ಬೆಂಗಳೂರು :ಜೂಜಾಟ ಅಡ್ಡೆಗಳ ಮೇಲೆ ಮುಂದುವರೆದ ಸಿಸಿಬಿ ದಾಳಿ

Update: 2018-10-14 12:12 GMT

ಬೆಂಗಳೂರು, ಅ.14: ಕಾನೂನು ಬಾಹಿರವಾಗಿ ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ನಡೆಸುತ್ತಿದ್ದ ಆರೋಪದಡಿ ನಗರದ ಆರ್.ಜಿ.ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 48 ಜನರನ್ನು ಬಂಧಿಸಿ, 9.33 ಲಕ್ಷ ರೂ.ನಗದು, 3.5 ಕೋಟಿ ರೂ. ಬೆಲೆಯ 1482 ಟೋಕನ್‌ಗಳನ್ನು ಜಪ್ತಿ ಮಾಡಿದ್ದಾರೆ.

 ಆರ್.ಜಿ.ಕ್ಲಬ್ ನಡೆಸುತ್ತಿದ್ದ ಪ್ರಮುಖ ಆರೋಪಿ ಮೋಹನ್ ಯಾನೆ ಕಪಾಲಿ ಮೋಹನ್, ಏಜೆಂಟ್ ಖಾನ್ ಎಂಬವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ ಎಂದು ಕೇಂದ್ರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

ನಗರದ ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾಲಕ್ಷ್ಮೀ ಪುರಂ ಇಂಡಸ್ಟ್ರೀಯಲ್ ಸಬರ್ಬ್, 5ನೆ ಮಹಡಿಯಲ್ಲಿರುವ ಆರ್.ಜಿ. ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‌ನಲ್ಲಿ ನಿಯಮ ಬಾಹಿರವಾಗಿ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಶಾಂತ್, ಎಂ.ಪ್ರಕಾಶ್, ಕೆ.ಕೃಷ್ಣ, ಕೆ.ಶೂದನ್, ಪಿ.ರವೀಂದ್ರ, ಕಲಾಧರ್, ಪಿ.ರಮೇಶ್, ಅನಂತ ರೆಡ್ಡಿ, ಸೂರ್ಯ ನಾರಾಯಣಮೂರ್ತಿ, ನರಸಿಂಗ ರಾವ್, ಯು.ವಿ. ರಾಮಣ್ಣ, ಪಿ.ಕೃಷ್ಣ, ಎಸ್.ಶ್ರೀನಿವಾಸ್ ಸೇರಿದಂತೆ 48 ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.

ಕ್ಲಬ್‌ಗೆ ಪಡೆಯಲಾಗಿದ್ದ ಪರವಾನಿಗೆ ಈಗಾಗಲೇ ಮುಗಿದಿದ್ದರೂ ಪರವಾನಿಗೆ ಪಡೆದಿರಲಿಲ್ಲ. ನಿಯಮ ಬಾಹಿರವಾಗಿ ನೆರೆರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶಗಳಿಂದ ಜೂಜಾಟ ಆಡುವವರನ್ನು ಆಹ್ವಾನಿಸಿ ಅವರಿಗೆ ವಿಮಾನದ ಟಿಕೆಟ್, ಊಟ ವಸತಿಗಳನ್ನು ಒದಗಿಸುತ್ತಿದ್ದರು. ಅವರ ಫೋಟೋಗಳನ್ನು ಸ್ಥಳದಲ್ಲೇ ತೆಗೆದು ನಕಲಿ ಗುರುತಿನ ಚೀಟಿಗಳನ್ನು ಒದಗಿಸುತ್ತಿದ್ದು, ವಿಚಾರಣೆಯ ವೇಳೆ ತಿಳಿದುಬಂದಿದೆ.

ಬೆಂಗಳೂರು ನಗರ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಉಪ ಪೊಲೀಸ್ ಆಯುಕ್ತ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಸಿ.ಟಿ.ಸುಬ್ರಹ್ಮಣ್ಯ, ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಕೆ.ಪ್ರಕಾಶ್, ಪ್ರವೀಣ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮನೆಯಲ್ಲೂ ತನಿಖೆ..!
ಸಿನಿಮಾ ನಿರ್ಮಾಪಕನೂ ಆಗಿರುವ ಫೈನಾನ್ಯಿಯರ್ ಕಪಾಲಿ ಮೋಹನ್ ಮನೆ ಮೇಲೆ ರವಿವಾರವೂ ಸಿಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿರುವ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News