ಕನ್ನಡ ನಾಡಿನಲ್ಲಿ ಹುಟ್ಟಿರುವುದೇ ಹೆಮ್ಮೆ: ಸಚಿವ ಝಮೀರ್ ಅಹ್ಮದ್ ಖಾನ್

Update: 2018-10-15 16:30 GMT

ಬೆಂಗಳೂರು, ಅ.15: ಕನ್ನಡ ನುಡಿಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಐತಿಹಾಸಿಕ ಹಿನ್ನೆಲೆಯುಳ್ಳ ನಮ್ಮ ಭಾಷೆಯನ್ನು ಮಾತನಾಡುತ್ತಿರುವುದೇ ಹೆಮ್ಮೆಯ ವಿಚಾರವಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು.

ಸೋಮವಾರ ನಗರದ ಕಬ್ಬನ್‌ಪೇಟೆಯಲ್ಲಿರುವ ಅಬ್ಬಾಸ್ ಖಾನ್ ಮಹಿಳಾ ಪದವಿ ಕಾಲೇಜಿನಲ್ಲಿ ನಡೆದ ಎನ್ನೆಸೆಸ್ ಚಟುವಟಿಕೆಗಳ ಕೈಪಿಡಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕನ್ನಡ ನಾಡಿನಲ್ಲಿ ಹುಟ್ಟಿರುವುದೇ ಹೆಮ್ಮೆಯ ವಿಚಾರವಾಗಿರುವಾಗ, ಕನ್ನಡ ಭಾಷೆಯಲ್ಲಿಯೇ ಕಾರ್ಯಕ್ರಮಗಳನ್ನು ನಡೆಸಿಕೊಡುವುದಕ್ಕೆ ಹಿಂದೇಟು ಹಾಕುವುದು ಏಕೆ ಎಂದು ಪ್ರಶ್ನಿಸಿದ ಅವರು, ಕನ್ನಡ ಶಾಲೆಯಲ್ಲಿ ಕಲಿತವರು ಉನ್ನತ ಸಾಧನೆ ಮಾಡಿದ್ದಾರೆ. ಆದರೆ, ಶಾಲಾ ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳನ್ನು ಕನ್ನಡದ ಭಾಷೆಯಲ್ಲಿ ನಡೆಸಿಕೊಡುವುದಕ್ಕೆ ಹಿಂದೇಟು ಹಾಕುವುದು ಸರಿಯಲ್ಲ ಎಂದರು.

ಸರಕಾರ ಅಲ್ಪಸಂಖ್ಯಾತ ಸಮುದಾಯದ ಬಡ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ. ಅಲ್ಲದೇ, ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಬಡ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿವೆ. ಈ ಎಲ್ಲ ಸೌಲಭ್ಯಗಳನ್ನು ಪಡೆದು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಸಬಿಹಾ ಝುಬೇರ್ ಖಾನ್, ಪ್ರೊ.ಝುಬೇದಾ ಬೇಗಮ್, ಸಿ.ಎಮ್.ಎ ಸಂಸ್ಥೆಯ ಉಪಾಧ್ಯಕ್ಷ ಜಾವೀದ್ ಅಹ್ಮದ್ ಖಾನ್, ಕಾರ್ಯದರ್ಶಿ ಸೈಯ್ಯದ್ ಮುರ್ತುಝಾ ಹುಸೇನ್ ಸೇರಿದಂತೆ ಮತ್ತಿತರರಿದ್ದರು.

ಹೆಣ್ಣು ಮಕ್ಕಳು ಓದು-ಬರಹ ಕಲಿತು ಏನು ಸಾಧಿಸಬೇಕಿದೆ ಎಂಬ ಮನೋಭಾವನೆ ಮುಸ್ಲಿಂ ಸಮುದಾಯದ ಜನರಲ್ಲಿದೆ. ಇಂತಹ ಕೀಳು ಮನೋಭಾವನೆಯಿಂದಾಗಿ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ.

-ಝಮೀರ್ ಅಹ್ಮದ್ ಖಾನ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News