ಹಿಂದೂಧರ್ಮದಲ್ಲಿನ ಬ್ರಾಹ್ಮಣೇತರರು ಬೌದ್ಧಧಮ್ಮ ಸ್ವೀಕರಿಸಲು ಡಾ.ಎಲ್.ಹನುಮಂತಯ್ಯ ಕರೆ

Update: 2018-10-14 17:48 GMT

ಬೆಂಗಳೂರು, ಅ.14: ಹಿಂದೂ ಧರ್ಮದಲ್ಲಿ ಎರಡನೆ ಶ್ರೇಣಿಯಲ್ಲಿ ಅಸಮಾನತೆಯನ್ನೆ ಉಸಿರಾಗಿಸಿಕೊಂಡು ಬದುಕುತ್ತಿರುವ ವೈಶ್ಯ, ಕ್ಷತ್ರಿಯಾ, ಶೂದ್ರರು ಬೌದ್ಧ ಧಮ್ಮಕ್ಕೆ ಮತಾಂತರಗೊಳ್ಳಲಿ ಎಂದು ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಕರೆ ನೀಡಿದ್ದಾರೆ.

ರವಿವಾರ ಬುದ್ಧ ಧಮ್ಮ ಪರಿಷತ್ ನಗರದ ನಾಗಸೇನಾ ಬುದ್ಧ ವಿಹಾರ ಮೈದಾನದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ರವರ 62ನೆ ಧಮ್ಮ ದೀಕ್ಷಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಕೆಳದರ್ಜೆ ಹಾಗೂ ಮೇಲು-ಕೀಳೆಂಬ ಸಿದ್ಧಾಂತದಡಿ ಬದುಕುತ್ತಿರುವವರು ವಿವೇಕ ಶೂನ್ಯರಾಗಿರುತ್ತಾರೆ. ಇಂತವರಿಗು ಪ್ರಾಣಿಗಳಿಗೂ ಯಾವುದೆ ವ್ಯಾತ್ಯಾಸ ಇರುವುದಿಲ್ಲ. ಹೀಗಾಗಿ ಬ್ರಾಹ್ಮಣೇತರರು ಹಿಂದೂ ಧರ್ಮದಿಂದ ಹೊರ ಬಂದು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಬೌದ್ಧ ಧಮ್ಮ ಸ್ವೀಕರಿಸಬೇಕೆಂದು ಅವರು ಆಶಿಸಿದರು.

ಹಿಂದೂ ಧರ್ಮದ ಪ್ರಕಾರ ಬ್ರಾಹ್ಮಣನು ಮಾತ್ರ ಶ್ರೇಷ್ಟ. ಉಳಿದ ಕ್ಷತ್ರಿಯ, ವೈಶ್ಯ ಹಾಗೂ ಶೂದ್ರ ಸಮುದಾಯದವರು ಎರಡನೆ ದರ್ಜೆಯ ಪ್ರಜೆಗಳಾಗಿಯೆ ಬದುಕಬೇಕು. ಇದು ಅವೈಜ್ಞಾನಿಕ ಹಾಗೂ ಮನುಷ್ಯತ್ವದ ವಿರೋಧಿಯಾಗಿದೆ. ಹೀಗಾಗಿ ಡಾ.ಬಿ.ಆರ್. ಅಂಬೇಡ್ಕರ್‌ರವರು ಭೌದ್ಧ ಧಮ್ಮಕ್ಕೆ ಮತಾಂತರಗೊಳ್ಳುವ ಮೂಲಕ ದೇಶದ ಜನತೆ ನೈಜ ಬದುಕಿನ ಸಂದೇಶವನ್ನು ನೀಡಿ ಹೋಗಿದ್ದಾರೆ. ಈಗ ನಾವು ಡಾ.ಬಿ.ಆರ್. ಅಂಬೇಡ್ಕರ್ ಮಾರ್ಗದಲ್ಲಿ ಸಾಗುವ ಮೂಲಕ ವಿವೇಕಯುತವಾದ ಜೀವನ ನಡೆಸಬೇಕೆಂದು ಅವರು ಹೇಳಿದರು.

ರಾಜ್ಯದಲ್ಲಿ ದಲಿತರ ಜನಸಂಖ್ಯೆ ಒಂದು ಕೋಟಿ ಇಪ್ಪತ್ತು ಲಕ್ಷಕ್ಕಿಂತ ಹೆಚ್ಚಿದ್ದಾರೆ. ಇವರೆಲ್ಲರನ್ನು ಬೌದ್ದ ಧಮ್ಮಕ್ಕೆ ಬರಮಾಡಿಕೊಳ್ಳುವಂತಹ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಬೌದ್ಧ ಧಮ್ಮ ಸ್ವೀಕಾರ ಸಮಾರಂಭಗಳು ಸಾಲು, ಸಾಲಾಗಿ ನಡೆಯಬೇಕಿದೆ. ದಲಿತ ಸಮುದಾಯದ ನಂತರ ಶೂದ್ರ, ವೈಶ್ಯ ಸಮುದಾಯಕ್ಕೆ ಸೇರಿದವರನ್ನು ಬೌದ್ಧ ಧಮ್ಮಕ್ಕೆ ಕರೆತರುವಂತಹ ಕೆಲಸವಾಗಬೇಕೆಂದು ಅವರು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಹಿಂದೂ ಧರ್ಮಕ್ಕೆ ಅವೈಜ್ಞಾನಿಕ ನೀತಿಗಳ ವಿರುದ್ಧ ಮಾತನಾಡುವವರ ಮೇಲೆ ಹಲ್ಲೆ ಹಾಗೂ ಹತ್ಯೆ ಮಾಡಲಾಗುತ್ತಿದೆ. ಇಂತಹ ಸಂದರ್ಭದ ನಡುವೆಯೆ ದೇಶದಲ್ಲಿ ಸಮಾನತೆ, ಮುಕ್ತ ಸ್ವಾತಂತ್ರ ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಹರಡುವ ನಿಟ್ಟಿನಲ್ಲಿ ನಾವು ಎದೆಗುಂದದೆ ಕೆಲಸಗಳನ್ನು ಮಾಡಬೇಕಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬುದ್ಧ ಧಮ್ಮ ಪರಿಷತ್‌ನ ರಾಷ್ಟ್ರೀಯ ಸಂಚಾಲಕ ಡಾ.ಎಂ. ವೆಂಕಟಸ್ವಾಮಿ, ಬುದ್ಧ ಧಮ್ಮಾ ಪರಿಷತ್‌ನ ಅಧ್ಯಕ್ಷ ಡಾ.ಎಚ್.ಆರ್.ಸುರೇಂದ್ರ, ಬಿಎಸ್ಪಿ ಸಂಯೋಜಕ ಮಾರಸಂದ್ರ ಮುನಿಯಪ್ಪ, ದಲಿತ ಚಿಂತಕ ಬಿ.ಗೋಪಾಲ್, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಸುಮಿತ್ರಾ ಮತ್ತಿರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News