ಗಬ್ಬುವಾಸನೆ ಬಿರುತ್ತಿರುವ ಪಾದಚಾರಿ ಸುರಂಗ ಮಾರ್ಗಗಳು..!

Update: 2018-10-14 17:40 GMT

ಬೆಂಗಳೂರು, ಅ. 14: ಎತ್ತ ನೋಡಿದರೂ ಕಸದ ರಾಶಿ, ದುರ್ವಾಸನೆ, ಗೋಡೆಗಳ ಮೇಲೆ ಅಶ್ಲೀಲ ಬರಹಗಳು, ಮುಂದೆ ಸಾಗಿದರೆ ಕತ್ತಲು, ಕೆಲವು ಕಡೆ ಮಳೆ ನೀರು ನಿಂತು ಹಬ್ಬಿರುವ ಪಾಚಿ. ಇದು ಕಂಡಿದ್ದು, ಬಿಬಿಎಂಪಿ ಕೇಂದ್ರ ಕಚೇರಿಗೆ ಸ್ವಲ್ಪವೇ ಅಂತರದಲ್ಲಿರುವ ಕೆ.ಆರ್.ಮಾರುಕಟ್ಟೆಯ ಪಾದಾಚಾರಿಗಳ ಸುರಂಗ ಮಾರ್ಗದಲ್ಲಿ.

ಸಿಲಿಕಾನ್ ಸಿಟಿ, ಉದ್ಯಾನ ನಗರಿ ಎಂದೆಲ್ಲಾ ಬಿಂಬಿತವಾಗಿರುವ ಬೆಂಗಳೂರಿನಲ್ಲಿ ಕೋಟ್ಯಂತರ ರೂ.ಖರ್ಚು ಮಾಡಿ ಪಾದಚಾರಿಗಳ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ 20ಕ್ಕೂ ಹೆಚ್ಚು ಪಾದಚಾರಿ ಸುರಂಗ ಮಾರ್ಗಗಳು ಸೂಕ್ತ ನಿರ್ವಹಣೆ ಇಲ್ಲದೇ ಸಂಪೂರ್ಣವಾಗಿ ಪಾಳುಬಿದ್ದಿವೆ. ಇನ್ನೂ, ಸಾರ್ವಜನಿಕರು ಇದನ್ನು ಬಳಕೆ ಮಾಡುವ ಮಾತಿರಲಿ, ಪಕ್ಕದಲ್ಲಿ ಹಾದು ಹೋಗಲು ಹಿಂದೇಟು ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಸಿಗ್ನಲ್ ಹಾಗೂ ರಸ್ತೆ ಸಂಚಾರ ನಿಯಮ ಉಲ್ಲಂಘಿಸಿ ಪ್ರತಿನಿತ್ಯ ಸಾವಿರಾರರು ಪಾದಚಾರಿಗಳು ರಸ್ತೆ ದಾಟುವ ಪರಿಣಾಮದಿಂದಾಗಿ ಅಪಘಾತಗಳ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಈ ದೃಷ್ಟಿಯಿಂದಾಗಿ ಬಿಬಿಎಂಪಿ ನಗರದ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್‌ಗಳಾದ ಕೆಆರ್ ವೃತ್ತ, ಕೆಆರ್ ಮಾರುಕಟ್ಟೆ, ಸುಜಾತಾ ಚಿತ್ರಮಂದಿರ, ಮಲ್ಲೇಶ್ವರಂ, ನೃಪತುಂಗ ರಸ್ತೆ, ಚಾಲುಕ್ಯ ಹೋಟೆಲ್, ಶೇಷಾದ್ರಿ ರಸ್ತೆ, ರಾಜಭವನ್, ಬಸವೇಶ್ವರ ಸರ್ಕಲ್,ಫೋರಂ ಮಾಲ್, ಕಬ್ಬನ್ ಪಾರ್ಕ್, ಪುರಭವನ, ವಿಜಯನಗರ, ಗಂಗಾನಗರ, ಶಿವಾಜಿ ನಗರ ಸೇರಿದಂತೆ ಹಲವಾರು ಕಡೆಗಳಲ್ಲಿ ಪಾದಚಾರಿ ಸುರಂಗ ಮಾರ್ಗಗಳನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದೆ.

ಆದರೆ, ಬೆರಳಿಣಿಕೆಯಷ್ಟು ಸುರಂಗ ಮಾರ್ಗಗಳು ಸ್ವಚ್ಛತೆಯಿಂದ ಕೊಡಿದ್ದು, ಬಾಕಿ ಸುರಂಗ ಮಾರ್ಗಗಳು ನಿರ್ವಹಣೆ ಮಾಡದ ಹಿನ್ನಲೆ ಸಾರ್ವಜನಿಕರಿಂದ ಅವುಗಳ ಬಳಕೆಯಾಗುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.

ಬೀಗ ಜಡಿದ ಬಿಬಿಎಂಪಿ: ಹೆಚ್ಚು ಸರಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಚಾರಿಸುವಂತಹ ನೃಪತುಂಗ ರಸ್ತೆ, ಬಹುಮಹಡಿ ಕಟ್ಟಡ, ಚಾಲುಕ್ಯ ವೃತ್ತ ಹಾಗೂ ರಾಜಭವನ ರಸ್ತೆಯಲ್ಲಿರುವ ಸುರಂಗ ಮಾರ್ಗಗಳು ಜನರ ಬಳಕೆಗೆ ಲಭ್ಯವಿದ್ದರೂ, ಪಾಲಿಕೆಯಿಂದಲೇ ಅವುಗಳಿಗೆ ಬೀಗ ಹಾಕಲಾಗಿದೆ. ಈ ಜಾಗಗಳಲ್ಲಿ ಇಂದಿಗೂ ಅಸುರಕ್ಷತೆಯ ಭಯದಿಂದಲೇ ಜನ ರಸ್ತೆ ದಾಟುತ್ತಿದ್ದಾರೆ.

ನಿಂತ ನೀರು: ಸಂಪೂರ್ಣ ಅವೈಜ್ಞಾನಿಕವಾಗಿ ಈ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದ್ದು, ತಗ್ಗು ಪ್ರದೇಶಗಳಾಗಿರುವುದರಿಂದ ಮಳೆ ಬಂದರೆ ರಸ್ತೆಯ ನೀರೆಲ್ಲಾ ಹರಿದು ಬಂದು ಇಲ್ಲಿಯೇ ಸಂಗ್ರಹವಾಗುತ್ತದೆ. ಮಳೆ ನೀರಿನ ಹರಿವಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಿಲ್ಲ. ಇನ್ನೂ, ಕೆಲ ದಿನಗಳ ಕಾಲ ನೀರು ನಿಲ್ಲುವುದರಿಂದ ಸುತ್ತ ಮುತ್ತ ಪ್ರದೇಶಗಳಲ್ಲಿ ಸೊಳ್ಳೆ ಕಾಟವು ಹೆಚ್ಚಾಗುತ್ತಿದೆ. ಅಲ್ಲದೇ, ಪಾಚಿ ಕಟ್ಟಿ ಸಂಪೂರ್ಣ ಬಳಕೆಗೆ ಬಾರದಂತಾಗಿವೆ ಎನ್ನುತ್ತಾರೆ ಸ್ಥಳೀಯ ನಾಗರೀಕ ಮಂಜುನಾಥ್.

ಬಹುತೇಕ ಸುರಂಗ ಮಾರ್ಗಗಳು ಶೌಚಾಲಯಗಳಾಗಿ ಮಾರ್ಪಟ್ಟಿವೆ. ನಿರ್ವಹಣೆ ಇಲ್ಲದೇ ಪಾಳು ಬಿದ್ದಿರುವುದರಿಂದ ಅನೇಕರು ಮೂತ್ರ ವಿಸರ್ಜನೆ ಬಳಸುತ್ತಿದ್ದಾರೆ. ಜತೆಗೆ ಇವುಗಳು ಸಂಪೂರ್ಣ ಕಸದ ತೊಟ್ಟಿಗಳಾಗಿ ಮಾರ್ಪಟ್ಟಿದ್ದು, ಅಕ್ಕಪಕ್ಕದ ಮನೆಯವರು, ಹೋಟೆಲ್ ವ್ಯಾಪಾರಿಗಳು ಕಸ ಹಾಗೂ ತ್ಯಾಜ್ಯವನ್ನು ಇಲ್ಲಿ ಹಾಕುತ್ತಿದ್ದಾರೆ. ಇದರಿಂದ ಸುರಂಗ ಮಾರ್ಗಗಳ ಅಕ್ಕ ಪಕ್ಕದಲ್ಲಿ ಹಾದು ಹೋಗುವಾಗಲೂ ಮೂಗು ಮಚ್ಚಿಕೊಳ್ಳುಬೇಕು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ನಗರದ ಅನೇಕ ಸೇವಾ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಯೋಜನೆ ವಿದ್ಯಾರ್ಥಿಗಳು ಆಗಾಗ ಸ್ವಚ್ಛ ಕಾರ್ಯಕ್ರಮದಡಿ ಈ ಸುರಂಗ ಮಾರ್ಗಗಳನ್ನು ಸ್ವಚ್ಛ ಮಾಡುತ್ತಾರೆ ಅದನ್ನು ಬಿಟ್ಟರೇ ಬಿಬಿಎಂಪಿ ಇತ್ತ ತಲೆಯೂ ಹಾಕುವುದಿಲ್ಲ. ಇನ್ನು ರಸ್ತೆ ಕಸಗೂಡಿಸುವ ಬಿಬಿಎಂಪಿ ಪೌರ ಕಾರ್ಮಿಕರುನ್ನು ಪ್ರಶ್ನಿಸಿದರೆ ಈ ಸುರಂಗಗಳು ನಮ್ಮ ವ್ಯಾಪ್ತಿಗೆ ಬರುವುದೇ ಇಲ್ಲ ಎಂದು ಅಸಡ್ಡೆ ಮಾತನಾಡಿ ಹೋಗುತ್ತಾರೆ ಎಂದು ಸ್ಥಳಿಯ ನಾಗರೀಕರು ಆರೋಪಿಸುತ್ತಾರೆ.

ಕೋಟಿಗಟ್ಟಲೆ ಹಣ ಖರ್ಚು ಮಾಡಿ ಈ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಇಲ್ಲ. ಸ್ವಚ್ಚತೆ ಕಾಪಾಡಿಕೊಂಡು, ಮಳೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಿ, ದೀಪಗಳನ್ನು ಹಾಕುವ ಮೂಲಕ ಬೆಳಕಿನ ವ್ಯವಸ್ಥೆ ಮಾಡಿ, ಭದ್ರತೆಗೆ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಿದಾಗ ಸಾರ್ವಜನಿಕರು ಬಳಸುತ್ತಾರೆ.
- ರೇಣುಕಾರಾಜ್ ಉದ್ಯೋಗಿ

Writer - ರವಿಕಿರಣ್ ಅಣೆದೊಡ್ಡಿ

contributor

Editor - ರವಿಕಿರಣ್ ಅಣೆದೊಡ್ಡಿ

contributor

Similar News