ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ; ಪುನರ್ ಪರಿಶೀಲನಾ ಅರ್ಜಿಗೆ ಪಟ್ಟು

Update: 2018-10-14 17:52 GMT

ಬೆಂಗಳೂರು, ಅ.14: ಶಬರಿಮಲೆಯ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಕೇರಳ ಸರಕಾರ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಅಯ್ಯಪ್ಪ ಭಕ್ತಾದಿಗಳು ಒತ್ತಾಯಿಸಿದ್ದಾರೆ.

ರವಿವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ರಾಷ್ಟ್ರೀಯ ಹಿಂದೂ ಆಂದೋಲನ ನೇತೃತ್ವದಲ್ಲಿ ಅಯ್ಯಪ್ಪ ಭಕ್ತ ಮಂಡಳಿ ಸದಸ್ಯರು, ಹಿಂದೂ ಸಂಘಟನೆ ಕಾರ್ಯಕರ್ತರು ಮೌನ ಪ್ರತಿಭಟನೆ ನಡೆಸಿದರು.

ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೆ ಅವಕಾಶ ಕಲ್ಪಿಸುವ ತೀರ್ಪಿನಿಂದ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯಕ್ಕೆ ಧಕ್ಕೆ ಆಗಲಿದ್ದು, ಕೂಡಲೇ ಈ ತೀರ್ಪನ್ನು ಹಿಂಪಡೆಯಬೇಕು. ಅಲ್ಲದೆ, ಈಗಾಗಲೇ, ಕೊಚ್ಚಿ, ಹೊಸದಿಲ್ಲಿ, ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಆಂದೋಲನದ ಸಂಚಾಲಕ ಮೋಹನ್ ಹೇಳಿದರು.

ಇಡೀ ದೇಶವನ್ನು ಒಗ್ಗೂಡಿಸಿದ ಶಕ್ತಿಯ ಕ್ಷೇತ್ರವೆಂದರೆ ಶಬರಿಮಲೆ ಅಯ್ಯಪ್ಪ ದೇವಸ್ಥಾನ. ಪರಂಪರೆಯಿಂದ ಬಂದ ಜನತೆಯ ನಂಬಿಕೆಗೆ ಧಕ್ಕೆ ತರುವ ಕೆಲಸ ಸುಪ್ರೀಂ ಕೋರ್ಟ್ ತೀರ್ಪಿನ ಮೂಲಕ ಆಗಿದ್ದು, ಭಕ್ತಾದಿಗಳ ಬೇಡಿಕೆ ಈಡೇರಿಸಲು ಕೇರಳ ಸರಕಾರ ಮುಂದಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News