ವಾಹನ ಗುಜರಿ ನೀತಿ ಜಾರಿ ಮತ್ತಷ್ಟು ವಿಳಂಬ ?

Update: 2018-10-14 17:13 GMT

ಹೊಸದಿಲ್ಲಿ, ಅ.14: 20 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಉದ್ದೇಶದ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆಯ ವಾಹನ ಗುಜರಿ ನೀತಿ ಜಾರಿಗೆ ಬರುವಲ್ಲಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಯೋಜನೆ ಜಾರಿಗೆ ರಾಜ್ಯ ಸರಕಾರಗಳು ಆಸಕ್ತಿ ತೋರಿಲ್ಲ. ಭಾರತದಂತಹ ಸಂಯುಕ್ತ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಸರಕಾರಗಳ ಸಂಪೂರ್ಣ ಒಪ್ಪಿಗೆಯಿಲ್ಲದೆ ಯಾವುದೇ ಯೋಜನೆ ಜಾರಿಗೊಳಿಸುವುದು ತುಂಬಾ ಕಷ್ಟದ ಕೆಲಸವಾಗಿದೆ ಎಂದು ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದೊಂದಿಗೆ ಸಮಾಲೋಚನಾ ಪ್ರಕ್ರಿಯೆ ಮುಂದುವರಿದಿದೆ. ರಾಜ್ಯ ಸರಕಾರಗಳಿಗೆ ಪತ್ರ ಬರೆದು ಅವರ ಅಭಿಪ್ರಾಯ ಕೇಳಲಾಗುವುದು. ರಾಜ್ಯಗಳಿಂದ ಇನ್ನೂ ಉತ್ತರ ಬಂದಿಲ್ಲ. ಆದ್ದರಿಂದ ಯೋಜನೆ ಜಾರಿಯಲ್ಲಿ ವಿಳಂಬವಾಗುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ. ಯೋಜನೆ ಜಾರಿ ಹಾಗೂ ಕಾರ್ಯನಿರ್ವಹಣೆಯ ಶೇ.90ರಷ್ಟು ಪ್ರಕ್ರಿಯೆ ರಾಜ್ಯ ಸರಕಾರದ ಅಧೀನದಲ್ಲಿರುತ್ತದೆ. ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವುದೂ ಉತ್ತರ ಬರುವಲ್ಲಿ ವಿಳಂಬವಾಗಲು ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಅಂಗೀಕೃತಗೊಂಡ ಈ ಕಾರ್ಯನೀತಿಯನ್ನು ಪ್ರಧಾನಮಂತ್ರಿ ಕಚೇರಿ ಜುಲೈ 9ರಂದು ವಾಪಾಸು ಕಳಿಸಿದ್ದು ರಾಜ್ಯಗಳೊಂದಿಗೆ ಇನ್ನಷ್ಟು ಸಕ್ರಿಯ ಸಮಾಲೋಚನೆ ನಡೆಸಲು ಸಲಹೆ ನೀಡಿದೆ. ಅಲ್ಲದೆ ಈ ಯೋಜನೆಯನ್ವಯ ಗ್ರಾಹಕರು ಸ್ವಯಂಪ್ರೇರಿತವಾಗಿ ಹಳೆಯ ವಾಹನಗಳನ್ನು ತ್ಯಜಿಸಲು ಮುಂದೆ ಬರಬೇಕು ಹಾಗೂ ಹೀಗೆ ಮಾಡುವವರಿಗೆ ಪ್ರೋತ್ಸಾಹ ಧನವನ್ನು ವಾಹನ ಉತ್ಪಾದಕರ ಮೂಲಕ ನೀಡಬೇಕು ಎಂದು ಸಲಹೆ ನೀಡಲಾಗಿದೆ.

ವಾಯುಮಾಲಿನ್ಯ ತಡೆಯುವ ಉದ್ದೇಶವೂ ಈ ಯೋಜನೆಯಲ್ಲಡಗಿದೆ. ಹಳೆಯ ವಾಹನದ ಬದಲು ಹೆಚ್ಚು ಮೈಲೇಜ್ ನೀಡುವ, ವಾಯುಮಾಲಿನ್ಯಕ್ಕೆ ಕಾರಣವಾಗದ ವಾಹನಗಳನ್ನು ರಸ್ತೆಗೆ ಇಳಿಸುವ ಉದ್ದೇಶವಿದೆ. ದೇಶದಲ್ಲಿ 2000ರ ಡಿ.31ಕ್ಕೆ ಮೊದಲು ಉತ್ಪಾದನೆಯಾಗಿರುವ 7,00,000ಕ್ಕೂ ಅಧಿಕ ಟ್ರಕ್, ಬಸ್ಸು ಹಾಗೂ ಟ್ಯಾಕ್ಸಿಗಳಿದ್ದು ಇವು ವಾಹನದಿಂದ ಉಂಟಾಗುವ ವಾಯುಮಾಲಿನ್ಯದ ಶೇ.15ರಿಂದ 20ರಷ್ಟು ಪ್ರಮಾಣದ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ದೇಶದ ಸಾರಿಗೆ ವಾಹನದಲ್ಲಿ ಶೇ.2.5ರಷ್ಟಿರುವ ಟ್ರಕ್ ಮತ್ತು ಬಸ್ಸುಗಳು ಶೇ.60ರಷ್ಟು ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಸಂಪುಟದ ಹಸಿರು ನಿಶಾನೆ ದೊರಕಿದರೆ ಜಾರಿಗೆ ಬರಲಿರುವ ಈ ಯೋಜನೆಯಡಿ ಮುಂದಿನ ಎರಡು-ಮೂರು ವರ್ಷಗಳಲ್ಲಿ 3,50,000 ವಾಹನಗಳು ಗುಜರಿ ಪಾಲಾಗಲಿವೆ.

ವಾಹನ ಗುಜರಿ ಕೇಂದ್ರ ಮೊದಲು ಆರಂಭಿಸಬೇಕು

ಯೋಜನೆ ಜಾರಿಗೆ ಮೊದಲು ವಾಹನ ಗುಜರಿ ಕೇಂದ್ರ ಆರಂಭಿಸಬೇಕು. ನಾಳೆಯೇ ಯೋಜನೆ ಜಾರಿಯಾಯಿತು ಎಂದುಕೊಳ್ಳೋಣ. ಆಗ ವಾಹನಗಳನ್ನು ಎಲ್ಲಿಗೆ ಸಾಗಿಸುತ್ತೀರಿ ಎಂದು ‘ಭಾರತೀಯ ಮೋಟಾರು ವಾಹನ ಉತ್ಪಾದಕರ ಸಂಘ’ದ ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ. ರಾಜ್ಯ ಸರಕಾರಗಳನ್ನು ಮೊದಲು ಒಪ್ಪಿಸಬೇಕು. ಈ ಕಾರಣದಿಂದಲೇ ಜಿಎಸ್‌ಟಿ ಕೂಡಾ ವಿಳಂಬವಾಗಿ ಜಾರಿಯಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News