ಇನ್ನೂ 14 ತಾಲೂಕುಗಳು ಬರಪೀಡಿತ: ಆರ್.ವಿ.ದೇಶಪಾಂಡೆ

Update: 2018-10-15 16:26 GMT

ಬೆಂಗಳೂರು, ಅ.15: ಈಗಾಗಲೇ ಬರಪೀಡಿತವೆಂದು ಘೋಷಿಸಲಾಗಿರುವ 86 ತಾಲೂಕುಗಳ ಜೊತೆಗೆ ಇನ್ನೂ 14 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಸೋಮವಾರ ಆದೇಶ ಹೊರಡಿಸಲಾಗಿದೆ. ಇದರೊಂದಿಗೆ, 2018-19ನೆ ಸಾಲಿನ ಮುಂಗಾರು ಹಂಗಾಮಿನ ಅವಧಿಗೆ ಸಂಬಂಧಿಸಿದಂತೆ ಘೋಷಿಸಲಾದ ಬರಪೀಡಿತ ತಾಲೂಕುಗಳ ಸಂಖ್ಯೆ 100ಕ್ಕೇರಿದಂತಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಈಗ ಹೊಸದಾಗಿ ಆನೇಕಲ್, ದೇವನಹಳ್ಳಿ, ದೊಡ್ಡಬಳ್ಳಾಪುರ, ತುರುವೇಕೆರೆ, ಹೊಳಲ್ಕೆರೆ, ಹೊಸದುರ್ಗ, ದಾವಣಗೆರೆ, ಜಗಳೂರು, ಪಾಂಡವಪುರ, ಔರಾದ್, ಬಸವಕಲ್ಯಾಣ, ಅಥಣಿ, ಬೀಳಗಿ ಮತ್ತು ಮುಧೋಳ ತಾಲೂಕುಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರವು ಪ್ರಕಟಿಸಿರುವ 2016ರ ಬರ ಕೈಪಿಡಿ ಮತ್ತು ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಕಡ್ಡಾಯಪಡಿಸಿರುವ ಅಂಶಗಳ ಪ್ರಕಾರ ಈ ತಾಲೂಕುಗಳು ಬರಪೀಡಿತವಾಗಿವೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

ಈ ತಾಲೂಕುಗಳಲ್ಲಿ ಭೂ ರಹಿತ ಕಾರ್ಮಿಕರು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಒದಗಿಸುವುದು. ಕುಡಿಯುವ ನೀರು ಪೂರೈಕೆ, ಜಾನುವಾರುಗಳಿಗೆ ಮೇವು ಸರಬರಾಜು ಮುಂತಾದ ಬರ ಪರಿಹಾರ ಕಾರ್ಯಗಳನ್ನು ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗ ಸೂಚಿಯ ಪ್ರಕಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಜೊತೆಗೆ ಈ ಪ್ರದೇಶಗಳಲ್ಲಿ ಆಗಿರುವ ಬೆಳೆಹಾನಿ ಬಗ್ಗೆ ಕೂಡಲೇ ಜಂಟಿ ಸಮೀಕ್ಷೆ ನಡೆಸಿ, ಸರಕಾರಕ್ಕೆ ವರದಿ ಸಲ್ಲಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ದೇಶಪಾಂಡೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News