ಜನಾರ್ದನರೆಡ್ಡಿ, ಶ್ರೀರಾಮುಲುಗೆ ‘ಕೈ’ ಮುಖಂಡರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ: ಎಸ್.ಮನೋಹರ್

Update: 2018-10-15 16:49 GMT

ಬೆಂಗಳೂರು, ಅ. 15: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲಿಗೆ ಹೋಗಿಬಂದ ಜನಾರ್ದನರೆಡ್ಡಿ ಹಾಗೂ ಅಕ್ರಮ ಹಣದಲ್ಲಿ ರಾಜಕೀಯ ಮಾಡುವ ಶ್ರೀರಾಮುಲುಗೆ ಕಾಂಗ್ರೆಸ್ ಮುಖಂಡರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಎಸ್.ಮನೋಹರ್ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ಜನಾರ್ದನ ರೆಡ್ಡಿ, ರಾಮುಲು ಹೇಳಿಕೆಯನ್ನು ಖಂಡಿಸಿ ಪ್ರತಿಕೃತಿ ದಹನ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ರೆಡ್ಡಿ, ರಾಮುಲು ಮನಸೋ ಇಚ್ಛೆ ಮಾತನಾಡುತ್ತಿದ್ದಾರೆಂದು ಟೀಕಿಸಿದರು.

ಬಳ್ಳಾರಿ ರೆಡ್ಡಿ, ರಾಮುಲು ರಾಜಕೀಯ ಹಾಗೂ ದೌರ್ಜನ್ಯಗಳಿಂದ ಬೇಸತ್ತ ಜಿಲ್ಲೆಯ ಜನತೆ ಕಾಂಗ್ರೆಸ್ ಪಕ್ಷ ಬೆಂಬಲಿಸಿದ್ದಾರೆ. ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಜೈಲು ಸೇರಿದ ರೆಡ್ಡಿ ಯೋಗ್ಯತೆ ದೇಶಕ್ಕೆ ಗೊತ್ತಿದೆ. ಇನ್ನು ರಾಮುಲು ಅಧಿಕಾರಕ್ಕಾಗಿ ರಾಜೀನಾಮೆ ನೀಡಿದ್ದು, ಉಪ ಚುನಾವಣೆ ಎದುರಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮುಖಂಡರನ್ನು ಜೈಲಿಗೆ ಕಳುಹಿಸುವ ದುರಹಂಕಾರದ ಹೇಳಿಕೆ ನೀಡುವ ಶ್ರೀರಾಮುಲು, ತಾವು ಮತ್ತು ತಮ್ಮ ಸ್ನೇಹಿತ ರೆಡ್ಡಿ ಜೈಲಿಗೆ ಹೋಗಿದ್ದೇಕೆ ಎಂಬುದನ್ನು ಅರಿತುಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಕೂಡಲೇ ತಮ್ಮ ಹೇಳಿಕೆ ಹಿಂಪಡೆಯದಿದ್ದರೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.

ಪ್ರತಿಭಟನೆ ನೇತೃತ್ವವನ್ನು ಕೆಪಿಸಿಸಿ ಮುಖಂಡರಾದ ಸಲೀಂ, ಮುಳಗುಂದ, ಇ.ಶೇಖರ್, ಆನಂದ್, ಮುರುಳಿ, ಬಾಬು, ರಾಜು, ಹೇಮರಾಜ್, ದರ್ಶನ್, ಆಶಾರಾಜ್, ಕೋಕಿಲ ಇನ್ನಿತರರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News