ಎಟಿಎಂ ಕಾರ್ಡ್ ಮಾಹಿತಿ ಕದ್ದು ವಂಚನೆ: ಇಬ್ಬರು ಆರೋಪಿಗಳ ದಸ್ತಗಿರಿ

Update: 2018-10-15 16:51 GMT

ಬೆಂಗಳೂರು, ಅ. 15: ಸುಳ್ಳು ಮಾಹಿತಿ ನೀಡಿ ವ್ಯಾಪಾರಸ್ಥರಿಂದ ಎಟಿಎಂ ಕಾರ್ಡ್ ಮಾಹಿತಿ ಕದ್ದು, ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಶಿವಮೊಗ್ಗ ಮೂಲದ ರಾಘವೇಂದ್ರ ಯಾನೆ ರಘು (24) ಹಾಗೂ ಚಿಕ್ಕಬಳ್ಳಾಪುರ ಮೂಲದ ರಾಕೇಶ್‌ಕುಮಾರ್ ಯಾನೆ ರಾಕಿ(24) ಎಂದು ಗುರುತಿಸಲಾಗಿದೆ.

ಆರೋಪಿಗಳು ವ್ಯವಸ್ಥಿತವಾಗಿ ಒಟಿಪಿ ಸಂದೇಶ, ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ವ್ಯಾಪಾರಸ್ಥರಿಂದ ಕದ್ದು ಆನ್‌ಲೈನ್ ಮೂಲಕ ವ್ಯವಹಾರ ನಡೆಸಿ ಬ್ಯಾಂಕ್ ಖಾತೆಗಳಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡು ವ್ಯಾಪಾರಸ್ಥರನ್ನು ವಂಚಿಸುತ್ತಿದ್ದರು ಎಂದು ತಿಳಿಸಲಾಗಿದೆ.

ಬಂಧಿತರಿಂದ ಒಂದು ಕಾರು, ಬೈಕ್, ಏಳು ಮೊಬೈಲ್‌ ಫೋನ್‌ಗಳು, 5 ಎಟಿಎಂ ಕಾರ್ಡ್‌ಗಳು, ಎರಡು ಪ್ರತ್ಯೇಕ ಸಿಮ್ ಕಾರ್ಡ್‌ಗಳು, ಚಾಲ್ತಿಯಲ್ಲಿದ್ದ ಸ್ವೈಪಿಂಗ್ ಮಿಷಿನ್ ಸೇರಿ ಒಟ್ಟು 4 ಲಕ್ಷ ರೂ.ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

‘ಸಾರ್ವಜನಿಕರು ಯಾವುದೇ ವ್ಯಕ್ತಿಯ ಮಾತುಗಳಿಗೆ ಮರುಳಾಗಿ ತಮ್ಮ ಮೊಬೈಲ್, ಎಟಿಎಂ ಕಾರ್ಡ್ ಅಥವಾ ಓಟಿಪಿ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ನೀಡಬೇಡಿ. ತಮ್ಮ ಅರಿವಿಗೆ ಬಾರದಂತೆ ಕೆಲ ಆ್ಯಪ್‌ಗಳನ್ನು ಅಳವಡಿಸಿ ಅವುಗಳ ಸಹಾಯದಿಂದ ನಿಮಗೆ ತಿಳಿಯದೆ ನಿಮ್ಮ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮಾಡಿ ವಂಚಿಸುವ ಸಾಧ್ಯತೆಗಳಿವೆ. ಹೀಗಾಗಿ ವಂಚನೆಗೊಳಗಾಗದಂತೆ ಜಾಗೃತೆ ವಹಿಸಬೇಕು ಎಂದು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News