ಯುವಜನತೆಗೆ ಸದಾ ಓದುವ ಹವ್ಯಾಸವಿರಲಿ: ಚಂದ್ರಶೇಖರ ಕಂಬಾರ

Update: 2018-10-15 16:28 GMT

ಬೆಂಗಳೂರು, ಅ.15: ಇಂದಿನ ಯುವಜನತೆ ಸಾಮಾಜಿಕ ಜಾಲತಾಣ, ಮೊಬೈಲ್ ಹಾಗೂ ಪುಸ್ತಕ ರೂಪದಲ್ಲಿ ಯಾವುದರಲ್ಲಾದರು ಸದಾ ಓದುವಂತಹ ಹವ್ಯಾಸ ರೂಢಿಸಿಕೊಳ್ಳಲಿ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಆಶಿಸಿದ್ದಾರೆ.

ಸೋಮವಾರ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಬೆಂಗಳೂರು ಪುಸ್ತಕ ಮಾರಾಟಗಾರರು ಹಾಗೂ ಪ್ರಕಾಶಕರ ಅಸೋಸಿಯೇಷನ್ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರು ಪುಸ್ತಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ಯುವಕರು ಮೊಬೈಲ್‌ಗೆ ದಾಸರಾಗಿದ್ದಾರೆ ಎಂಬ ಆರೋಪಗಳಿವೆ. ಆದರೆ, ಮೊಬೈಲ್‌ನ್ನು ಬಳಸುವುದಕ್ಕಾಗಿ ವಿರೋಧಿಸುವುದು ಬೇಡ. ಮೊಬೈಲ್‌ನಲ್ಲೂ ತಮಗೆ ಇಷ್ಟವಾದ ಲೇಖಕ, ಲೇಖಕಿಯರ ಬರಹಗಳನ್ನು ಓದುವಂತಾಗಲಿ ಎಂದು ತಿಳಿಸಿದರು.

ಇವತ್ತಿನ ವಿಷಮಯ ವಾತಾವರಣದಲ್ಲಿ ಎಲ್ಲರ ಮನಸ್ಥಿತಿಗಳು ಹಾಳಾಗುತ್ತಿವೆ. ಇದಕ್ಕೆ ಪುಸ್ತಕಗಳು ಔಷಧಿಗಳಾಗಬಹುದು. ಪುಸ್ತಕಗಳನ್ನು ಓದುವ ಮೂಲಕ ಉತ್ತಮ ಅರಿವನ್ನು ಪಡೆದು ಜವಾಬ್ದಾರಿಯುತ ನಾಗರಿಕರಾಗಿ ಬದುಕುವಂತಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿರುವ ಪುಸ್ತಕೋತ್ಸವದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಅವರು ಹೇಳಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ವಸುಂಧರಾ ಭೂಪತಿ ಮಾತನಾಡಿ, ಅ.15ರಿಂದ 21ರವರೆಗೆ ನಗರದ ಆರಮನೆ ಮೈದಾನದಲ್ಲಿ ಆಯೋಜಿಸಿರುವ ಪುಸ್ತಕೋತ್ಸವದಲ್ಲಿ ಆರೋಗ್ಯ, ವಿಜ್ಞಾನ, ಪರಿಸರ ಸೇರಿದಂತೆ ಸಾಹಿತ್ಯ ಹಾಗೂ ಸಾಹಿತ್ಯೇತರ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕೋತ್ಸವದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

10 ಲಕ್ಷ ಪುಸ್ತಕಗಳು: ನಗರದ ಸತ್ರಿಪುರವಾಸಿನಿ ಮೈದಾನದಲ್ಲಿ ಸುಮಾರು 250ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕನ್ನಡ, ತಮಿಳು, ಇಂಗ್ಲಿಷ್, ಹಿಂದಿ, ಸಂಸ್ಕೃತ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳ ಪುಸ್ತಕಗಳು ಓದುಗರನ್ನು ಕೈಬೀಸಿ ಕರೆಯುತ್ತಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಮಾರಾಟಕ್ಕೆ ಇಡಲಾಗಿದೆ. ಹೊಸ ಲೇಖಕರ ಪುಸ್ತಕಗಳು ಇಂದಿನ ಯುವಜನಾಂಗದ ಓದುಗರನ್ನು ಆಕರ್ಷಿಸುತ್ತಿವೆ. ಸಾಹಿತ್ಯ, ಕಾದಂಬರಿ, ನಾಟಕ, ಅಡುಗೆ ರುಚಿ, ಮನೆ ಔಷಧಿ, ಆಧ್ಯಾತ್ಮಿಕ ಪುಸ್ತಕಗಳು, ಯೋಗ, ಪ್ರಾಣಾಯಾಮ, ಧ್ಯಾನ ಕುರಿತ ಲಕ್ಷಾಂತರ ಪುಸ್ತಕಗಳು ಒಂದೇ ಸೂರಿನಡಿ ಲಭ್ಯವಿದೆ.

ಪುಸ್ತಕ ಪ್ರೇಮಿಗಳಿಗೆ ಮನರಂಜನೆ ನೀಡಲೆಂದು ಪ್ರತಿದಿನ ಸಂಜೆ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ.16 ಹಾಗೂ 17ರಂದು ಕನ್ನಡ ಸಾಹಿತ್ಯೋತ್ಸವ ನಡೆಯಲಿದೆ. ನಿತ್ಯವೂ ಹೊಸ ಕೃತಿಗಳ ಲೋಕಾರ್ಪಣೆ, ಕವಿಗೋಷ್ಠಿ, ಕೈಬರಹ ಕಾರ್ಯಾಗಾರ, ರಸಪ್ರಶ್ನೆ ಸ್ಪರ್ಧೆ ಹಾಗೂ ಪದಬಂಧ ಸ್ಪರ್ಧೆಗಳು ನಡೆಯಲಿವೆ.

-ವಸುಂಧರಾ ಭೂಪತಿ ಅಧ್ಯಕ್ಷೆ, ಕನ್ನಡ ಪುಸ್ತಕ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News