×
Ad

ಶೀಘ್ರದಲ್ಲೆ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಜಾರಿ: ಸಚಿವ ಶಿವಶಂಕರರೆಡ್ಡಿ

Update: 2018-10-15 20:05 IST

ಬೆಂಗಳೂರು, ಅ. 15: ಮಿತ ನೀರಿನ ಬಳಕೆ ಮತ್ತು ಆಧುನಿಕ ತಾಂತ್ರಿಕತೆಯ ಇಸ್ರೇಲ್ ಮಾದರಿಯ ಕೃಷಿ ಪದ್ಧತಿಯನ್ನು ಮುಂದಿನ ತಿಂಗಳಿಂದ ರಾಜ್ಯದಲ್ಲಿ ಜಾರಿಗೆ ತರಲಾಗುವುದು ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿನ ತನ್ನ ಕಚೇರಿಯಲ್ಲಿ ಕೃಷಿ ಬೆಳೆಗಳಿಗೆ ತಗುಲುವ ಕೀಟಬಾಧೆ ಬಗ್ಗೆ ಮಾಹಿತಿ ನೀಡುವ ಅತ್ಯಾಧುನಿಕವಾದ ಪ್ಲಾಂಟಿಕ್ಸ್ ಮೊಬೈಲ್ ಅಪ್ಲಿಕೇಷನ್ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಇಸ್ರೇಲ್ ಮಾದರಿ ಕೃಷಿ ಪದ್ಧತಿಯ ಬಗ್ಗೆ ಈಗಾಗಲೇ ವರದಿ ಸಿದ್ಧಪಡಿಸಿದ್ದು ಶೀಘ್ರದಲ್ಲೆ ಮುಖ್ಯಮಂತ್ರಿಗೆ ಸಲ್ಲಿಕೆ ಮಾಡಲಾಗುವುದು ಎಂದರು.

ಇಸ್ರೇಲ್ ಮಾದರಿ ಕೃಷಿ ಅತ್ಯಂತ ಪರಿಣಾಮಕಾರಿ, ಲಾಭದಾಯಕ ಎಂಬುದು ಗೊತ್ತಾಗಿದೆ. ರಾಜ್ಯ ಸರಕಾರ ನಾಲ್ಕು ಮಾದರಿಗಳನ್ನು ಆಯ್ಕೆ ಮಾಡಿಕೊಂಡು ಅದನ್ನು ಪ್ರಾಯೋಗಿಕವಾಗಿ ರಾಜ್ಯದಲ್ಲಿ ಜಾರಿಗೆ ತರಲು ಉದ್ದೇಶಿಸಿದೆ ಎಂದ ಅವರು ಇದೇ ವೇಳೆ ಹೇಳಿದರು.

250ರಿಂದ 300 ಮಂದಿ ರೈತರ ಗುಂಪು ರಚಿಸಿ ಅವರ ಜಮೀನಿನಲ್ಲಿ ಒಂದೇ ರೀತಿ ಬೆಳೆ ಬೆಳೆಯವ ಪ್ರಸ್ತಾವನೆ ಇದೆ. ಇದರಿಂದ ಕೀಟಬಾಧೆ ಮತ್ತು ಪೋಷಕಾಂಶದ ನಿರ್ವಹಣೆ, ಮಾರುಕಟ್ಟೆ, ಕೂಲಿ ಕಾರ್ಮಿಕರ ಸಮಸ್ಯೆ ಎಲ್ಲವೂ ಬಗೆಹರಿಯಲಿವೆ. ಯಾವ ಭಾಗದಲ್ಲಿ ಯಾವ ರೀತಿಯ ಬೆಳೆಗಳನ್ನು ಗುರುತಿಸಲಾಗಿದೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗುವುದರಿಂದ ಬೆಲೆಯಲ್ಲಿ ಏರುಪೇರು ತಡೆಗಟ್ಟಲು ಸಾಧ್ಯ ಎಂದು ವಿವರಿಸಿದರು.

ಕೃಷಿ ವಿಶ್ವ ವಿದ್ಯಾಲಯಗಳು ಮತ್ತು ಸರಕಾರದ ಅಧೀನದಲ್ಲಿರುವ ಕೃಷಿ ಫಾರಂಗಳಲ್ಲಿ ಇಸ್ರೇಲ್ ಮಾದರಿಯ ವೈಜ್ಞಾನಿಕ ಕೃಷಿ ಪದ್ಧತಿ ಮತ್ತು ಸಲಕರಣೆಗಳನ್ನು ಅಳವಡಿಸಲಾಗುವುದು. ಜತೆಗೆ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶನ ಮಾಡಿ ರೈತರಿಗೆ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಕೆರೆ ಅಚ್ಚುಕಟ್ಟು ಪ್ರದೇಶಗಳಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ. ಅಲ್ಲಿ ನೀರಿನ ಮಿತವ್ಯಯದ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಲಾಗುವುದು. ಬಯಲು ಪ್ರದೇಶದಲ್ಲಿ ವೈಜ್ಞಾನಿಕ ಹನಿ ನೀರಾವರಿ ಪದ್ಧತಿಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೀಟಬಾಧೆಯ ಸಮಗ್ರ ಮಾಹಿತಿ ನೀಡುವ ಪ್ಲಾಂಟಿಕ್ಸ್ ಮೊಬೈಲ್ ಅಪ್ಲಿಕೇಷನ್ ನಂತಹ ವೈಜ್ಞಾನಿಕ ಪದ್ಧತಿಯನ್ನು ಬಳಸಿಕೊಂಡು ರೈತರಿಗೆ ಕಾಲ-ಕಾಲಕ್ಕೆ ಮಾಹಿತಿ ನೀಡಿ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದಾಯಕವಾಗುವ ಬೆಳೆಗಳನ್ನು ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

‘ಕೃಷಿ ಬೆಳೆಗಳಿಗೆ ತಗುಲುವ ಕೀಟಬಾಧೆ ಬಗ್ಗೆ ಸಮಗ್ರ ಮಾಹಿತಿ ನೀಡುವ ಅತ್ಯಾಧುನಿಕ ಪ್ಲಾಂಟಿಕ್ಸ್ ಮೊಬೈಲ್ ಅಪ್ಲಿಕೇಷನನ್ನು ಜರ್ಮನ್ ಕಂಪೆನಿ, ಇಂಟರ್ ನ್ಯಾಷನಲ್ ಕ್ರಾಪ್ಸ್ ರೀಸರ್ಚ್ ಇನ್ಸ್‌ಟಿಟ್ಯೂಟ್ ಫಾರ್ ದಿ ಸೆಮಿ ಅರೈಡ್ ಟ್ರಾಫಿಕ್ಸ್ ಸಂಸ್ಥೆಗಳ ಆಶ್ರಯದಲ್ಲಿ ನಿರ್ಮಿಸಿದ್ದು, ಈ ಅಪ್ಲಿಕೇಷನ್‌ನಿಂದ ರೈತರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ರೈತರು ರೋಗಬಾಧಿತ ಯಾವುದೇ ಬೆಳೆಯ ಫೋಟೋವನ್ನು ಅಪ್ಲಿಕೇಷನ್‌ಗೆ ಅಪ್‌ಲೋಡ್ ಮಾಡಿದರೆ ಅದು ತನ್ನ ಕೃತಕ ಬುದ್ಧಿವಂತಿಕೆಯಿಂದ ರೋಗವನ್ನು ಗುರುತಿಸಿ ನಿರ್ವಹಣಾ ಕ್ರಮವನ್ನು ತಿಳಿಸಲಿದೆ’

-ಎನ್.ಎಚ್.ಶಿವಶಂಕರ ರೆಡ್ಡಿ ಕೃಷಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News