಾಗದಂತೆ ಇಂಥ ಲಕ್ಷಣ ಕಂಡು ಬಂದರೆ ಕೂಡಲೇ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಉ.ಕ.ಭಾಗದಲ್ಲಿ ಎಚ್1 ಎನ್1 ಪತ್ತೆಹಚ್ಚಲು ಯಾವುದೇ ಪ್ರಯೋಗಾಲಯ (ಲ್ಯಾಬ್) ವ್ಯವಸ್ಥೆ ಇಲ್ಲ. ಹೀಗಾಗಿ ಆ ಭಾಗದಲ್ಲಿ ಸರಕಾರಿ ಲ್ಯಾಬ್ ಪ್ರಾರಂಭ ಮಾಡಲಾಗುವುದು ಎಂದ ಪರಮೇಶ್ವರ್. ಬಿಬಿಎಂಪಿ ವ್ಯಾಪ್ತಿಯಲ್ಲಿ ಇಬ್ಬರು ಎಚ್1 ಎನ್1 ನಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಬಿಬಿಎಂಪಿ ಅಧಿಕಾರಿಗಳಿಗೆ ಈ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದೇನೆ ಎಂದರು.

ಎಚ್ 1 ಎನ್ 1 ರೋಗಾಣು ಗಾಳಿಯಲ್ಲಿ ಹರಡುವುದರಿಂದ ರೋಗಿಯಿಂದ ದೂರ ಇರುವುದು ಒಳ್ಳೆಯದು. ಜ್ವರ ಬಂದರೂ ಆತಂಕ ಬೇಡ. ಸಮೀಪದ ಸರಕಾರಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ. ಎಚ್ 1 ಎನ್ 1 ರೋಗಾಣು ನಿಯಂತ್ರಣಕ್ಕೆ ಅಗತ್ಯ ಔಷಧಿಗಳ ದಾಸ್ತಾನು ಇದೆ ಎಂದು ಹೇಳಿದರು.

ದಾಖಲಾದ ಪ್ರಕರಣಗಳು

ಎಚ್1ಎನ್1ನಿಂದ ಸಾವನ್ನಪ್ಪಿದವರ ಸಂಖ್ಯೆ
2015- 94 ಮಂದಿ
2016- ಯಾರೂ ಇಲ್ಲ
2017- 15 ಮಂದಿ
2018- 6 ಮಂದಿ

ಎಚ್1ಎನ್1ನಿಂದ 2018ರಲ್ಲಿ ಸಾವನ್ನಪ್ಪಿದವರ ಸಂಖ್ಯೆ

ಬೆಂಗಳೂರು- 2 ಬೆಂ.ಗ್ರಾಮಾಂತರ-1
ಅರಸೀಕೆರೆ-1
ತುಮಕೂರು-1
ಕಲುಬುರಗಿ-1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News